ಅತಿವೃಷ್ಟಿಯಿಂದ ಜೀವನಾಧಾರಕ್ಕೆ ಹೊಡೆತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕಳಚೆ ಗ್ರಾಮದ ನಿವಾಸಿಗಳಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸಬೇಕು. ಆ ಪ್ರಕ್ರಿಯೆ ಕೈಗೊಳ್ಳಲು ಸಮಿತಿಯೊಂದರನ್ನು ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Karnataka High Court
Karnataka High Court
Published on

ಭೂಕುಸಿತದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದಲ್ಲಿನ ಕುಟುಂಬಗಳಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಂ ಗೋಪಾಲ ಕೃಷ್ಣ ಗಾವಂಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಚ್ ಸುನೀಲ್ ಕುಮಾರ್ ಅವರು “ಕಳಚೆ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿವೆ. ಗ್ರಾಮವು ಒಟ್ಟು 268.12 ಹೆಕ್ಟೇರ್ ಕೃಷಿ ಜಮೀನು ಮತ್ತು 1953.44 ಹೆಕ್ಟೇರ್ ಅರಣ್ಯ ಹೊಂದಿದೆ. ಅಲ್ಲಿನ ಶೇ.90ರಷ್ಟು ಜನ ರೈತರಾಗಿದ್ದು, ಕೃಷಿಯೇ ಅವರ ಜೀವನಾಧಾರ. ಆದರೆ, 2021ರ ಜುಲೈ 22 ಮತ್ತು 23ರಂದು ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದ ಗ್ರಾಮದಲ್ಲಿ ಮೂರು ಬಾರಿ ಭೂ ಕುಸಿತ ಉಂಟಾಗಿ ದೊಡ್ಡ ಮಟ್ಟದಲ್ಲಿ ಸಾವು-ನೋವು ಸಂಭವಿಸಿತು” ಎಂದು ವಿವರಿಸಿದರು.

“ಗ್ರಾಮದ ಹಲವರು ಮನೆ ಕಳೆದುಕೊಂಡಿದ್ದಾರೆ. ಕೃಷಿ ಬೆಳೆ ನಾಶವಾಗಿದೆ. ಇದರಿಂದ ಗ್ರಾಮದ ಕುಟುಂಬಗಳನ್ನು ಕಾಳಿ ಹುಲಿ ಮೀಸಲು ಅರಣ್ಯ ಪ್ರದೇಶದ ಪಕ್ಕದ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕೃಷಿ ಜಮೀನನ್ನು ಅರಣ್ಯ ಪ್ರದೇಶದೊಂದಿಗೆ ಸಂಯೋಜಿಸಿ, ಔಷಧೀಯ ಗುಣವುಳ್ಳ ಸಸ್ಯ-ಮರ ಬೆಳೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆ ಕುರಿತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2021ರ ಏಪ್ರಿಲ್‌ 8ಕ್ಕೆ ಅಧಿಸೂಚನೆ ಸಹ ಹೊರಡಿಸಿತ್ತು. ಆದರೆ, ಗ್ರಾಮಸ್ಥರಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈವರೆಗೆ ಕ್ರಮ ಜರುಗಿಸಿಲ್ಲ” ಎಂದರು.

ಹೀಗಾಗಿ, ಕಳಚೆ ಗ್ರಾಮದ ನಿವಾಸಿಗಳಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸಬೇಕು. ಆ ಪ್ರಕ್ರಿಯೆ ಕೈಗೊಳ್ಳಲು ಸಮಿತಿಯೊಂದರನ್ನು ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com