ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ: ಅಕ್ರಮ ಮಂದಿರ ಕೆಡವಲು ದೆಹಲಿ ಹೈಕೋರ್ಟ್ ಅನುಮತಿ

ಯಮುನಾ ನದಿಯ ಅತಿಕ್ರಮಿತ ಜಾಗ ಮತ್ತು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದರೆ ಶಿವನಿಗೆ ಸಂತೋಷವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
Delhi High Court
Delhi High Court

ದೇವರಾದ ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ ಎಂದಿರುವ ದೆಹಲಿ ಹೈಕೋರ್ಟ್‌ ಯಮುನಾ ಪ್ರವಾಹ ಪ್ರದೇಶದಲ್ಲಿರುವ ಶಿವ ದೇವಾಲಯವನ್ನು ಕೆಡವಲು ಬುಧವಾರ ಅನುಮತಿ ನೀಡಿದೆ [ಪ್ರಾಚೀನ್‌ ಶಿವ ಮಂದಿರ್‌ ಏವಂ ಅಖಾಡ ಸಮಿತಿ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಇನ್ನಿತರರ ನಡುವಣ ಪ್ರಕರಣ].

ಜನರಾದ ನಮಗೆ ಶಿವನ ಶ್ರೀರಕ್ಷೆ ಅಗತ್ಯವಿದೆ. ಜೊತೆಗೆ ಯಮುನಾ ನದಿಯ ಅತಿಕ್ರಮಿತ ಜಾಗ ಮತ್ತು ಅಕ್ರಮ  ಕಟ್ಟಡಗಳನ್ನು ತೆರವುಗೊಳಿಸಿದರೆ ಶಿವನಿಗೆ ಸಂತೋಷವಾಗುತ್ತದೆ ಎಂದು ನ್ಯಾ. ಧರ್ಮೇಶ್‌ ಶರ್ಮ ಅವರಿದ್ದ ಪೀಠ ತಿಳಿಸಿದೆ.

“ದೇಗುಲದಲ್ಲಿ ಆರಾಧಿತನಾಗುವ ಶಿವನನ್ನು ಪ್ರಸ್ತುತ ಪ್ರಕರಣದಲ್ಲಿ ಪಕ್ಷಕಾರನನ್ನಾಗಿ ಮಾಡಬೇಕು ಎಂಬ ಅರ್ಜಿದಾರರ ಪರ ವಕೀಲರ ಅರೆಮನಸ್ಸಿನ ಮನವಿ ತನ್ನ ಸದಸ್ಯರ ಪಟ್ಟಭದ್ರ ಹಿತಾಸಕ್ತಿಗಳನ್ನು ಈಡೇರಿಸಲು  ಇಡೀ ವ್ಯಾಜ್ಯಕ್ಕೆ ಸಂಪೂರ್ಣ ಭಿನ್ನ ಬಣ್ಣ ಬಳಿಯುವ ಹತಾಶ ಯತ್ನವಾಗಿದೆ. ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ ಎಂದು ಅದು ಹೇಳದೇ ಹೋಗುತ್ತದೆ. ಯಮುನಾ ನದಿ ತೀರಾ ಮತ್ತದರ ಪ್ರವಾಹ ಭೂಮಿ ಎಲ್ಲಾ ಅತಿಕ್ರಮಣಗಳು ಮತ್ತು ಅನಧಿಕೃತ ನಿರ್ಮಾಣಗಳು ತೆರವಾದರೆ ಶಿವ ಸಂತೋಷವಾಗಿರುತ್ತಾನೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಅದು ಹೇಳಿದೆ.

ದೇವಸ್ಥಾನದಲ್ಲಿ ಪ್ರತಿದಿನ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಮತ್ತು ಅದಕ್ಕಾಗಿಯೇ ಕೆಲವು ಹಬ್ಬದ ಸಂದರ್ಭಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ವಿಚಾರ ವಿವಾದಿತ ದೇಗುಲವನ್ನು ಸಾರ್ವಜನಿಕ ಮಹತ್ವದ ಸ್ಥಳವನ್ನಾಗಿ ಮಾಡುವುದಿಲ್ಲ ಎಂದು ನ್ಯಾ. ಶರ್ಮಾ ತಿಳಿಸಿದರು.

ಗೀತಾ ಕಾಲೋನಿಯ ತಾಜ್ ಎನ್‌ಕ್ಲೇವ್ ಬಳಿ ಇರುವ ಪ್ರಾಚೀನ ಶಿವ ದೇವಾಲಯವನ್ನು ತೆರವುಗೊಳಿಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಹೊರಡಿಸಿದ ಆದೇಶ ಪ್ರಶ್ನಿಸಿ ಪ್ರಾಚೀನ್‌ ಶಿವ ಮಂದಿರ್‌ ಏವಂ ಅಖಾಡ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಅರ್ಜಿದಾರರ ಸಮುದಾಯ ನಿರ್ವಹಿಸುತ್ತಿರುವ ಖಾಸಗಿ ದೇವಸ್ಥಾನವಾಗಿರದೆ ಇದು ಸಾರ್ವಜನಿಕರಿಗೆ ಸಮರ್ಪಿತ ಎಂದು ಸೂಚಿಸುವ ಯಾವುದೇ ದಾಖಲೆಗಳು ಇಲ್ಲ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.

ರಿಟ್‌ ಅರ್ಜಿ ವಜಾಗೊಳಿಸಿದ ನ್ಯಾಯಾಲಯ ದೇಗುಲದಲ್ಲಿರುವ ಧಾರ್ಮಿಕ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅರ್ಜಿದಾರರ ಸಮುದಾಯಕ್ಕೆ 15 ದಿನಗಳ ಕಾಲಾವಕಾಶ ನೀಡಿದೆ. ಹಾಗೆ ಮಾಡಲು ವಿಫಲವಾದರೆ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರ ವಿಗ್ರಹಗಳನ್ನು ಬೇರೆ ದೇಗುಲಕ್ಕೆ ಸ್ಥಳಾಂತರಿಸುವಂತೆ ನೋಡಿಕೊಳ್ಳಬೇಕು ಎಂದು ಅದು ಹೇಳಿದೆ.

ಅನಧಿಕೃತ ಕಟ್ಟಡ ಕೆಡವಲು ಡಿಡಿಎಗೆ ಸ್ವಾತಂತ್ರ್ಯವಿದ್ದು ತೆರವು ಕಾರ್ಯಾಚರಣೆ ವೇಳೆ ಅರ್ಜಿದಾರರ ಸಮುದಾಯ ಅಡ್ಡಿಪಡಿಸುವಂತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರು ಮತ್ತು ಆಡಳಿತ ತೆರವು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.

Kannada Bar & Bench
kannada.barandbench.com