ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿದ್ದ 'ರೋಲ್ಸ್ ರಾಯ್ಸ್ ಗೋಸ್ಟ್' ಕಾರಿನ ಮೇಲೆ ಪ್ರವೇಶ ವಿಧಿಸದಂತೆ ತೆರಿಗೆ ಅಧಿಕಾರಿಗಳಿಗೆ ತಡೆ ನೀಡಬೇಕೆಂದು ಕೋರಿ ತಮಿಳು ನಟ ವಿಜಯ್ 2012ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.
ವಿಚಾರಣೆ ವೇಳೆ ನ್ಯಾ. ಎಸ್ ಎಂ ಸುಬ್ರಮಣ್ಯಂ ಅವರು ವಿಜಯ್ ಅವರಿಗೆ ರೂ ಒಂದು ಲಕ್ಷ ದಂಡ ವಿಧಿಸಿದ್ದು ನಟ ಇದನ್ನು ಇನ್ನೆರಡು ವಾರಗಳಲ್ಲಿ ತಮಿಳುನಾಡು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಪಾವತಿಸಬೇಕಿದೆ.
ಆದೇಶ ನೀಡುವ ವೇಳೆ ನ್ಯಾಯಮೂರ್ತಿಗಳು, "ಪ್ರವೇಶ ತೆರಿಗೆ ಪಾವತಿ ತಪ್ಪಿಸುವ ಸಲುವಾಗಿ" ಅರ್ಜಿಯನ್ನು ಸಲ್ಲಿಸಿರುವ ನಟ ವಿಜಯ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳು ಕೋರಿದ ಪ್ರವೇಶ ತೆರಿಗೆಯನ್ನು ಅವರು ಪ್ರಾಮಾಣಿಕವಾಗಿ ಪಾವತಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ವಿಜಯ್ ಅವರಂತಹ ಸಿನಿಮಾ ನಾಯಕರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ನಟರನ್ನು "ನಿಜವಾದ ನಾಯಕರು" ಎಂದು ಅವರು ಭಾವಿಸುತ್ತಾರೆ ಎಂಬುದಾಗಿ ನ್ಯಾಯಮೂರ್ತಿಗಳು ತಿಳಿಸಿದರು. “ಅವರು ರೀಲ್ ನಾಯಕರಂತೆ ವರ್ತಿಸುವ ಅಗತ್ಯವಿಲ್ಲ. ತೆರಿಗೆ ವಂಚನೆ ರಾಷ್ಟ್ರ ವಿರೋಧಿ ಅಭ್ಯಾಸ ಮತ್ತು ಮನಸ್ಥಿತಿಯಾಗಿದ್ದು ಅದು ಅಸಾಂವಿಧಾನಿಕ. ಈ ನಟರು ತಮ್ಮನ್ನು ತಾವು ಸಮಾಜದಲ್ಲಿ ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವ ಹರಿಕಾರರು ಎಂದು ಬಿಂಬಿಸಿಕೊಳ್ಳುತ್ತಾರೆ. ಅವರ ಸಿನಿಮಾಗಳು ಸಮಾಜದಲ್ಲಿನ ಭ್ರಷ್ಟಾಚಾರದ ವಿರುದ್ಧ ಇರುತ್ತವೆ. ಆದರೆ ಅವರು ತೆರಿಗೆ ತಪ್ಪಿಸುತ್ತಿದ್ದು ಕಾನೂನಿಗೆ ಹೊರತಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ" ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಆದೇಶದ ವೇಳೆ ಪೀಠ ಹೇಳಿದ ಪ್ರಮುಖ ಅಂಶಗಳು:
ಪ್ರತಿಷ್ಠಿತ ವ್ಯಕ್ತಿಗಳು ಕಾನೂನುಬದ್ಧ ನಾಗರಿಕರಂತೆ ವರ್ತಿಸಲು ಮತ್ತು ತೆರಿಗೆ ಪಾವತಿಸಲು ಸಾಮಾನ್ಯ ಜನರನ್ನು ಪ್ರೇರೇಪಿಸಬೇಕು. ಹಾಗಿದ್ದರೂ ಶ್ರೀಮಂತರು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ತೆರಿಗೆ ಪಾವತಿಸಲು ವಿಫಲವಾದರೆ ಆಗ ನ್ಯಾಯಾಲಯ ಸಾಂವಿಧಾನಿಕ ಗುರಿಗಳನ್ನು ಸಾಧಿಸಲು ಇನ್ನೂ ಬಹಳ ದೂರ ಸಾಗಬೇಕಾಗುತ್ತದೆ ಎಂದು ನೋವಿನಿಂದ ಈ ನ್ಯಾಯಾಲಯ ದಾಖಲಿಸುತ್ತದೆ.
ಈ ಹಿನ್ನೆಲೆಯಲ್ಲಿ ವಿಜಯ್ ಅವರು ಪ್ರವೇಶ ತೆರಿಗೆ ಪಾವತಿಸದಿರುವುದು ಅಭಿಮಾನಿಗಳಿಗೆ ಅಗೌರವ ಉಂಟು ಮಾಡಿದಂತೆ.
ತಾತ್ವಿಕವಾಗಿ, ಸಂಪತ್ತಿನ ಕ್ರೋಢೀಕರಣ ಅಥವಾ ರೋಲ್ಸ್ ರಾಯ್ಸ್‌ನಂತಹ ವಿಶ್ವದ ಪ್ರತಿಷ್ಠಿತ ಕಾರನ್ನು ಹೊಂದಿದ್ದರೂ, ಅದು ಉತ್ತಮ ಜೀವನಕ್ಕೆ ಯಾವುದೇ ನೆರವು ನೀಡದು, ಏಕೆಂದರೆ ನಮ್ಮ ದೇಶವು ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳಿಂದ ಸಮೃದ್ಧವಾಗಿದೆ. ಅರ್ಜಿದಾರರು ಪ್ರವೇಶ ತೆರಿಗೆ ಪಾವತಿಸದೆ ಇರುವುದನ್ನು ಮೆಚ್ಚಲಾಗದು.
ಅವರ ಸಿನಿಮಾಗಳನ್ನು ದುಡ್ಡು ತೆತ್ತು ನೋಡುವ ಲಕ್ಷಾಂತರ ಅಭಿಮಾನಿಗಳನ್ನು ಅರ್ಜಿದಾರರು ಗೌರವಿಸಿಲ್ಲ ಅಥವಾ ಅವರಿಗೆ ಸ್ಪಂದಿಸಿಲ್ಲ. ಏಕೆಂದರೆ ಅಂತಹ ಹಣದಿಂದ ಅರ್ಜಿದಾರ/ ನಟ ತನ್ನ ವೈಯಕ್ತಿಕ ಬಳಕೆಗೆ ವಿಶ್ವದ ಪ್ರತಿಷ್ಠಿತ ಕಾರು ಖರೀದಿಸಿದ್ದಾನೆ. ದೇಶದ ಅತ್ಯಂತ ಹೆಸರಾಂತ ವ್ಯಕ್ತಿಗಳು ತಮಗೆ ತಲುಪುವ ಹಣ ಬಂದದ್ದು ಬಡವರ ರಕ್ತದಿಂದ ಮತ್ತು ಅವರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ, ಆಕಾಶದಿಂದಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಅಲ್ಲದೆ ತೆರಿಗೆ ಪಾವತಿಸುವ ಹಿಂದಿನ ಮಹತ್ವ, ಅದರಿಂದ ಉಂಟಾಗುವ ಸಮಾಜ ಕಲ್ಯಾಣ ಕೆಲಸಗಳ ಬಗ್ಗೆ ವಿವರಿಸಿದ ನ್ಯಾಯಾಲಯ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಉದ್ದೇಶದಿಂದ ಒಂಬತ್ತು ವರ್ಷಗಳ ಕಾಲ ರಿಟ್ ಅರ್ಜಿ ಬಾಕಿ ಉಳಿದಿರುವುದು ಅಕ್ಷಮ್ಯ ಎಂದಿತು.
ಎರಡು ವಾರಗಳಲ್ಲಿ ವಿಜಯ್ ಪ್ರವೇಶ ತೆರಿಗೆ ಪಾವತಿಸಬೇಕು ಎಂದು ಅಂತಿಮವಾಗಿ ನ್ಯಾಯಾಲಯ ಆದೇಶಿಸಿತು.
ಕೇರಳ ಸರ್ಕಾರ ಮತ್ತು ಫಾದರ್ ವಿಲಿಯಂ ಫರ್ನಾಂಡಿಸ್ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪ್ರಕರಣದ ಅನುಪಾಲನಾ ವರದಿಯ ವಿಚಾರಣೆ ಜುಲೈ 28ಕ್ಕೆ ನಿಗದಿಯಾಗಿದೆ. ವಿಜಯ್ ಅವರ ಪರವಾಗಿ ವಕೀಲ ಎಸ್ ಕುಮಾರೇಶನ್ ಹಾಜರಿದ್ದರು. ಪ್ರತಿವಾದಿ ಅಧಿಕಾರಿಗಳ ಪರವಾಗಿ ಸರ್ಕಾರದ ವಕೀಲ ವಿ ಇ ವೇಲುಚಾಮಿ ಉಪಸ್ಥಿತರಿದ್ದರು.