![[ಮುಡಾ ಪ್ರಕರಣ] ಲೋಕಾಯುಕ್ತ ಪೊಲೀಸರು ಇ ಡಿ ತನಿಖಾಂಶಗಳನ್ನು ಪರಿಗಣಿಸಿಲ್ಲ: ಹೈಕೋರ್ಟ್‌ನಲ್ಲಿ ಇ ಡಿ ವಾದ](http://cf-images.assettype.com/barandbench-kannada%2F2026-04-06%2Fplxlu9bb%2FWhatsApp-Image-2024-09-30-at-20.18.17.jpeg?w=480&auto=format%2Ccompress&fit=max)
![[ಮುಡಾ ಪ್ರಕರಣ] ಲೋಕಾಯುಕ್ತ ಪೊಲೀಸರು ಇ ಡಿ ತನಿಖಾಂಶಗಳನ್ನು ಪರಿಗಣಿಸಿಲ್ಲ: ಹೈಕೋರ್ಟ್‌ನಲ್ಲಿ ಇ ಡಿ ವಾದ](http://cf-images.assettype.com/barandbench-kannada%2F2026-04-06%2Fplxlu9bb%2FWhatsApp-Image-2024-09-30-at-20.18.17.jpeg?w=480&auto=format%2Ccompress&fit=max)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮೂಡಾ) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅಕ್ರಮ ನಿವೇಶನ ಹಂಚಿಕೆ ಆರೋಪ ಪ್ರಕರಣದ ಸಂಬಂಧ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿರುವ ಲೋಕಾಯುಕ್ತ ತನಿಖಾಧಿಕಾರಿಗಳು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಹಲವು ಅಂಶಗಳನ್ನು ಪರಿಗಣಿಸಿಲ್ಲಎಂದು ಇ ಡಿ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಿದೆ.
ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಮತ್ತು ಮೂಲ ಖಾಸಗಿ ದೂರುದಾರನಾದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು “ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಹಲವು ಅಂಶಗಳನ್ನು ಲೋಕಾಯುಕ್ತ ತನಿಖಾಧಿಕಾರಿ ಪರಿಗಣಿಸಿಲ್ಲ. ಕಾನೂನುಬಾಹಿರ ಡಿನೋಟಿಫಿಕೇಷನ್ ಬಗ್ಗೆ ತನಿಖೆ ಸಮರ್ಪಕವಾಗಿಲ್ಲ ಹಾಗೂ ಭೂ ಪರಿವರ್ತನೆ ಕಾನೂನುಬಾಹಿರ ಎಂಬುದನ್ನು ಪರಿಗಣಿಸಿಲ್ಲ. ಹೀಗಾಗಿ, ಬಿ ರಿಪೋರ್ಟ್ ಮಾನ್ಯ ಮಾಡಿರುವ ವಿಶೇಷ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದರು.
ಕೆಲ ಕಾಲ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ 2024ರ ಜುಲೈ 3 ರಂದು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ದೂರು ಸಲ್ಲಿಸಿದ್ದರು. ನಂತರ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರಿಂದ ಪೂರ್ವಾನುಮತಿ ಕೋರಿದ್ದರು. ಸುದೀರ್ಘ ಪರಿಶೀಲನೆಯ ನಂತರ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆಗಸ್ಟ್ 17 ರಂದು ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದ್ದರು.
ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ಏಕಸದಸ್ಯ ಪೀಠದ ಮೊರೆ ಹೋಗಿದ್ದರಾದರೂ, ಆಗಸ್ಟ್ 19 ರಂದು ಅವರ ಮಧ್ಯಂತರ ಮನವಿ ತಿರಸ್ಕರಿಸಿತು. ತದನಂತರ 2024ರ ಸೆಪ್ಟೆಂಬರ್ 24 ರಂದು ಏಕಸದಸ್ಯ ಪೀಠವು ರಾಜ್ಯಪಾಲರ ಕ್ರಮ ಕಾನೂನುಬದ್ಧವಾಗಿದೆ ಎಂದು ಎತ್ತಿಹಿಡಿದು, ಕಡ್ಡಾಯ ಪೊಲೀಸ್ ತನಿಖೆಗೆ ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅಕ್ರಮ ಸಾಬೀತಾಗಿಲ್ಲಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ ’ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ. ಅದನ್ನು ಪ್ರಶ್ನಿಸಿ ಇಡಿ ಮತ್ತು ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದಾರೆ.