ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ಮತ್ತಿತರರ ವಿರುದ್ಧ ಹೂಡಲಾಗಿದ್ದ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ನಾಳೆಗೆ ಮುಂದೂಡಿದೆ.
ತಮ್ಮನ್ನು ಬಿಡುಗಡೆ ಮಾಡಿದ್ದಕ್ಕೆ ಆಕ್ಷೇಪಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಕೆಕೆಎಸ್‌ಎಸ್‌ಆರ್ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವುದನ್ನು ತಿಳಿಸಲಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಸೋಮವಾರ ವಿಚಾರಣೆ ಮುಂದೂಡಿದರು.
ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ ಸ್ವಯಂ ಪ್ರೇರಿತ ಅರ್ಜಿಗಳನ್ನು ಖುದ್ದು ವಿಚಾರಣೆ ನಡೆಸಬೇಕು ಅಥವಾ ಅವುಗಳನ್ನು ಆಲಿಸಲು ಮತ್ತೊಂದು ಪೀಠ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ನಿನ್ನೆ ನಿರ್ದೇಶನ ನೀಡಿರುವ ನಡುವೆಯೇ ನ್ಯಾ. ವೆಂಕಟೇಶ್ ಅವರು ಸುಪ್ರೀಂ ಕೋರ್ಟ್ ಆದೇಶ ಪರಾಮರ್ಶಿಸಲು ಹೈಕೋರ್ಟ್‌ಗೆ ಅನುವು ಮಾಡಿಕೊಡುವುದಕ್ಕಾಗಿ ವಿಚಾರಣೆ ಮುಂದೂಡುತ್ತಿರುವುದಾಗಿ ತಿಳಿಸಿದರು.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಎಸ್ಎಲ್‌ಪಿಗಳಲ್ಲಿ ಸುಪ್ರೀಂ ಕೋರ್ಟ್ ಅಂತಿಮ ಆದೇಶಗಳನ್ನು ಹೊರಡಿಸಿದೆ ಎಂದು ಈ ನ್ಯಾಯಾಲಯಕ್ಕೆ ತಿಳಿದುಬಂದಿದೆ. ಸುಪ್ರೀಂ ಕೋರ್ಟ್‌ನ ಆದೇಶ ಪರಾಮರ್ಶಿಸಿ ಮುಂದಿನ ಆದೇಶಗಳನ್ನು ಹೊರಡಿಸಲು ಅನುವಾಗುವಂತೆ ಈ ಎಲ್ಲಾ ಪ್ರಕರಣಗಳನ್ನು ನಾಡಿದ್ದು ಪಟ್ಟಿ ಮಾಡಿ" ಎಂದು ನ್ಯಾಯಮೂರ್ತಿ ವೆಂಕಟೇಶ್ ಹೇಳಿದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಕೆಕೆಎಸ್ಎಸ್ಆರ್ ಸೇರಿದಂತೆ ತಮಿಳುನಾಡು ಸಚಿವರನ್ನು ಖುಲಾಸೆಗೊಳಿಸಿದ ರಾಜ್ಯದ ಹಲವಾರು ವಿಶೇಷ ನ್ಯಾಯಾಲಯಗಳ ಆದೇಶಗಳ ವಿರುದ್ಧ ನ್ಯಾಯಮೂರ್ತಿ ವೆಂಕಟೇಶ್ ಅವರು ಕಳೆದ ವರ್ಷ ಆಗಸ್ಟ್ 23ರಂದು ಸ್ವಯಂಪ್ರೇರಿತ ಮರುಪರಿಶೀಲನಾ ವಿಚಾರಣೆ ಆರಂಭಿಸಿದ್ದರು.
ವಿಶೇಷ ನ್ಯಾಯಾಲಯಗಳಲ್ಲಿ ಘಟಿಸಬಾರದ್ದೇನೋ ನಡೆಯುತ್ತಿರುವುದಾಗಿ ತೋರುತ್ತದೆ. ಆದೇಶ ಪರಿಶೀಲನೆ ಮತ್ತು ಸ್ವಯಂಪ್ರೇರಿತ ಮರುಪರಿಶೀಲನಾ ವಿಚಾರಣೆ ಆರಂಭಿಸುವ ಮೂಲಕ ತಾನು ಬಹುಶಃ ಸಮಸ್ಯೆಗಳ ಸರಮಾಲೆಯನ್ನೇ ತೆರೆದಿರಬಹುದು ಎಂದು ಅವರು ಆಗ ಹೇಳಿದ್ದರು.
ಕೆಕೆಎಸ್ಎಸ್ಆರ್ ಮತ್ತು ರಾಜ್ಯ ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ತಂಗಂ ತೇನರಸು ವಿರುದ್ಧದ ಸ್ವಯಂಪ್ರೇರಿತ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಕೈಗೆತ್ತಿಕೊಂಡಿತ್ತು.