ಎಲ್‌ಟಿಟಿಇ ನಾಯಕ ಪ್ರಭಾಕರನ್ ಜನ್ಮ ದಿನಾಚರಣೆ ಆಯೋಜನೆಗೆ ಮದ್ರಾಸ್ ಹೈಕೋರ್ಟ್ ಷರತ್ತುಬದ್ಧ ಅನುಮತಿ

ಸಮಾರಂಭದಲ್ಲಿ ಮಾಡುವ ಭಾಷಣಗಳು ದೇಶದ ಸಾರ್ವಭೌಮತೆಗೆ ವಿರುದ್ಧವಾಗಿರಬಾರದು ಮತ್ತು ಸಾರ್ಕ್ ರಾಷ್ಟ್ರಗಳ ಸ್ನೇಹಯುತ ಬಾಂಧವ್ಯದ ಮೇಲೆ ಪರಿಣಾಮ ಬೀರಬಾರದು ಎಂದು ಎಚ್ಚರಿಕೆ ನೀಡಿದ ನ್ಯಾಯಾಲಯ.
Madras High Court
Madras High Court

ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಮ್‌ (ಎಲ್‌ಟಿಟಿಇ) ನಾಯಕ ದಿವಂಗತ ವೇಲುಪಿಳ್ಳೈ ಪ್ರಭಾಕರನ್ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಈ ವಾರದ ಕೊನೆಯಲ್ಲಿ ಭಾಷಣ ಸ್ಪರ್ಧೆ ನಡೆಸಲು ಚಲನಚಿತ್ರ ನಿರ್ದೇಶಕ ಪುಗಳೆಂತಿ ತಂಕರಾಜ್ ಅವರಿಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ [ಪುಗಳೇಂದಿ ತಂಗರಾಜ್‌ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ನಡುವಣ ಪ್ರಕರಣ].

ಆದರೆ, ಕಾರ್ಯಕ್ರಮ ದೇಶದ ಸಾರ್ವಭೌಮತೆಗೆ ವಿರುದ್ಧವಾಗಿರದಂತೆ ಮತ್ತು ಸಾರ್ಕ್‌ ರಾಷ್ಟ್ರಗಳ ಸ್ನೇಹಯುತ ಬಾಂಧವ್ಯದ ಮೇಲೆ ಪರಿಣಾಮ ಬೀರಬಾರದಂತೆ  ತಂಕರಾಜ್‌ ಮತ್ತಿತರ ಸಂಘಟಕರು ನೋಡಿಕೊಳ್ಳಬೇಕು ಎಂದು ನ್ಯಾ. ಜಿ ಚಂದ್ರಶೇಖರನ್ ತಿಳಿಸಿದರು.

ಕಾರ್ಯಕ್ರಮಕ್ಕೆ ಚೆನ್ನೈ ಪೊಲೀಸರು ವಿಧಿಸಿದ್ದ ಎಂಟು ಷರತ್ತುಗಳ ಪೈಕಿ ಮೂರನ್ನು ಪ್ರಶ್ನಿಸಿ ತಂಕರಾಜ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಾನು ತಮಿಳು ಈಳಂ ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಿಗ ಮತ್ತು ಪ್ರತಿ ವರ್ಷ ನವೆಂಬರ್ 26ರಂದು ಪ್ರಭಾಕರನ್ ಅವರ ಜನ್ಮದಿನವನ್ನು ಆಚರಿಸುತ್ತೇನೆ ಈ ವರ್ಷ ಸಮಾನ ಮನಸ್ಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಆಶುಭಾಷಣ ಸ್ಪರ್ಧೆಯಲ್ಲಿ ಭಾಗಿಯಾಗುವಂತೆ ಮಾಡುವ ನಿರ್ಧಾರ ಕೈಗೊಂಡಿದ್ದೆವು. ಡಿಸೆಂಬರ್ 14ರಂದೇ ಹೈಕೋರ್ಟ್‌ ಕಾರ್ಯಕ್ರಮಕ್ಕೆ ಅನುಮತಿ ನೀಡಿತ್ತು. ಆದರೆ ಪೊಲೀಸರು ಹಲವು ಕಠಿಣ ಷರತ್ತುಗಳನ್ನು ವಿಧಿಸಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು ಎಂದು ತಂಕರಾಜ್‌ ನ್ಯಾಯಾಲಯಕ್ಕೆ ತಿಳಿಸಿದರು. ಪೊಲೀಸರ ಮೂರು ಷರತ್ತುಗಳನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಕೇವಲ ಮೂರು ಗಂಟೆಗಳ ಕಾಲ ಕಾರ್ಯಕ್ರಮ ನಡೆಸಬೇಕು, ನಿಷೇಧಿತ ಸಂಘಟನೆ ಎಲ್‌ಟಿಟಿಇ ಅಥವಾ ಅದರ ಯಾವುದೇ ನಾಯಕರನ್ನು ಶ್ಲಾಘಿಸುವ ಯಾವುದೇ ಭಾಷಣ ಮಾಡಬಾರದು ಹಾಗೂ ಸಂಘಟಕರು ಇಡೀ ಕಾರ್ಯಕ್ರಮವನ್ನು ವೀಡಿಯೊ ಮುದ್ರಿಸಿ ಮಾಡಿ ಅದನ್ನು ಪೊಲೀಸರಿಗೆ ಸಲ್ಲಿಸಬೇಕು ಎಂಬ ಷರತ್ತುಗಳನ್ನು ತಂಕರಾಜ್‌ ನಾಯಾಲಯದಲ್ಲಿ ಪ್ರಶ್ನಿಸಿದ್ದರು.

ತೀರ್ಪಿನಲ್ಲಿ ಹೈಕೋರ್ಟ್‌ “ನ್ಯಾಯಾಲಯ ಈಗಾಗಲೇ 14.12.2022 ರಂದು ದಿವಂಗತ ಪ್ರಭಾಕರನ್‌ ಅವರ ಅವರ 68ನೇ ಜನ್ಮ ವಾರ್ಷಿಕೋತ್ಸವದಂದು ಸೂಕ್ತ ಷರತ್ತುಗಳೊಂದಿಗೆ ಭಾಷಣ ಸ್ಪರ್ಧೆ ನಡೆಸಲು ಅನುವು ಮಾಡಿಕೊಡುವಂತೆ ಪ್ರತಿವಾದಿಗೆ (ಪೊಲೀಸ್‌) ಆದೇಶಿಸಿದೆ.  68ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿಎಲ್‌ಟಿಟಿಇ ನಾಯಕ ದಿವಂಗತ ಪ್ರಭಾಕರನ್ ಎಂಬ ನಿಷೇಧಿತ ಸಂಘಟನೆಯ ನಾಯಕನನ್ನು ಪ್ರಶಂಸಿಸಬಾರದು ಎಂಬ ಷರತ್ತು ನ್ಯಾಯಯುತವಾಗಲೀ ಸಮಂಜಸವಾಗಲೀ ಅಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಬಾರದು ಎನ್ನುವುದಕ್ಕೆ ಅರ್ಜಿದಾರರ ಪರ ವಕೀಲರು ಅವಲಂಬಿಸಿರುವ (ನ್ಯಾಯಾಲಯದ) ಆದೇಶಗಳನ್ನು ನಾವು ಈಗಾಗಲೇ ನೋಡಿದ್ದೇವೆ,’’ ಎಂದು ನ್ಯಾಯಾಲಯ ಹೇಳಿತು. ಆದರೆ, ಇದೇ ವೇಳೆ ನ್ಯಾಯಾಲಯವು ಕಾರ್ಯಕ್ರಮವು ದೇಶದ ಸಾರ್ವಭೌಮತ್ವಕ್ಕೆ ಮತ್ತು ಸಾರ್ಕ್‌ ದೇಶಗಳ ಸ್ನೇಹಯುತ ಬಾಂಧವ್ಯಕ್ಕೆ ಧಕ್ಕೆ ಉಂಟುಮಾಡಬಾರದು ಎಂದು ಎಚ್ಚರಿಕೆ ನೀಡಿತು.

ಹೊಸದಾಗಿ ಕಾರ್ಯಕ್ರಮ ನಿಗದಿಪಡಿಸಿರುವ ದಿನದಂದು ಎಂಟು ಗಂಟೆಗಳ ಕಾಲ ಕಾರ್ಯಕ್ರಮ ನಡೆಸಲು ತಂಕರಾಜ್‌ ಅವರಿಗೆ ಅನುವು ಮಾಡಿಕೊಡಬೇಕು. ಇಡೀ ಕಾರ್ಯಕ್ರಮವನ್ನು ವೀಡಿಯೊ ಮುದ್ರಿಸಿ ಎಂದು ಸಂಘಟಕರಿಗೆ ಪೊಲೀಸರು ಹೇಳುವಂತಿಲ್ಲ. ಅಗತ್ಯವಿದ್ದರೆ ಪೊಲೀಸರೇ ಈ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ. ಜನವರಿ 21ರ ಶನಿವಾರದಂದು ಭಾಷಣ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

Kannada Bar & Bench
kannada.barandbench.com