ವಿಶಿಷ್ಟ ತೀರ್ಪೊಂದರಲ್ಲಿ ಮದ್ರಾಸ್ ಹೈಕೋರ್ಟ್ ಗೃಹಿಣಿಯರ ಸ್ಥಾನಮಾನವನ್ನು ಕೊಂಡಾಡಿದ್ದು 2017ರಲ್ಲಿ ನಡೆದ ಅಪಘಾತವೊಂದರಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ಮಹಿಳೆಯೊಬ್ಬರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸೂಚಿಸಿದೆ.
ಭುವನೇಶ್ವರಿ ವರ್ಸಸ್ ಮಣಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ "ಗೃಹಿಣಿಯರು ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗುವವರು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಸಂತೋಷದಿಂದ ಇರುವ ಕುಟುಂಬಗಳು ಮಾತ್ರ ಉತ್ತಮ ಸಮಾಜ ರೂಪಿಸಬಲ್ಲವು ಮತ್ತು ಅಂತಹ ಉತ್ತಮ ಸಮಾಜ, ರಾಷ್ಟ್ರವನ್ನು ಚೈತನ್ಯಶೀಲವಾಗಿ ಮುನ್ನಡೆಸಬಲ್ಲದು. ಹೀಗೆ ಗೃಹಿಣಿಯರು ತಮ್ಮ ಕುಟುಂಬಕ್ಕೆ ಮಾತ್ರ ಕೊಡುಗೆ ನೀಡುತ್ತಿಲ್ಲ. ಇಡೀ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ," ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. "ಮನೆಯಲ್ಲಿ ದುಡಿಯುವ ವ್ಯಕ್ತಿ ಮೃತಪಟ್ಟರೆ ಆಗುವ ನಷ್ಟ ದೊಡ್ಡದು. ಗೃಹಿಣೆಯೇ ಸಾವನ್ನಪ್ಪಿದರೆ ಅದರ ಪರಿಣಾಮವನ್ನು ಅಳೆಯಲು ಸಾಧ್ಯವಾಗದು. ಕುಟುಂಬ ಛಿದ್ರವಾಗಿ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ’ ಎಂದು ನ್ಯಾಯಮೂರ್ತಿ ಎಸ್. ಎಂ. ಸುಬ್ರಮಣ್ಯಂ ಅವರಿದ್ದ ಪೀಠ ತಿಳಿಸಿದೆ.
ಅಪಘಾತ ಪ್ರಕರಣಗಳಲ್ಲಿ ಗೃಹಿಣಿಯರು ಉದ್ಯೋಗದಲ್ಲಿದ್ದಾರೆಯೇ, ಅವರ ವೇತನ ಎಷ್ಟು ಎಂದೆಲ್ಲಾ ಪ್ರಶ್ನಿಸುವ ಪ್ರವೃತ್ತಿ ಇದೆ. ಅಂತಹ ಸಂದರ್ಭಗಳಲ್ಲಿ ಆಕೆಯನ್ನು ಗೃಹಿಣಿಯೆಂದೇ ಪರಿಗಣಿಸಿ ಪರಿಹಾರ ನೀಡಬೇಕು ಎಂದು ನ್ಯಾಯಾಲಯವು ಸೂಚಿಸಿದೆ.
2017ರಲ್ಲಿ ಬಸ್ ಅಪಘಾತದಿಂದ ಭುವನೇಶ್ವರಿ ಎನ್ನುವ ಗೃಹಿಣಿಯು ಶೇ 60ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿ ಅವರಿಗೆ 4,86,000 ರೂಪಾಯಿ ಮೊತ್ತದ ಪರಿಹಾರ ನೀಡುವಂತೆ ಸೂಚಿಸಿತ್ತು. ಗೃಹಿಣಿ ಎಂಬ ಯಾವುದೇ ಪ್ರಮಾಣಪತ್ರ ಸಲ್ಲಿಸಲಾಗದ ಆಕೆಗೆ ನ್ಯಾಯಮಂಡಳಿ ಮಾಸಿಕ 4,500 ರೂಪಾಯಿ ವೇತನ ನಿಗದಿಪಡಿಸಿತ್ತು. ಹೆಚ್ಚಿನ ಪರಿಹಾರ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್, ನ್ಯಾಯಮಂಡಳಿಯ ನಡೆಯನ್ನು ಒರೆಗೆ ಹಚ್ಚಿದೆ. ಗೃಹಿಣಿಯಾಗಿ ಆಕೆಯ ಮೌಲ್ಯವನ್ನು ನ್ಯಾಯಮಂಡಳಿ ಮೆಚ್ಚಬೇಕಿತ್ತು ಎಂದು ಅದು ಅಭಿಪ್ರಾಯಪಟ್ಟಿದೆ.
ಆಕೆಗೆ ಮಾಸಿಕ 4,500 ರೂಪಾಯಿ ವೇತನ ನಿಗದಿ ಪಡಿಸುವುದು ಆಧಾರರಹಿತವಾದುದು ಮತ್ತು ನಿಸ್ಸಂದೇಹವಾಗಿ ಅನುಚಿತವಾದದ್ದು ಎಂದು ಪೀಠ ಹೇಳಿದೆ. ನ್ಯಾಯಮಂಡಳಿ ನಿಗದಿಪಡಿಸಿದ ಮೊತ್ತಕ್ಕಿಂತಲೂ ಗೃಹಿಣಿಯ ಮೌಲ್ಯ ದೊಡ್ಡದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮಂಡಳಿ ಉದ್ಯೋಗ ಮತ್ತು ಆದಾಯದ ಪುರಾವೆಗಳನ್ನು ಪರಿಗಣಿಸುವ ಮೂಲಕ ಯಾಂತ್ರಿಕ ವಿಧಾನವನ್ನು ಅಳವಡಿಸಿಕೊಂಡಿದೆ. ಮೋಟಾರು ವಾಹನ ಕಾಯ್ದೆಯಂತಹ ಉಪಯುಕ್ತ ಶಾಸನಕ್ಕೆ ಈ ನಡೆ ಸಾಧುವಲ್ಲ. ಶಾಸನದ ಉದ್ದೇಶ ಗಮನದಲ್ಲಿಟ್ಟುಕೊಂಡು ತೀರ್ಪು ನೀಡಬೇಕು ಎಂದು ಹೈಕೋರ್ಟ್ ಇದೇ ವೇಳೆ ಸೂಚಿಸಿದೆ.
"ಒಂದು ಕುಟುಂಬದಲ್ಲಿ ಗೃಹಿಣಿಯರ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ನ್ಯಾಯಾಲಯ ಸೇರಿದಂತೆ ಯಾರೊಬ್ಬರೂ ಎಂದಿಗೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಗೃಹಿಣಿಯ ಕೆಲಸ ನಿರ್ವಹಿಸುವುದು ಕಠಿಣವಾದದ್ದು ಮತ್ತು ಗೃಹಿಣಿಯರು ಯಾವುದೇ ಸಮಯದ ಮಿತಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕಾರಣ ಅವರು ಪ್ರೀತಿ ಮತ್ತು ಅಕ್ಕರೆಯಿಂದ ಕೆಲಸ ಮಾಡುತ್ತಿದ್ದಾರೆ, ಇದನ್ನು ಸಾಮಾನ್ಯ ಉದ್ಯೋಗಿಯಿಂದ ಎಂದಿಗೂ ನಿರೀಕ್ಷಿಸಲಾಗದು. ಆದ್ದರಿಂದ, ಗೃಹಿಣಿಯ ಕೆಲಸವನ್ನು ಎಂದಿಗೂ ಉದ್ಯೋಗಿ ಅಥವಾ ಉದ್ಯೋಗದೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಮತ್ತು ಪರಿಹಾರವನ್ನು ನಿರ್ಣಯಿಸುವಾಗ ಗೃಹಿಣಿಯರ ಪ್ರಾಮುಖ್ಯತೆ ಮತ್ತು ಮೌಲ್ಯಗಳನ್ನು ನ್ಯಾಯಾಲಯಗಳು ಪರಿಗಣಿಸಬೇಕು. ಗೃಹಿಣಿಯರು ಮುಂಜಾನೆಯಿಂದ ತಡರಾತ್ರಿಯವರೆಗೆ ಕೆಲಸ ಮಾಡುತ್ತಾರೆ. ಮನೆಗಳಲ್ಲಿ ಕೆಲಸ ಮಾಡುವ ಗೃಹಿಣಿಯರ ಪರಿಶ್ರಮ ಎಂತಹವರಿಗೂ ಅರ್ಥವಾಗುವಂಥದ್ದು," ಎಂದು ಕೋರ್ಟ್ ಹೇಳಿದೆ.
ಭುವನೇಶ್ವರಿ ಅವರ ಪ್ರಕರಣದಲ್ಲಿ ಗೃಹಿಣಿ ಮತ್ತು ಅಂಗವೈಕಲ್ಯ ಎಂಬ ಎರಡೂ ಅಂಶಗಳನ್ನು ಕೋರ್ಟ್ ಪರಿಗಣಿಸಿದೆ. ಅದರಂತೆ ಆಕೆಯ ವೇತನವನ್ನು 9000 ರೂ ಎಂದು ಅಂದಾಜು ಮಾಡಿ ಹೆಚ್ಚುವರಿ ಪರಿಹಾರ ನೀಡುವಂತೆ ಸಂಬಂಧಪಟ್ಟವರಿಗೆ ಕೋರ್ಟ್ ಸೂಚಿಸಿದೆ.