[ಲೋಕ ಅದಾಲತ್‌] 14 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥ; ₹1,282 ಕೋಟಿ ಪರಿಹಾರ ಪಾವತಿಗೆ ಕ್ರಮ: ನ್ಯಾ. ವೀರಪ್ಪ

ಜಿಲ್ಲಾ ನ್ಯಾಯಾಲಯಗಳ 1,013 ಪೀಠಗಳು, ಹೈಕೋರ್ಟ್‌ನ 8 ಪೀಠ ಸೇರಿ ಒಟ್ಟು 1,021 ಪೀಠಗಳು ಅದಲಾತ್ ನಡೆಸಿ ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 14,77,285 ಪ್ರಕರಣಗಳನ್ನು ರಾಜ್ಯದಲ್ಲಿ ಸಂಧಾನದ ಮೂಲಕ ಇತ್ಯರ್ಥಪಡಿಸಿವೆ.
[ಲೋಕ ಅದಾಲತ್‌] 14 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥ; ₹1,282 ಕೋಟಿ ಪರಿಹಾರ ಪಾವತಿಗೆ ಕ್ರಮ: ನ್ಯಾ. ವೀರಪ್ಪ

ರಾಜ್ಯದಾದ್ಯಂತ ನವೆಂಬರ್‌ 12ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 14.77 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಈವರೆಗಿನ ಲೋಕ ಅದಾಲತ್‌ಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆಯಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ.

ಹೈಕೋರ್ಟ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ ವೀರಪ್ಪ ಅವರು ಈ ಬಾರಿಯ ಲೋಕ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡಿದರು.

14 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥ: ಜಿಲ್ಲಾ ನ್ಯಾಯಾಲಯಗಳ 1,013 ಪೀಠಗಳು ಹಾಗೂ ಹೈಕೋರ್ಟ್‌ನ 8 ಪೀಠಗಳು ಸೇರಿ ರಾಜ್ಯದಾದ್ಯಂತ ಒಟ್ಟು 1,021 ಪೀಠಗಳು ಅದಾಲತ್ ನಡೆಸಿ ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 1,76,501 ಪ್ರಕರಣಗಳು ಹಾಗೂ 13,00,784 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 14,77,285 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿವೆ. ಜತೆಗೆ, ಸಾರ್ವಜನಿಕರಿಗೆ ₹1,282 ಕೋಟಿ ಪರಿಹಾರ ಕೊಡಿಸಲಾಗಿದೆ. ಹಿಂದಿನ ಲೋಕ ಅದಾಲತ್‌ಗಳಿಗೆ ಹೋಲಿಸಿದರೆ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ನ್ಯಾ. ವೀರಪ್ಪ ತಿಳಿಸಿದರು.

ಟ್ರಾಫಿಕ್ ಪ್ರಕರಣದಲ್ಲಿ 23 ಕೋಟಿ ದಂಡ ಸಂಗ್ರಹ: ಪೊಲೀಸರ ಮನವಿಯಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಬಾಕಿ ವಸೂಲಾತಿ ಪ್ರಕರಣಗಳಲ್ಲಿ ಲೋಕ ಅದಾಲತ್ ನೋಟಿಸ್ ನೀಡಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 4,16,775 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, ₹23,89,38,021 ದಂಡ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ಅಪಘಾತ ಪ್ರಕರಣಗಳಲ್ಲಿ 300 ಕೋಟಿಗೂ ಅಧಿಕ ಪರಿಹಾರ: ಒಟ್ಟು 3,384 ಮೋಟಾರು ಅಪಘಾತ ಪ್ರಕರಣಗಳನ್ನು ₹324,37,78,172 ಪರಿಹಾರದೊಂದಿಗೆ ಇರ್ತ್ಯಪಡಿಸಲಾಗಿದೆ. ಕೊಪ್ಪಳದ ಮೋಟಾರು ಅಪಘಾತ ಪರಹಾರ ನ್ಯಾಯ ಮಂಡಳಿಯಲ್ಲಿ (ಎಂಎಸಿಟಿ) ಬಾಕಿ ಇದ್ದ ಪ್ರಕರಣವೊಂದರಲ್ಲಿ ₹55 ಲಕ್ಷ ಪರಿಹಾರ ಪಾವತಿಸಿ ಇತ್ಯರ್ಥಪಡಿಸಲಾಗಿದ್ದರೆ, ಕೋಲಾರದ ಮುಳಬಾಗಿಲು ತಾಲ್ಲೂಕಿನ ಎಂಎಸಿಟಿಯಲ್ಲಿನ ಪ್ರಕರಣವನ್ನು ₹41 ಲಕ್ಷ ಪರಿಹಾರದೊಂದಿಗೆ ವಿಲೇವಾರಿ ಮಾಡಲಾಗಿದೆ.

ಒಂದೇ ಚೆಕ್ ಬೌನ್ಸ್ ಕೇಸ್‌ನಲ್ಲಿ 32 ಕೋಟಿ ಪರಿಹಾರ: ಲೋಕ ಅದಾಲತ್‌ನಲ್ಲಿ ನೆಗೋಷಿಯಬಲ್ ಇನ್ಸ್‌ಟ್ರುಮೆಂಟ್ ಕಾಯಿದೆಯ (ವರ್ಗಾವಣೀಯ ಲಿಖಿತಗಳು- ಚೆಕ್ ಬೌನ್ಸ್) 10,994 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು ₹328,94,26,020 ಪರಿಹಾರ ಕೊಡಿಸಲಾಗಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವೊಂದರಲ್ಲಿ ₹32 ಕೋಟಿ ಪರಿಹಾರ ಮೊತ್ತದೊಂದಿಗೆ ಪ್ರಕರಣ ಇತ್ಯರ್ಥಪಡಿಸಲಾಗಿದೆ.

ಮುರಿದ ಸಂಬಂಧಗಳ ಬೆಸೆದ ಅದಾಲತ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಉತ್ತೇಜಿಸಲಾಗಿತ್ತು. ಈ ಬಾರಿಯ ಲೋಕ ಅದಾಲತ್‌ನಲ್ಲಿ ಒಟ್ಟು 1,460 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಅಂದಾಜು 178 ಪ್ರಕರಣಗಳಲ್ಲಿ ದಂಪತಿ ಸಂಧಾನದಿಂದ ಮತ್ತೆ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ. ವಿಚ್ಛೇದನ ಬಯಸಿದ್ದ ಬೆಂಗಳೂರಿನ 32, ಮೈಸೂರಿನ 29, ಬೆಳಗಾವಿಯ 18 ಹಾಗೂ ಧಾರವಾಡದ 17 ದಂಪತಿ ಸೇರಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ದಂಪತಿಗಳು ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ. ಮುರಿದು ಹೋಗುತ್ತಿದ್ದ ಸಂಬಂಧಗಳನ್ನು ಮತ್ತೆ ಒಟ್ಟುಗೂಡಿಸಿದ ಸಂತೋಷ ನಮಗಿದೆ ಎನ್ನುತ್ತಾರೆ ನ್ಯಾಯಮೂರ್ತಿ ವೀರಪ್ಪ.

ಕಂದಾಯ ಅಧಿಕಾರಿಗಳೊಂದಿಗೆ ಸಮನ್ವಯ: ಖಾತೆ ಬದಲಾವಣೆ, ಗುರುತಿನ ಚೀಟಿ ವಿತರಣೆ, ಪಿಂಚಣಿ ಮುಂತಾದ ಕಂದಾಯ ಅಧಿಕಾರಿಗಳ ಮುಂದೆ ಬಾಕಿ ಇದ್ದ ಪ್ರಕರಣಗಳನ್ನೂ ವ್ಯಾಜ್ಯಪೂರ್ವ ಪ್ರಕರಣಗಳಾಗಿ ತೆಗೆದುಕೊಂಡು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಸೇವೆಗಳ ಸಮಿತಿಗಳಲ್ಲಿ ಒಟ್ಟು 2,65,391 ಪ್ರಕರಣಗಳನ್ನು ವಿಲೇವಾರಿ ಮಾಡಲು ಕಂದಾಯ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸಲಾಗಿದೆ.

ಇತ್ಯರ್ಥಗೊಂಡ ಇತರೆ ಪ್ರಕರಣಗಳು

  • ಒಟ್ಟು 2,887 ಪಾರ್ಟಿಷನ್ ಸೂಟ್ (ವಿಭಾಗ ದಾವೆ) ಪ್ರಕರಣಗಳನ್ನು ₹26 ಕೋಟಿ ಪರಿಹಾರದ ಮೊತ್ತದೊಂದಿಗೆ ವಿಲೇವಾರಿ ಮಾಡಲಾಗಿದೆ.

  • ಬ್ಯಾಂಕ್ ವಸೂಲಾತಿಗೆ ಸಂಬಂಧಿಸಿದ 9,383 ಪ್ರಕರಣಗಳಲ್ಲಿ ಒಟ್ಟು ₹63,52,18,988 ವಸೂಲಿ ಮಾಡಿ ಇತ್ಯರ್ಥಪಡಿಸಲಾಗಿದೆ.

  • ವಿದ್ಯುತ್ ಬಿಲ್ ವಸೂಲಾತಿಗೆ ಸಂಬಂಧಿಸಿದ 1,28,276 ಪ್ರಕರಣಗಳಲ್ಲಿ ₹18,00,29,438 ಹಾಗೂ 2,88,977 ನೀರಿನ ಬಿಲ್ ವಸೂಲಾತಿ ಪ್ರಕರಣಗಳಲ್ಲಿ ₹27,15,80,029 ವಸೂಲಿ ಮಾಡಲಾಗಿದೆ.

  • ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಹಾಗೂ ಕರ್ನಾಟಕ ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ (ಕೆ-ರೀಟ್) ಬಾಕಿಯಿದ್ದ ಒಟ್ಟು 175 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹11 ಕೋಟಿ ಪರಿಹಾರ ನೀಡಲಾಗಿದೆ.

  • ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ 202 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದ್ದು, ₹5.94 ಕೋಟಿ ಪರಿಹಾರ ಪಾವತಿಸಲಾಗಿದೆ.

  • ಅದಾಲತ್‌ನಲ್ಲಿ 39 ವಾಣಿಜ್ಯ ದಾವೆಗಳನ್ನು ಸಂಧಾನದ ಮೂಲಕ ಬಗೆಹರಿಸಲಾಗಿದ್ದು, ಒಟ್ಟು ₹1.44 ಕೋಟಿ ಪರಿಹಾರ ನೀಡಲಾಗಿದೆ.
    ಚಿಕ್ಕಮಗಳೂರಿನ 1ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಪ್ರಕರಣವೊಂದನ್ನು ₹1.32 ಕೋಟಿ ಮೊತ್ತದೊಂದಿಗೆ ಇತ್ಯರ್ಥಪಡಿಸಲಾಗಿದೆ.

  • ಬಾಗಲಕೋಟೆಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 84 ಭೂಸ್ವಾಧೀನ ಪ್ರಕರಣಗಳನ್ನು ₹1.77 ಕೋಟಿ ಮೊತ್ತದೊಂದಿಗೆ ಬಗೆಹರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com