ಭ್ರಷ್ಟಾಚಾರ ಪ್ರಕರಣಗಳಿಂದ ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಬುಚ್‌ ಅವರನ್ನು ಖುಲಾಸೆಗೊಳಿಸಿದ ಲೋಕಪಾಲ್‌

ಆಗಸ್ಟ್ ಮತ್ತು ಅಕ್ಟೋಬರ್ 2024ರ ನಡುವೆ ಬೇರೆ ಬೇರೆ ದೂರುದಾರರು ಮೂರು ಮನವಿಗಳನ್ನು ಸಲ್ಲಿಸಿದ್ದು, ಎಲ್ಲವೂ ಸೆಬಿಯಲ್ಲಿ ಬುಚ್ ಅವರ ಅಧಿಕಾರಾವಧಿಯನ್ನು ಗುರಿಯಾಗಿಸಿಕೊಂಡಿದ್ದವು.
SEBI and Madhabi Buch
SEBI and Madhabi Buch
Published on

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ದಾಖಲಾಗಿದ್ದ ಮೂರು ಭ್ರಷ್ಟಾಚಾರದ ದೂರುಗಳನ್ನು ಭಾರತೀಯ ಲೋಕಪಾಲ್ ವಜಾಗೊಳಿಸಿದ್ದು, ಭ್ರಷ್ಟಾಚಾರ ತಡೆ ಕಾಯಿದೆ- 1988ರ ಅಡಿಯಲ್ಲಿ ತನಿಖೆ ನಡೆಸಲು ಸಾಕಷ್ಟು ಸಾಕ್ಷ್ಯಗಳು ಇಲ್ಲ ಎಂದು ತೀರ್ಪು ನೀಡಿದೆ.

ಆರೋಪಗಳು ಬಹುತೇಕ ಊಹೆಯಿಂದ ಕೂಡಿದ್ದು ಪರಿಶೀಲಿಸಬಹುದಾದ ಸಾಕ್ಷ್ಯಗಳಿಂದ ಬೆಂಬಲಿತವಾಗಿಲ್ಲ ಎಂದು ಮೇ 28, 2025ರಂದು ಹೊರಡಿಸಲಾದ ಸಮಗ್ರ ಆದೇಶದಲ್ಲಿ, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಆರು ಸದಸ್ಯರ ಲೋಕಪಾಲ್ ಪೀಠ ಹೇಳಿದೆ.

Also Read
ಸೆಬಿ ಮಾಜಿ ಮುಖ್ಯಸ್ಥೆ ಬುಚ್ ಹಾಗೂ ಇತರರ ವಿರುದ್ಧ ನೀಡಲಾಗಿದ್ದ ಎಫ್ಐಆರ್ ಆದೇಶಕ್ಕೆ ಬಾಂಬೆ ಹೈಕೋರ್ಟ್ ತಡೆ

ಮಾಧವಿ ಅವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ವಿವಿಧ ಆರೋಪಗಳನ್ನು ಮಾಡಿ ಆಗಸ್ಟ್ 10, 2024 ರಂದು ಹಿಂಡೆನ್‌ಬರ್ಗ್‌ ರಿಸರ್ಚ್ ವರದಿ ಬಹಿರಂಗಪಡಿಸಿತ್ತು. ಇದನ್ನು ಆಧರಿಸಿ ಆಗಸ್ಟ್ ಮತ್ತು ಅಕ್ಟೋಬರ್ 2024ರ ನಡುವೆ ಪ್ರತ್ಯೇಕ ದೂರುದಾರರು ಮೂರು ಮನವಿಗಳನ್ನು ಸಲ್ಲಿಸಿದ್ದರು,

ಅದಾನಿ ಕಂಪೆನಿ ಸಮೂಹವನ್ನು ಬಯಲಿಗೆಳೆಯುವ ಅಥವಾ ಮೂಲೆಗುಂಪು ಮಾಡುವ ಗುರಿ ಹೊಂದಿದ್ದ ಹಿಂಡೆನ್ ಬರ್ಗ್ ವರದಿಯನ್ನು ದೂರುಗಳು ಆಧರಿಸಿದೆ ಎಂದಿರುವ ಲೋಕಪಾಲ್‌ ಮೂಲ ಸಾಕ್ಷ್ಯಗಳ ವಿಶ್ವಾಸಾರ್ಹತೆ ಬಗ್ಗೆ ಕಳವಳ ಇದೆ ಎಂಬುದಾಗಿ ಹೇಳಿದೆ.

ಅದಾನಿ ಎಂಟರ್‌ಪ್ರೈಸಸ್ ನಿರ್ದೇಶಕರಿಗೆ ಸಂಬಂಧಿಸಿದ ನಿಧಿಯಲ್ಲಿ ಬುಚ್ ಮತ್ತು ಅವರ ಪತಿ ಮಾಡಿದ ₹5 ಕೋಟಿ ಹೂಡಿಕೆಯ ಕುರಿತಂತೆ ಲೋಕಪಾಲ್‌, '2020ರಲ್ಲಿ ಸೆಬಿ ತನ್ನ ಅದಾನಿ ತನಿಖೆ ಆರಂಭಿಸುವ ಮುನ್ನವೇ 2018ರಲ್ಲಿ ಹಣವನ್ನು ಮರುಪಾವತಿಸಲಾಗಿದೆ. ಹಾಗಾಗಿ ಆರೋಪ ವಿಫಲವಾಗಬೇಕುʼ ಎಂದಿದೆ.

ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಗೆ ಮಸುಕು ಮಾಡಲಾಗಿರುವ ವ್ಯಾಪಕ ಮಾಹಿತಿ ನೀಡಲಾಗಿದೆ ಎನ್ನುವ ವಾದಗಳನ್ನು ಅದು ತಳ್ಳಿಹಾಕಿತು. ಇದು "ನಿಜವಾಗಿಯೂ ಸುಪ್ರೀಂ ಕೋರ್ಟ್‌ನ ಶೋಧನೆಗಳನ್ನು ಪ್ರಶ್ನಿಸಲು ನಡೆಸಿರುವ ಪರೋಕ್ಷ ಪ್ರಯತ್ನವಾಗಿದೆ. ಅಂತಹ ಪ್ರಯತ್ನದಲ್ಲಿ ನಾವು ಪಕ್ಷಕಾರರಾಗಲು ಸಾಧ್ಯವಿಲ್ಲ" ಎಂದು ಹೇಳಿದೆ.

ಬುಚ್ ಅವರ ಪತಿ ಧವಲ್ ಬುಚ್, ಮಹೀಂದ್ರಾ & ಮಹೀಂದ್ರಾ (ಎಂ & ಎಂ) ಗ್ರೂಪ್‌ನಿಂದ ಸಲಹಾ ಶುಲ್ಕವಾಗಿ ₹4.78 ಕೋಟಿಗೂ ಹೆಚ್ಚು ಪಡೆದಿದ್ದಾರೆ ಎಂಬುದು ಕೂಡ ಊಹಾತ್ಮಕ ಮತ್ತು ಕ್ಷುಲ್ಲಕ ಆರೋಪ ಎಂದಿದೆ.  

Also Read
ಸೆಬಿ ಮಾಜಿ ಮುಖ್ಯಸ್ಥೆ ಬುಚ್ ಹಾಗೂ ಇತರರ ವಿರುದ್ಧ ನೀಡಲಾಗಿದ್ದ ಎಫ್ಐಆರ್ ಆದೇಶಕ್ಕೆ ಬಾಂಬೆ ಹೈಕೋರ್ಟ್ ತಡೆ

ಮತ್ತೊಂದೆಡೆ ವೊಕ್ಹಾರ್ಡ್ ಲಿಮಿಟೆಡ್‌ಗೆ ಸಂಬಂಧಿಸಿದ ಕರೋಲ್ ಇನ್ಫೋ ಸರ್ವೀಸಸ್ ಲಿಮಿಟೆಡ್‌ನಿಂದ ಬುಚ್ ಬಾಡಿಗೆ ಆದಾಯ ಪಡೆದಿದ್ದಾರೆ ಎಂಬ ಆರೋಪಗಳನ್ನೂ ಲೋಕಪಾಲ್ ತಿರಸ್ಕರಿಸಿದ್ದು ಇದು ನಂಬಲಾಗದ ಸಂಗತಿ ಎಂದಿದೆ.

ದೂರುದಾರರಲ್ಲಿ ಒಬ್ಬರಾದ ಮಹುವಾ ಮೊಯಿತ್ರಾ ಅವರನ್ನು ವಕೀಲ ಪ್ರಶಾಂತ್ ಭೂಷಣ್ ಪ್ರತಿನಿಧಿಸಿದ್ದರು. ಬುಚ್ ಪರವಾಗಿ ಹಿರಿಯ ವಕೀಲ ಅರವಿಂದ್ ಪಿ ದಾತಾರ್ ವಾದ ಮಂಡಿಸಿದ್ದರು.

Kannada Bar & Bench
kannada.barandbench.com