
ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮಾನಹಾನಿ ಪ್ರಕರಣದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಲಖನೌ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದೆ.
ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಅಲೋಕ್ ವರ್ಮಾ ಅವರು ರಾಹುಲ್ ಅವರಿಗೆ ಜಾಮೀನು ಮಂಜೂರು ಮಾಡಿದರು, ₹20,000 ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಇಬ್ಬರು ಶ್ಯೂರಿಟಿಗಳನ್ನು ರಾಹುಲ್ ಸಲ್ಲಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 13ರಂದು ನಡೆಯಲಿದೆ.
ತಮಗೆ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಸೇನೆಯ ಕರ್ನಲ್ ಹುದ್ದೆಗೆ ಸಮನಾದ ಗಡಿ ರಸ್ತೆಗಳ ಸಂಸ್ಥೆಯ ನಿರ್ದೇಶಕರ ಹುದ್ದೆಯಲ್ಲಿದ್ದ ಉದಯ್ ಶಂಕರ್ ಶ್ರೀವಾಸ್ತವ ಪರವಾಗಿ ವಕೀಲ ವಿವೇಕ್ ತಿವಾರಿ ದೂರು ದಾಖಲಿಸಿದ್ದರು. ಪ್ರಸ್ತುತ ಉದಯ್ ಅವರು ನಿವೃತ್ತರಾಗಿದ್ದಾರೆ. 2022ರ ಡಿಸೆಂಬರ್ 9ರಂದು ಭಾರತೀಯ ಮತ್ತು ಚೀನಾ ಸೇನೆಗಳ ನಡುವೆ ನಡೆದಿದ್ದ ಘರ್ಷಣೆ ಸಂಬಂಧ 2022ರ ಡಿಸೆಂಬರ್ 16ರಂದು ರಾಹುಲ್ ಗಾಂಧಿ ಅವರು ಭಾರತೀಯ ಸೇನಾ ಪಡೆಯ ಕುರಿತು ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡಿದ್ದರು ಎಂದು ವಕೀಲ ತಿವಾರಿ ಆರೋಪಿಸಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದಿದ್ದ ರಾಹುಲ್ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಕಾರ್ಯಾಚರಣೆಯ ಕುರಿತು ಕೇಂದ್ರ ಸರ್ಕಾರವು ಕಠಿಣ ನಿಲುವು ತಳೆಯುತ್ತಿಲ್ಲ ಎಂಬುದಾಗಿ ಟೀಕಿಸಿದ್ದರು.
ಭಾರತದ ವಿವಿಧ ನ್ಯಾಯಾಲಯಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಅವರ ರಾಜಕೀಯ ವಿರೋಧಿಗಳು ಅನೇಕ ಮಾನಹಾನಿ ಪ್ರಕರಣಗಳನ್ನು ಹೂಡಿದ್ದಾರೆ. ರಾಹುಲ್ ಪರ ವಕೀಲರಾದ ಪ್ರಾಂಶು ಅಗರವಾಲ್, ಮೊಹಮ್ಮದ್ ಯಾಸಿರ್ ಅಬ್ಬಾಸಿ ಮತ್ತು ಮೊಹಮ್ಮದ್ ಸಮರ್ ಅನ್ಸಾರಿ ವಾದ ಮಂಡಿಸಿದರು.