ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಳಪೆ ಕಂಚಿನ ಪರಶುರಾಮ ಪ್ರತಿಮೆ ನಿರ್ಮಿಸುವ ಮೂಲಕ ಸಾರ್ವಜನಿಕರ ಹಣದ ದುರ್ಬಳಕೆಯಾಗಿದ್ದು, ತನಿಖೆ ಅಗತ್ಯವಾಗಿ ನಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಸ್ಪಷ್ಟವಾಗಿ ನುಡಿದಿದೆ.
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ ನಿವಾಸಿಯಾಗಿರುವ ಕಲಾವಿದ ಕೃಷ್ಣ ನಾಯಕ್ ಅವರು ತಮ್ಮ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
"ಕಳಪೆ ಕಾಮಗಾರಿ ಆರೋಪಿಸಿ ಹಲವು ದೂರು ದಾಖಲಾದ ನಂತರ ನಿರ್ಮಿಸಿದ್ದ ಪರಶುರಾಮ ಪುತ್ಥಳಿಯನ್ನು ತೆರವು ಮಾಡಲಾಗಿದೆ. ಕಲಾವಿದ ಕೃಷ್ಣ ನಾಯಕ್‌ಗೆ ರೂ.1.25 ಕೋಟಿ ಪಾವತಿಸಲಾಗಿದ್ದು, ಆದರೂ ಪುತ್ಥಳಿ ನಿಲ್ಲುವ ಸ್ಥಿತಿಯಲ್ಲಿಲ್ಲ. ಹೀಗಿರುವಾಗ ಯಾವ ರೀತಿಯ ಕಲಾಕೃತಿಯನ್ನು ಕೃಷ್ಣ ನಾಯಕ್ ರೂಪಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಪುತ್ಥಳಿ ತೆರವು ಮಾಡಿದ ಬಳಿಕ ಒಂದು ವರ್ಷವಾದರೂ ಕೃಷ್ಣ ನಾಯಕ್ ಅದನ್ನು ಮರು ನಿರ್ಮಿಸಿಲ್ಲ. ಅನಾವರಣದ ಬಳಿಕ ಪುತ್ಥಳಿ ನೆಲಕ್ಕುರುಳದಿರುವುದು ಅದೃಷ್ಟ" ಎಂದು ನ್ಯಾಯಾಲಯ ಹೇಳಿದೆ.
"ಕೃಷ್ಣ ನಾಯಕ್‌ಗೆ ಪಾವತಿಸಿರುವುದು ಉಡುಪಿ ನಿರ್ಮಿತ ಕೇಂದ್ರದ ಪ್ರಸ್ತಾವಿತ ನಿಧಿ ಅಥವಾ ದೂರುದಾರರ ಹಣವಲ್ಲ. ಅದು ಸಾರ್ವಜನಿಕರ ಹಣ. ಪುತ್ಥಳಿ ನಿರ್ಮಿಸಲು 1.80 ಕೋಟಿಗೆ ಬೇಡಿಕೆ ಇಡಲಾಗಿದ್ದು, ಕಳಪೆ ಪುತ್ಥಳಿಗೆ ರೂ. 1.25 ಕೋಟಿ ಪಾವತಿಸಲಾಗಿದೆ. ಥೀಮ್ ಪಾರ್ಕ್‌ಗಾಗಿ ಪುತ್ಥಳಿಯನ್ನು ಆತುರದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ, ದೊಡ್ಡ ಮೊತ್ತ ಪಾವತಿಸಿದರೂ ಕೃಷ್ಣ ನಾಯಕ್ ಏಕೆ ಕಳಪೆ ಕೆಲಸ ಮಾಡಿದ್ದಾರೆ ಎಂಬುದನ್ನು ಅರಿಯಲು ತನಿಖೆ ಅಗತ್ಯವಾಗಿದೆ. ಕಳಪೆ ಕೆಲಸವನ್ನು ಮತ್ತೆ ಸರಿಪಡಿಸಲಾಗುತ್ತಿದ್ದು, ಪುತ್ಥಳಿ ನಿರ್ಮಾಣವು ಕಣ್ಣೊರೆಸುವ ಕೆಲಸವಷ್ಟೇ ಆಗಿತ್ತು. ಹೀಗಾಗಿ, ತನಿಖೆ ಅಗತ್ಯವಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.