ಇ ಡಿ ಅಧಿಕಾರಿಗಳ ಮೇಲೆ ಶಹಜಹಾನ್ ಸಹಚರರ ಹಲ್ಲೆ: ಸಿಬಿಐ ತನಿಖೆಯ ಅದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಪ. ಬಂಗಾಳ

ಪ್ರಕರಣವನ್ನು ಇಂದು ನ್ಯಾ. ಸಂಜೀವ್ ಖನ್ನಾ ಅವರೆದುರು ಮೌಖಿಕವಾಗಿ ಉಲ್ಲೇಖಿಸಲಾಯಿತು. ಪ್ರಕರಣ ಪಟ್ಟಿ ಸಲುವಾಗಿ ದಾಖಲೆಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳ ಎದುರು ಇಡುವಂತೆ ನ್ಯಾಯಮೂರ್ತಿಗಳು ಸೂಚಿಸಿದರು.
ಸಿಬಿಐ, ಪಶ್ಚಿಮ ಬಂಗಾಳ ಹಾಗೂ ಸುಪ್ರೀಂ ಕೋರ್ಟ್
ಸಿಬಿಐ, ಪಶ್ಚಿಮ ಬಂಗಾಳ ಹಾಗೂ ಸುಪ್ರೀಂ ಕೋರ್ಟ್
Published on

ಅಮಾನತುಗೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತವರ ಸಹಚರರು ಇ ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿರುವ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಇಂದು ಹೈಕೋರ್ಟ್ ಆದೇಶ ಹೊರಡಿಸಿದ ಕೆಲವೇ ಗಂಟೆಗಳ ಬಳಿಕ ಆ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣವನ್ನು ಮೌಖಿಕವಾಗಿ ಉಲ್ಲೇಖಿಸಿದರು. ಆಗ ಪ್ರಕರಣ ಪಟ್ಟಿ ಮಾಡುವ ಸಲುವಾಗಿ ದಾಖಲೆಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳ ಎದುರು ಇಡುವಂತೆ ನಿರ್ದೇಶನ ನೀಡಿದರು.

ಸಿಬಿಐ ಮತ್ತು ಕಲ್ಕತ್ತಾ ಹೈಕೋರ್ಟ್
ಸಿಬಿಐ ಮತ್ತು ಕಲ್ಕತ್ತಾ ಹೈಕೋರ್ಟ್

ಕಳೆದ ಅಕ್ಟೋಬರ್‌ನಲ್ಲಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮಾಜಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರೊಂದಿಗೆ ಶಹಜಹಾನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಕಳೆದ ಜನವರಿ 5ರಂದು, ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಅಕುಂಜಿಪಾರಾದಲ್ಲಿರುವ ಶಹಜಹಾನ್ ಅವರ ನಿವಾಸದ ಮೇಲೆ ದಾಳಿ ನಡೆಸಲು ಆಗಮಿಸಿದ ಇ ಡಿ ಅಧಿಕಾರಿಗಳನ್ನು ಸುಮಾರು 200 ಸ್ಥಳೀಯರು ಸುತ್ತುವರಿದು ಘೇರಾವ್ ಹಾಕಿದ ಆರೋಪ ಕೇಳಿ ಬಂದಿತ್ತು.

ನಂತರದ ಘರ್ಷಣೆಯಲ್ಲಿ ಇ ಡಿ ಅಧಿಕಾರಿಗಳು ಗಾಯಗೊಂಡಿದ್ದರು. ಘಟನೆ ಹಿನ್ನೆಲೆಯಲ್ಲಿ ಶಹಜಹಾನ್‌ ಅವರನ್ನು ಬಂಧಿಸುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್‌ ಬೋಸ್‌ ಸೂಚಿಸಿದ್ದರು.

ಈ ಮಧ್ಯೆ, ಶೇಖ್ ವಿರುದ್ಧ ವಿವಿಧ ಆರೋಪಗಳು ಕೇಳಿಬಂದವು. ಸಂದೇಶ್‌ಖಾಲಿ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಮಾಡಿದ ಆರೋಪ ಅವರ ಮೇಲಿದೆ.

ಶೇಖ್ ವಿರುದ್ಧ ಹಲವಾರು ಆರೋಪಗಳಿದ್ದರೂ ಅವರನ್ನು ಬಂಧಿಸಲು ವಿಫಲವಾದ ಪಶ್ಚಿಮ ಬಂಗಾಳ ಪೊಲೀಸರನ್ನು ಕಲ್ಕತ್ತಾ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಸುಮಾರು 55 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಶಹಜಹಾನ್‌ ಅವರನ್ನು ಕಡೆಗೆ ಫೆಬ್ರವರಿ 29ರಂದು ಬಂಧಿಸಿದ್ದರು. ಬಂಧನದ ಹಿನ್ನೆಲೆಯಲ್ಲಿ, ಟಿಎಂಸಿ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಘೋಷಿಸಿದೆ.

ಶಹಜಹಾನ್ ಶೇಖ್ ವಿರುದ್ಧದ ತನಿಖೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ಪೊಲೀಸರಿಗೆ ಸೂಚಿಸಿತ್ತು. ತನಿಖೆಯನ್ನು ರಾಜ್ಯ ಪೊಲೀಸರು ಮಾಡಬೇಕೇ ಅಥವಾ ಸಿಬಿಐ ನಡೆಸಬೇಕೇ ಎಂದು ನಿರ್ಧರಿಸುವುದಾಗಿ ಅದು ತಿಳಿಸಿತ್ತು.

ವಿಶೇಷವೆಂದರೆ, ಶೇಖ್ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸುತ್ತದೆಯೇ ಎಂಬ ಬಗ್ಗೆ ಇ ಡಿ ಮತ್ತು ಸಿಬಿಐ ಎರಡೂ ಆತಂಕ ವ್ಯಕ್ತಪಡಿಸಿದ್ದವು. ತನಿಖೆ ನಡೆಸಲು ತಾನು ಸಮರ್ಥ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿತ್ತು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್ ಮಂಗಳವಾರ ಬೆಳಗ್ಗೆ ಆದೇಶಿಸಿತ್ತು. ಇದನ್ನು ಪ. ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

Kannada Bar & Bench
kannada.barandbench.com