

ಇರೋಸ್ ಇಂಟರ್‌ನ್ಯಾಷನಲ್ ಮೀಡಿಯಾ ಲಿಮಿಟೆಡ್ ಮತ್ತು ಹೈದರಾಬಾದ್ ಮೂಲದ 14 ರೀಲ್ಸ್‌ಗೆ ಸಂಬಂಧಿಸಿದಂತೆ 2019ರಲ್ಲಿ ಪ್ರಕಟವಾಗಿದ್ದ ಮಧ್ಯಸ್ಥಿಕೆ ತೀರ್ಪಿನ ಕುರಿತು ಹೂಡಲಾಗಿದ್ದ ದೀರ್ಘಕಾಲದ ವ್ಯಾಜ್ಯಕ್ಕೆ ಅಂತ್ಯ ಹಾಡಿರುವ ಮದ್ರಾಸ್ ಹೈಕೋರ್ಟ್ ತೆಲುಗು ಚಲನಚಿತ್ರ ಅಖಂಡ ಭಾಗ ಎರಡನ್ನು ಬಿಡುಗಡೆ ಮಾಡಲು ಹಸಿರು ನಿಶಾನೆ ತೋರಿದೆ [ಇರೋಸ್ ಇಂಟರ್‌ನ್ಯಾಷನಲ್‌ಮತ್ತು 14 ರೀಲ್ಸ್ ಎಂಟರ್‌ಟೈನ್‌ಮೆಂಟ್ ನಡುವಣ ಪ್ರಕರಣ].
₹27.7 ಕೋಟಿಗೂ ಹೆಚ್ಚಿನ ಮೊತ್ತದ ಪಾವತಿ ಬಾಕಿ ಇರುವ ಕಾರಣ, ನಿರ್ಮಾಪಕರು ಚಿತ್ರ ಬಿಡುಗಡೆ ಮಾಡದಂತೆ ಅಥವಾ ವಾಣಿಜ್ಯಕ ಬಳಕೆ ಮಾಡದಂತೆ ತಡೆ ನೀಡಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಇರೊಸ್ ಇಂಟರ್‌ನ್ಯಾಷನಲ್ ಮೀಡಿಯಾ ಲಿಮಿಟೆಡ್ ಪರವಾಗಿ ಮಧ್ಯಂತರ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಕಳೆದ ಅಕ್ಟೋಬರ್‌ನಲ್ಲಿ ನಿರಾಕರಿಸಿದ್ದರು.
ಆದರೆ, ಕಳೆದ ವಾರ ವಿಭಾಗೀಯ ಪೀಠ ಚಿತ್ರ ಬಿಡುಗಡೆಗೆ ತಡೆ ನೀಡಿತ್ತು. ಮೂಲ ದಾವೆಯ ಆಧಾರದಲ್ಲಿ ನಿರ್ಧರಿಸುವಂತೆ ಸೂಚಿಸಿ ಪ್ರಕರಣವನ್ನು ಏಕಸದಸ್ಯ ಪೀಠಕ್ಕೆ ಹಿಂತಿರುಗಿಸಿತ್ತು.
ಬುಧವಾರ ಪ್ರಕರಣದ ವಿಚಾರಣೆ ನಡೆದಾಗ ವ್ಯಾಜ್ಯದಲ್ಲಿ ರಾಜಿ ಸಂಧಾನಕ್ಕೆ ಮುಂದಾಗಿರುವ ಸಂಬಂಧ ಡಿಸೆಂಬರ್ 8 ರಂದು ಎರಡೂ ಕಕ್ಷಿದಾರ ಸಂಸ್ಥೆಗಳು ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಿರುವ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಲಾಯಿತು.
ನಟರಾದ ನಂದಮೂರಿ ಬಾಲಕೃಷ್ಣ, ಸಂಯುಕ್ತಾ ಮೆನನ್ ಮತ್ತಿತರರ ತಾರಾಗಣ ಇರುವ ಅಖಂಡ II ಚಿತ್ರ 2021ರಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಯಶ ಕಂಡಿದ್ದ ಅಖಂಡ ಚಿತ್ರದ ಮುಂದುವರಿದ ಭಾಗ.
ಚಿತ್ರ ನಿರ್ಮಾಣ ಮಾಡಿದ್ದ 14 ರೀಲ್ಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ₹27.70 ಕೋಟಿ ನೀಡುವ ಸಂಬಂಧ ಮಧ್ಯಸ್ಥಿಕೆ ತೀರ್ಪು ನೀಡಲಾಗಿತ್ತು. 14 ರೀಲ್ಸ್ ಕಂಪೆನಿ ಈ ಹಣ ಪಾವತಿಸದೆ 14 ರೀಲ್ಸ್ ಪ್ಲಸ್ ಎಂಬ ಹೊಸ ಕಂಪೆನಿ ಆರಂಭಿಸಿ ಅದೇ ಚಿತ್ರದ ನಿರ್ಮಾಣ ಇಲ್ಲವೇ ವಿತರಣೆ ಕೆಲಸ ಮಾಡುತ್ತಿದೆ. ಕಂಪೆನಿಯ ಹೆಸರು ಬದಲಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು. ಈ ಎರಡು ಕಂಪನಿಗಳು ಒಂದೇ ಎಂದು ಪರಿಗಣಿಸಿ ಚಿತ್ರ ಬಿಡುಗಡೆ ನಿಲ್ಲಿಸಬೇಕು ಎಂದು ಇರೊಸ್ ಕೋರಿತ್ತು.
ಎರಡೂ ಸಂಸ್ಥೆಗಳ ನಡುವೆ ಏರ್ಪಟ್ಟಿರುವ ರಾಜಿ ಒಪ್ಪಂದದ ಅನ್ವಯ, 14 ರೀಲ್ಸ್ ಕಂಪನಿಯು ಇರೋಸ್‌ಗೆ ₹10 ಕೋಟಿ ಮೊತ್ತದ ಒಂದು ಬಾರಿಯ ಇತ್ಯರ್ಥ ಮೊತ್ತ ಪಾವತಿಯನ್ನು ಮಾಡಲು ಒಪ್ಪಿಕೊಂಡಿತು. ಈ ಮೊತ್ತದಲ್ಲಿ, ಸಂಧಾನಕ್ಕೆ ಹಣಕಾಸು ಒದಗಿಸಲು ಬದ್ಧವಾಗಿರುವ ಮೂರನೇ ಪ್ರತಿವಾದಿಯಾದ ಮ್ಯಾಂಗೋ ಮಾಸ್ ಮೀಡಿಯಾ ಡಿಸೆಂಬರ್ 9 ರಂದು ನೇರವಾಗಿ ₹5 ಕೋಟಿಯನ್ನು ಇರೋಸ್‌ಗೆ ಪಾವತಿಸಿತು. ಉಳಿದ ₹5 ಕೋಟಿಯನ್ನು 14 ರೀಲ್ಸ್ ಕಂಪನಿಯು ಸೆಪ್ಟೆಂಬರ್ 8, 2026 ರೊಳಗೆ ಪಾವತಿಸಬೇಕು. ಈ ಗಡುವಿನ ಮೂರು ತಿಂಗಳ ವಿಸ್ತರಣೆಯ ಸಾಧ್ಯತೆ ಇದೆ.
2021ರ ಹಿಟ್ ಚಿತ್ರ ʼಅಖಂಡʼ ₹130 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ. ಜೊತೆಗೆ ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳಿಂದಲೂ ದೊಡ್ಡ ಮಟ್ಟದ ಆದಾಯ ಬಂದಿತ್ತು. ಅಖಂಡ 2 ಚಿತ್ರವನ್ನು 14 ರೀಲ್ಸ್ ಪ್ಲಸ್ ಹೆಸರಿನಲ್ಲಿ ಬಿಡುಗಡೆ ಮಾಡಿದರೆ 2019ರಲ್ಲಿ ನೀಡಲಾದ ₹27.70 ಕೋಟಿ ಮಧ್ಯಸ್ಥಿಕೆ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅದು ವಾದಿಸಿತ್ತು.
₹27.70 ಕೋಟಿ ತೀರ್ಪಿನ ಮೊತ್ತವನ್ನು ಠೇವಣಿ ಇಡುವವರೆಗೆ ಅಖಂಡ- 2 ಚಿತ್ರದ ಬಿಡುಗಡೆ ವಿತರಣೆ, ಪ್ರಸಾರ ಮಾಡುವುದು ಅಥವಾ ಮೂರನೇ ವ್ಯಕ್ತಿಯ ಹಕ್ಕು ಸೃಷ್ಟಿಯಾಗದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು. ಅಖಂಡ- 2ನಿಂದ ಗಳಿಸಿದ ಯಾವುದೇ ಆದಾಯವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸೂಚಿಸಬೇಕು ಎಂದು ಅದು ಕೋರಿತ್ತು.