ಕೈಗಾರಿಕೋದ್ಯಮಿಗಳಿಂದ ಕಪ್ಪುಹಣ ಪಡೆದ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ದೂರನ್ನು ಪರಿಗಣಿಸಲು ಭಾರತದ ಲೋಕಪಾಲ್ ಶುಕ್ರವಾರ ನಿರಾಕರಿಸಿದೆ.
ಪ್ರಧಾನಿ ವಿರುದ್ಧದ ಆರೋಪಗಳು "ಮೇಲ್ನೋಟಕ್ಕೆ ನಂಬಲಸಾಧ್ಯವಾದವು" ಎಂದು ಲೋಕಪಾಲ್ ಅಭಿಪ್ರಾಯಪಟ್ಟಿದೆ.
ಮೇ 8 ರಂದು ತೆಲಂಗಾಣದ ಕರೀಂನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮೋದಿಯವರ ಭಾಷಣದ ವಿರುದ್ಧ ದೂರು ಸಲ್ಲಿಸಲಾಗಿತ್ತು. ಕೋಟ್ಯಾಧಿಪತಿ ಭಾರತೀಯ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯಿಂದ ಕಾಂಗ್ರೆಸ್ ಹಣ ಪಡೆದಿರಬಹುದೇ ಎಂದು ಅವರು ಪ್ರಶ್ನಿಸಿದ್ದರು.
ಭಾಷಣದ ಅಂತರಾರ್ಥವನ್ನು ಲೋಕಪಾಲ್ ಸಮರ್ಥಿಸಿಕೊಂಡಿದೆ. ಇದು ಕೇವಲ ಊಹೆಯಾಗಿದ್ದು ಅದರ ಆಧಾರದ ಮೇಲೆ ಎದುರಾಳಿಯನ್ನು ಪ್ರಶ್ನಿಸುವ ಮೂಲಕ ಅವರನ್ನು ಹತ್ತಿಕ್ಕುವ ಚುನಾವಣಾ ಪ್ರಚಾರವಾಗಿದೆ ಎಂದು ಅದು ನುಡಿದಿದೆ.
ಪ್ರಧಾನಿಯವರ ಭಾಷಣ ಭ್ರಷ್ಟಾಚಾರದ ಆರೋಪ ಮಾಡಿಲ್ಲ ಎಂದು ಲೋಕಪಾಲ್ ತಿಳಿಸಿದೆ.
ಈ ಹೇಳಿಕೆ ಗಾಳಿಯಲ್ಲಿ ನಡೆಸಿದ ಗುದ್ದಾಟದಂತೆ ಇರಬಹುದು. ಯಾವುದೇ ಮಾನದಂಡದಿಂದ ನೋಡಿದರೂ ಇಂತಹ ಊಹೆಯ ಪ್ರಶ್ನೆ ಲೋಕಪಾಲ್ ಮತ್ತೊಂದು ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧ ಭ್ರಷ್ಟಾಚಾರವನ್ನು ಪರಿಶೀಲಿಸಬೇಕು ಎನ್ನುವಂತಹ ಆರೋಪಗಳಿಂದ ಕೂಡಿದೆ ಎನ್ನಲಾಗದು ಎಂದಿದೆ.
ಲೋಕಪಾಲ್ ಸಂಸ್ಥೆಯ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ಥಿ, ಎಲ್ ನಾರಾಯಣ ಸ್ವಾಮಿ ಮತ್ತು ಸಂಜಯ್ ಯಾದವ್, ಸದಸ್ಯರಾದ ಸುಶೀಲ್ ಚಂದ್ರ (ನಿವೃತ್ತ ಮುಖ್ಯ ಚುನಾವಣಾ ಆಯುಕ್ತ), ಪಂಕಜ್ ಕುಮಾರ್ ಹಾಗೂ ಅಜಯ್ ಟಿರ್ಕೆ ಅವರನ್ನೊಳಗೊಂಡ ಪೂರ್ಣ ಪೀಠ ಈ ಆದೇಶ ನೀಡಿದೆ.
"ಈ ಆರೋಪವು ಮೇಲ್ನೋಟಕ್ಕೆ ಅತಿಶಯವಾದದ್ದು ... ಏಕೆಂದರೆ, ಭಾಷಣದಲ್ಲಿ ಎಲ್ಲಿಯೂ ಭಾಷಣಕಾರರು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಗುಪ್ತಚರ ಮೂಲಗಳಿಂದ ಅಂತಹ ವಾಸ್ತವಿಕ ಮಾಹಿತಿಯನ್ನು ಸ್ವೀಕರಿಸಿದ್ದಾರೆ ಅಥವಾ ಸಂಗ್ರಹಿಸಿದ್ದಾರೆ ಎಂದು ಯಾವುದೇ ಉಲ್ಲೇಖವಿಲ್ಲ. ನಮ್ಮ ಅಭಿಪ್ರಾಯದಲ್ಲಿ, ಭಾಷಣದ ಪಠ್ಯವು ಸಂಪೂರ್ಣವಾಗಿ ಊಹೆ ಮತ್ತು ಊಹೆ ಅಥವಾ ಕಾಲ್ಪನಿಕ ಪ್ರಶ್ನಾವಳಿಯ ಅಭಿವ್ಯಕ್ತಿಯಾಗಿದ್ದು ಈ ಆರೋಪಗಳು ನಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಪ್ರಧಾನಿ ಮೋದಿ ಅವರ ವಿರುದ್ಧದ ಅರ್ಜಿ ಹುರುಳಿಲ್ಲದ ಮತ್ತು ಮೂರ್ತವಲ್ಲದ ಸಾಕ್ಷ್ಯವನ್ನು ಆಧರಿಸಿದೆ ಎಂದ ಲೋಕಪಾಲ್ ಅದನ್ನು ವಜಾಗೊಳಿಸಿತು.
ಪ್ರಧಾನಿ ಮೋದಿಯವರ ಭಾಷಣವನ್ನು ಆಧರಿಸಿ, ರಾಹುಲ್ ಗಾಂಧಿ, ಅಪರಿಚಿತ ಟೆಂಪೋ ಮಾಲೀಕರು ಮತ್ತು ಇಬ್ಬರು ಕೈಗಾರಿಕೋದ್ಯಮಿಗಳ ವಿರುದ್ಧ ತನಿಖೆ ನಡೆಸುವಂತೆಯೂ ದೂರಿನಲ್ಲಿ ಕೋರಲಾಗಿತ್ತು. ಈ ಕೋರಿಕೆಯನ್ನು ಸಹ ಲೋಕಪಾಲ್ ವಜಾಗೊಳಿಸಿತು.
ಭ್ರಷ್ಟಾಚಾರದ ಈ ವ್ಯಕ್ತಿಗಳ ವಿರುದ್ಧದ ದೂರು ಅವಾಸ್ತವ ಮತ್ತು ಪರಿಶೀಲಿಸಲಾಗದ ಸಂಗತಿಗಳನ್ನು ಆಧರಿಸಿದೆ ಎಂದು ಅದು ತಿಳಿಸಿದೆ.
ತಾನು ತಾಂತ್ರಿಕ ಕಾರಣಗಳಿಗೆ ಕಟ್ಟುಬೀಳದೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಎಲ್ಲಾ ಪ್ರಮುಖ ವ್ಯಕ್ತಿಗಳ ವಿರುದ್ಧ ಅವರ ಹುದ್ದೆಯನ್ನೂ ಲೆಕ್ಕಿಸದೆ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಲೋಕಪಾಲ್ ಇದೇ ವೇಳೆ ಸ್ಪಷ್ಟಪಡಿಸಿದೆ.