ಲೋಕ ಅದಾಲತ್‌: ರಾಜ್ಯದಲ್ಲಿ 8.34 ಲಕ್ಷ ಪ್ರಕರಣ ಇತ್ಯರ್ಥ; ಅದಾಲತ್‌ ಬಗ್ಗೆ ಅಪಪ್ರಚಾರ ಮಾಡದಂತೆ ನ್ಯಾ. ವೀರಪ್ಪ ಮನವಿ

ಕಾರವಾರದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 42 ವರ್ಷದಿಂದ ಬಾಕಿ ಇದ್ದ ವಿಭಾಗ (ಪಾರ್ಟಿಷನ್) ದಾವೆಯನ್ನು ಇತ್ಯರ್ಥಪಡಿಸಿರುವುದು ಈ ಬಾರಿಯ ರಾಷ್ಟ್ರೀಯ ಅದಾಲತ್‌ನ ವಿಶೇಷಗಳಲ್ಲಿ ಒಂದಾಗಿದೆ.
KSLSA Executive Chairman Justice B Veerappa and other office bearers of KSLSA
KSLSA Executive Chairman Justice B Veerappa and other office bearers of KSLSA

ರಾಜ್ಯದಾದ್ಯಂತ ಶನಿವಾರ (ಆಗಸ್ಟ್‌ 13) ನಡೆದ ಪ್ರಸಕ್ತ ವರ್ಷದ ಮೂರನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ದಾಖಲೆಯ ಒಟ್ಟು 8,34,620 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಮಹತ್ವದ ಸಾಧನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಅಧ್ಯಕ್ಷರು ಹಾಗೂ ಕರ್ನಾಟಕ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ತಿಳಿಸಿದರು.

ಕೆಎಸ್‌ಎಲ್‌ಎಸ್‌ಎಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ದಾವೆ ಪೂರ್ವದ 6,81,596 ಪ್ರಕರಣಗಳು ಹಾಗೂ 1,53,024 ಬಾಕಿ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.

ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ 1,009 ಪೀಠಗಳು ಹಾಗೂ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿ 10 ಪೀಠಗಳನ್ನು ರಚಿಸಲಾಗಿತ್ತು. ಜಿಲ್ಲಾ ನ್ಯಾಯಾಂಗದಲ್ಲಿ 1,51,273 ಬಾಕಿ ಪ್ರಕರಣಗಳು ಹಾಗೂ ಹೈಕೋರ್ಟ್‌ನಲ್ಲಿನ 751 ಬಾಕಿ ಪ್ರಕರಣಗಳು ಪ್ರಸಕ್ತ ಅದಾಲತ್‌ನಲ್ಲಿ ಇತ್ಯರ್ಥವಾಗಿವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ವಿವರಿಸಲಾಗಿದೆ.

  • ದಾವೆ ಪೂರ್ವ ಪ್ರಕರಣಗಳ ಪೈಕಿ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ 2,46,890 ಪ್ರಕರಣಗಳನ್ನು ಇತ್ಯರ್ಥಪಡಿಸಿ 14,35,10,566 ಕೋಟಿ ರೂಪಾಯಿ ಸಂಗ್ರಹಿಸಿ ಕೊಡಲಾಗಿದೆ.

  • ಖಾತೆ ಬದಲಾವಣೆ, ಗುರುತಿನ ಚೀಟಿ ನೀಡುವುದು, ಪೆನ್ಷನ್‌ ಇತ್ಯಾದಿಯಂಥ 94,446 ದಾವೆ ಪೂರ್ವ ಪ್ರಕರಣಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಗಳ ನೆರವಿನಿಂದ ವಿಲೇವಾರಿ ಮಾಡಲಾಗಿದೆ.

  • ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲಕ್ಕೆ ಸಂಬಂಧಿಸಿದ 8,571 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 25,08,33,360 ವಸೂಲಿ ಮಾಡಿಕೊಡಲಾಗಿದೆ.

  • 95,756 ವಿದ್ಯುತ್‌ ಬಿಲ್‌ ಬಾಕಿ ಪ್ರಕರಣ ಮತ್ತು 78,716 ನೀರಿನ ಬಿಲ್‌ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಕ್ರಮವಾಗಿ 13,58,15,559 ಮತ್ತು 13,86,19,435 ಕೋಟಿ ರೂಪಾಯಿ ವಸೂಲಿಗೆ ದಾರಿ ಸುಗಮಗೊಳಿಸಲಾಗಿದೆ.

  • ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ ಮತ್ತು ರಿಯಲ್‌ ಎಸ್ಟೇಟ್‌ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವ 80 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, 48,40,000 ರೂಪಾಯಿ ಪರಿಹಾರ ಪಾವತಿಸಲು ಸೂಚಿಸಲಾಗಿದೆ.

  • ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿನ 77 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಗ್ರಾಹಕರ ಆಯೋಗದಲ್ಲಿ ಬಾಕಿ ಇದ್ದ 136 ಪ್ರಕರಣಗಳನ್ನು ಇತ್ಯರ್ಥಪಡಿಸಿ, 3,01,34,406 ಕೋಟಿ ರೂಪಾಯಿ ಪಾವತಿಸಲು ಸೂಚಿಸಲಾಗಿದೆ.

  • 1,380 ವೈವಾಹಿಕ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಿ, 120 ಜೋಡಿಗಳನ್ನು ಒಂದು ಮಾಡಲಾಗಿದೆ. ಮೈಸೂರಿನಲ್ಲಿ ವಿಚ್ಛೇದನ ಕೋರಿ ದಾವೆ ಹೂಡಿದ್ದ 27 ದಂಪತಿ ಹಾಗೂ ಬೆಂಗಳೂರಿನ 12 ದಂಪತಿಯನ್ನು ಒಂದುಗೂಡಿಸಲಾಗಿದೆ.

  • ರಾಜ್ಯದಾದ್ಯಂತ ಇರುವ ಸಿವಿಲ್‌ ನ್ಯಾಯಾಲಯಗಳು ಒಟ್ಟು 7,670 ಪ್ರಕರಣಗಳನ್ನು ರಾಜಿಯಲ್ಲಿ ಅಂತ್ಯಗೊಳಿಸಿವೆ. 2,967 ಮೋಟಾರು ವಾಹನ ಕ್ಲೇಮು ಪ್ರಕರಣಗಳನ್ನು ಬಗೆಹರಿಸಲಾಗಿದ್ದು, 125,47,35,879 ರೂಪಾಯಿ ಪರಿಹಾರ ಕೊಡಿಸಲಾಗಿದೆ.

  • 7,178 ವರ್ಗಾವಣೀಯ ಲಿಖಿತಗಳ ಕಾಯಿದೆ (ಎನ್‌ಐ) ಸಂಬಂಧಿತ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 266,75,12,358 ರೂಪಾಯಿ ಪರಿಹಾರ ಕೊಡಿಸಲಾಗಿದೆ. ಬೆಂಗಳೂರಿನ ನ್ಯಾಯಾಲಯ ಒಂದರಲ್ಲಿ (ಎಸ್‌ಸಿಎಚ್‌ಎಚ್‌-12) ಎನ್‌ಐ ಕಾಯಿದೆ ಅಡಿ ಬಾಕಿ ಇದ್ದ 607 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

  • ಕಾರವಾರದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 42 ವರ್ಷದಿಂದ ಬಾಕಿ ಇದ್ದ ವಿಭಾಗ (ಪಾರ್ಟಿಷನ್) ದಾವೆಯನ್ನು ಇತ್ಯರ್ಥಪಡಿಸಿರುವುದು ಈ ಬಾರಿಯ ರಾಷ್ಟ್ರೀಯ ಅದಾಲತ್‌ನ ವಿಶೇಷಗಳಲ್ಲಿ ಒಂದಾಗಿದೆ.

ಅದಾಲತ್‌ನಿಂದ ಕೆಲವರಿಗೆ ಸಂಕಟ:‌ ನ್ಯಾ. ಬಿ ವೀರಪ್ಪ

“ರಾಷ್ಟ್ರೀಯ ಲೋಕ ಅದಾಲತ್‌ನಿಂದ ಕೆಲವರಿಗೆ ಸಂಕಟವಾಗುತ್ತಿದೆ. ಇದಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾರಿಗಾದರೂ ಏನಾದರೂ ಅನುಮಾನಗಳು ಇದ್ದರೆ ಕೆಎಸ್‌ಎಲ್‌ಎಸ್‌ಎ ಸಂಪರ್ಕಿಸಬಹುದು” ಎಂದು ನ್ಯಾ. ವೀರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ತಹಶೀಲ್ದಾರ್‌ ಅವರ ಮುಂದೆ ಇರುವ ಖಾತೆ ಬದಲಾವಣೆ ವಿಚಾರ ಇತ್ಯರ್ಥಪಡಿಸಿದರೆ ಅದು ಹೇಗೆ ಕ್ಷುಲ್ಲಕ ಪ್ರಕರಣವಾಗುತ್ತದೆ? ಇವೆಲ್ಲವೂ ದಾವೆ ಪೂರ್ವ ಪ್ರಕರಣಗಳಾಗಿವೆ. ಹೀಗಾಗಿ, ಆರಂಭಿಕ ಹಂತದಲ್ಲೇ ಇತ್ಯರ್ಥಪಡಿಸಲಾಗುತ್ತದೆ. ಲೋಕ ಅದಾಲತ್‌ ಬಗ್ಗೆ ಜನರಲ್ಲಿ ವ್ಯಾಪಕ ಅರಿವು ಉಂಟಾಗಿದ್ದು, ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಕೆಲವರಿಗೆ ಸಂಕಟ ಉಂಟು ಮಾಡಿದೆ. ನಾವೆಲ್ಲರೂ ಜನರ ಸೇವೆ ಮಾಡುತ್ತಿದ್ದೇವೆ. ಕೆಲವರು ಇದಕ್ಕೆ ಏಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾರೂ ಅಪಪ್ರಚಾರ ಮಾಡಬಾರದು. ಏನಾದರೂ ಅನುಮಾನಗಳಿದ್ದರೆ ನಮ್ಮನ್ನು ಸಂಪರ್ಕಿಸಬಹುದು” ಎಂದು ಮನವಿ ಮಾಡಿದರು.

Related Stories

No stories found.
Kannada Bar & Bench
kannada.barandbench.com