ಲವ್‌ ಜಿಹಾದ್‌ ಪುಸ್ತಕ ಬಿಡುಗಡೆ: ಶಿವಮೊಗ್ಗ ಪ್ರವೇಶಕ್ಕೆ ಪ್ರಮೋದ್‌ ಮುತಾಲಿಕ್‌ಗೆ ಅನುಮತಿಸಿದ ಹೈಕೋರ್ಟ್‌

“ಶಿವಮೊಗ್ಗ ಜಿಲ್ಲೆ ಪ್ರವೇಶಿಸಿ ಲವ್‌ ಜಿಹಾದ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆದರೆ, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ವಿವಾದ ಉಂಟು ಮಾಡಬಾರದು” ಎಂಬ ಷರತ್ತನ್ನು ಹೈಕೋರ್ಟ್‌ ವಿಧಿಸಿದೆ.
Pramod Muthalik and Karnataka HC
Pramod Muthalik and Karnataka HC
Published on

ʼಲವ್‌ ಜಿಹಾದ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಶಿವಮೊಗ್ಗ ಜಿಲ್ಲೆ ಪ್ರವೇಶಿಸಲು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಅನುಮತಿಸಿದೆ.

ಶಿವಮೊಗ್ಗ ಜಿಲ್ಲೆ ಪ್ರವೇಶಕ್ಕೆ ತನಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಫೆಬ್ರವರಿ 28ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಪ್ರಮೋದ್‌ ಮುತಾಲಿಕ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

“ಅರ್ಜಿದಾರರು ಶಿವಮೊಗ್ಗ ಜಿಲ್ಲೆಯ ಪ್ರವೇಶಿಸಿ ಲವ್‌ ಜಿಹಾದ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆದರೆ, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ವಿವಾದ ಉಂಟು ಮಾಡಬಾರದು” ಎಂದು ಷರತ್ತು ವಿಧಿಸಿರುವ ಹೈಕೋರ್ಟ್‌, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ವಿವಿಧ ದಿನಾಂಕಗಳಂದು ಇದೇ ಪುಸ್ತಕ ಬಿಡುಗಡೆಯಾಗಿದೆ. ಆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅರ್ಜಿದಾರರಿಗೆ ಅನುಮತಿಸಲಾಗಿತ್ತು. ಈ ವೇಳೆ ಶಾಂತಿ ಭಂಗ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಯಾವುದೇ ಘಟನೆಗಳು ನಡೆದಿಲ್ಲ. ಆದರೆ, ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗಲು ನಿರ್ಬಂಧ ಹೇರಲಾಗಿದೆ” ಎಂದರು.

ಈ ವಾದ ಪರಿಗಣಿಸಿದ ಪೀಠವು ಶಿವಮೊಗ್ಗ ಜಿಲ್ಲೆ ಪ್ರವೇಶಿಸಿ ಲವ್‌ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುತಾಲಿಕ್‌ಗೆ ಷರತ್ತುಬದ್ಧ ಅನುಮತಿ ನೀಡಿತು.

ಅರ್ಜಿದಾರರ ಆಕ್ಷೇಪವೇನು?

ಲೇಖಕ ಗಂಗಾಧರ್‌ ಕುಲಕರ್ಣಿ ಬರೆದಿರುವ ಲವ್‌ ಜಿಹಾದ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಾರ್ಚ್‌ 1ರಂದು 11.30ಕ್ಕೆ ಶಿವಮೊಗ್ಗದ ಖಾಸಗಿ ಹೋಟೆಲ್‌ವೊಂದರಲ್ಲಿ ನಿಗದಿಯಾಗಿತ್ತು. ಕಾರ್ಯಕ್ರಮಕ್ಕೆ ಹಾಜರಾಗಲು ಪ್ರಮೋದ್‌ ಮುತಾಲಿಕ್‌ ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಬೆಳೆಸಿದ್ದರು. ಮುತಾಲಿಕ್‌ ಅವರನ್ನು ಶಿವಮೊಗ್ಗದ ರಾಗಿಗುಡ್ಡ ವೃತ್ತದ ಚೌಡೇಶ್ವರಿ ದೇವಸ್ಥಾನದ ಬಳಿ ತಡೆಹಿಡಿದ ಡಿವೈಎಸ್‌ಪಿ, ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಮಾರ್ಚ್‌ 28ರಂದು ಹೊರಡಿಸಿರುವ ಆದೇಶ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಮುತಾಲಿಕ್‌, ಲವ್‌ ಜಿಹಾದ್‌ ಕುರಿತು ಅರಿವು ಮೂಡಿಸಲು ನೈಜ ಘಟನೆಗಳನ್ನು ಆಧರಿಸಿ ಪುಸ್ತಕ ರಚಿಸಲಾಗಿದೆ. ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿವೆ. ಪುಸ್ತಕದ ಬಗ್ಗೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಆದರೆ, ಸಕಾರಣವಿಲ್ಲದೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಲು ಶಿವಮೊಗ್ಗ ಜಿಲ್ಲಾಧಿಕಾರಿ ತನಗೆ ನಿರ್ಬಂಧ ಹೇರಿದ್ದಾರೆ. ರಾಜಕೀಯ ಪ್ರೇರಿತವಾಗಿ ನಿರ್ಬಂಧ ಹೇರಲಾಗಿದೆ. ಇದರಿಂದ ತನಗೆ ಸಂವಿಧಾನದತ್ತವಾಗಿ ದೊರೆತಿರುವ ವಾಕ್‌ ಸ್ವಾತಂತ್ರದ ಹರಣವಾಗಿದೆ. ಆದ್ದರಿಂದ, ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

Kannada Bar & Bench
kannada.barandbench.com