ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಎತ್ತಿನ ಬಂಡಿ ಸ್ಪರ್ಧೆಗೆ ಮದ್ರಾಸ್ ಹೈಕೋರ್ಟ್ ಅನುಮತಿ

ಈರೋಡ್ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆಗೆ ಅನುಮತಿ ನೀಡಿದ ಹೈಕೋರ್ಟ್, ಇದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವ ಸಾಂಸ್ಕೃತಿಕ ಕಾರ್ಯಕ್ರಮ ಎಂದಿತು.
Madras High Court, Principal Bench
Madras High Court, Principal Bench
Published on

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಆಯೋಜಿಸಿದ್ದ ಎತ್ತಿನ ಬಂಡಿ ಓಟಕ್ಕೆ ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಅನುಮತಿ ನೀಡಿದೆ [ವಿ ಸೌಂಥರ್‌ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣ].

ಭಾರತೀಯರಿಗೆ ತಮ್ಮ ಸ್ವಾಂತ್ರ್ಯೋತ್ಸವ ಆಚರಿಸಲು ಅವಕಾಶವಿಲ್ಲ ಎಂಬ ಸಂದೇಶ ನೀಡಲು ತಾನು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಟಿ ರಾಜಾ ಮತ್ತು ಕೆ ಕುಮಾರೇಶ್ ಬಾಬು ಅವರಿದ್ದ ಪೀಠ ತಿಳಿಸಿದೆ.

“ಅರ್ಜಿದಾರರು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಂಡಿ ಓಟ ನಡೆಸಲು ಮುಂದಾದಾಗ, ಅವರ ಮನವಿಗೆ ಅಡ್ಡ ಬರುವುದು ಭಾರತೀಯರಿಗೆ ಸ್ವಾತಂತ್ರ್ಯ ದಿನ ಆಚರಿಸಲು ಅವಕಾಶ ನೀಡುತ್ತಿಲ್ಲ ಎಂಬ ಸಂದೇಶ ರವಾನಿಸಿದಂತಾಗುತ್ತದೆ ಎಂದು ನಾವು ಆತಂಕಿತರಾಗಿದ್ದೇವೆ. ಆದ್ದರಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದಾಗ ಅವುಗಳನ್ನು ಶಾಲಾ-ಕಾಲೇಜು ಮತ್ತಿತರ ಸಂಸ್ಥೆಗಳು ಆಯೋಜಿಸುವ ಸ್ಪರ್ಧೆಗೆ ಸಮನಾಗಿ ನೋಡಬೇಕು, ”ಎಂದು ನ್ಯಾಯಾಲಯ ಹೇಳಿತು.

ಎತ್ತಿನ ಬಂಡಿ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಇದನ್ನು ಜಲ್ಲಿಕಟ್ಟು ರೀತಿಯಲ್ಲಿಯೇ ಹಲವು ವರ್ಷಗಳಿಂದ ಆಚರಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿತು. ಎತ್ತುಗಳಿಗೆ ಅಮಲಿನ ಪದಾರ್ಥಗಳನ್ನು ನೀಡಲಾಗಿರುತ್ತದೆ ಎಂಬ ರಾಜ್ಯ ಸರ್ಕಾರದ ವಾದವನ್ನು ಒಪ್ಪಿಕೊಳ್ಳಲು ಪೀಠವು ನಿರಾಕರಿಸಿತು. ಇದೊಂದು ಕ್ಷುಲ್ಲಕ ಊಹೆ ಎಂದು ಅದು ಹೇಳಿತು.

ಈರೋಡ್‌ ಜಿಲ್ಲೆಯಲ್ಲಿ ಎತ್ತಿನ ಬಂಡಿ ಓಟ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅನುಮತಿ ನೀಡುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಸಂಚಾರ ದಟ್ಟಣೆ ಉಂಟಾಗಲಿದೆ. ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ ಎಂದು ಸರ್ಕಾರ ವಾದಿಸಿತ್ತು.

ಆದರೆ ಸ್ಪರ್ಧೆ ನಡೆಯುವ ದಿನ ಭಾನುವಾರವಾದ್ದರಿಂದ (ಆಗಸ್ಟ್ 14) ಶಾಲಾ ಕಾಲೇಜುಗಳು ಮುಚ್ಚಿದ್ದು ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಮನುಷ್ಯರು ಮತ್ತು ಪ್ರಾಣಿಗಳಿಗೆ ಆರೋಗ್ಯ ತಪಾಸಣೆಗೂ ಅವಕಾಶ ಕಲ್ಪಿಸಿರುವುದನ್ನು ಗಮನಿಸಿ ಅನುಮತಿ ನೀಡಲಾಯಿತು. ಆದರೆ ಜೂಜಾಟ ಬೆಟ್ಟಿಂಗ್‌ನಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಸ್ಪರ್ಧೆ ವೇಳೆ ಅವಕಾಶ ನೀಡುವಂತಿಲ್ಲ ಎಂದು ತಾಕೀತು ಮಾಡಿತು.

Kannada Bar & Bench
kannada.barandbench.com