ಪೆರಿಯಾರ್ ಅವಹೇಳನ: ಹೇಳಿಕೆ ತೆಗೆದುಹಾಕುವಂತೆ ದೆಹಲಿ ಮೂಲದ ಪತ್ರಕರ್ತನಿಗೆ ಮದ್ರಾಸ್ ಹೈಕೋರ್ಟ್ ಸೂಚನೆ

ಪೆರಿಯಾರ್ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಮಜುಂದಾರ್ ಸಲ್ಲಿಸಿದ್ದ ಅರ್ಜಿಯ‌ ವಿಚಾರಣೆ ವೇಳೆ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಈ ಸೂಚನೆ ನೀಡಿದರು.
ಮದ್ರಾಸ್ ಹೈಕೋರ್ಟ್, ಪ್ರಧಾನ ಪೀಠ
ಮದ್ರಾಸ್ ಹೈಕೋರ್ಟ್, ಪ್ರಧಾನ ಪೀಠ

ತಮ್ಮ ರಾಜಕೀಯ ಸಿದ್ಧಾಂತಗಳಿಗೆ ತಕ್ಕಂತೆ ವ್ಯಕ್ತಿಗಳನ್ನು ಟೀಕಿಸುವ ಸ್ವಾತಂತ್ರ್ಯ ಪತ್ರಕರ್ತರಿಗೆ ಇದ್ದರೂ ಅವರು ಆಧಾರರಹಿತ ವೈಯಕ್ತಿಕ ಆರೋಪ ಮಾಡುವಂತಿಲ್ಲ ಎಂದು ಸೋಮವಾರ ತಿಳಿಸಿರುವ ಮದ್ರಾಸ್‌ ಹೈಕೋರ್ಟ್‌ ದ್ರಾವಿಡ ಚಳವಳಿಯ ಹರಿಕಾರ, ಸಮಾಜ ಸುಧಾರಕ ಹಾಗೂ ವಿಚಾರವಾದಿ ಪೆರಿಯಾರ್‌ ಅವರ ವಿರುದ್ಧ ಅವಹೇಳನ ಮಾಡಿದ್ದ ಹೇಳಿಕೆಗಳನ್ನು ತೆಗೆದುಹಾಕುವಂತೆ ದೆಹಲಿ ಮೂಲದ ಪತ್ರಕರ್ತ ಅಭಿಜಿತ್‌ ಮಜೂಂದಾರ್‌ಗೆ ನಿರ್ದೇಶನ ನೀಡಿದೆ.

ಈಗಿನ ದಿನಗಳಲ್ಲಿ ಸುದ್ದಿ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸಭ್ಯತೆ ಕಾಣುತ್ತಿಲ್ಲ ಎಂದು ನ್ಯಾ. ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

ಪೆರಿಯಾರ್ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಮಜುಂದಾರ್ ಸಲ್ಲಿಸಿದ್ದ ಅರ್ಜಿಯ‌ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಸನಾತನತೆ ನಿರ್ಮೂಲನೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಕರೆಯನ್ನು ಟೀಕಿಸಿ ಬರೆದಿದ್ದ ಅಂಕಣದಲ್ಲಿ ಚಿಂತಕ ಪೆರಿಯಾರ್‌ ಅವರ ವಿರುದ್ಧ ಮಜೂಂದಾರ್‌ ವೈಯಕ್ತಿಕ ಟೀಕೆ ಮಾಡಿದ್ದರು.

ಇಂತಹ ಅಭಿಪ್ರಾಯಕ್ಕೆ ಬರಲು ನಿಮ್ಮ ಕಕ್ಷಿದಾರರು ಯಾವ ಸಾಕ್ಷಿ ಅಥವಾ ಸಂಶೋಧನೆಯನ್ನು ಅವಲಂಬಿಸಿದ್ದಾರೆ ಎಂದು ನ್ಯಾ. ವೆಂಕಟೇಶ್ ಸೋಮವಾರ ಮಜುಂದಾರ್ ಪರ ವಕೀಲರನ್ನು ಕೇಳಿದರು.

ಈ ಹೇಳಿಕೆಗಳು ಈ ಹಿಂದೆ ಪ್ರಕಟವಾದ ಇತರ, ಲೇಖನಗಳನ್ನು ಆಧರಿಸಿವೆ ಎಂದು ವಕೀಲರು ಹೇಳಿದರು. ಜೊತೆಗೆ ಮಜುಂದಾರ್ ತಮ್ಮ ಲೇಖನದ ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಲು ಸಿದ್ಧರಿದ್ದಾರೆ ಎಂದರು.

ಯಾರೋ ಒಂದು ವಿಚಾರ ಬರೆದಿದ್ದಾರೆ ಅದನ್ನೇ ತಾವು ಬರೆದಿರುವುದಾಗಿ ತಿಳಿಸಿ ಆರೋಪದಿಂದ ಮುಕ್ತವಾಗಿರುವುದಾಗಿ ಯಾರೂ ಭಾವಿಸಬಾರದು ಎಂದು ಹೇಳಿತು.

"ನೀವು ಯಾಕೆ ಈ ರೀತಿಯ ಆರೋಪ ಮಾಡಿದ್ದೀರಿ? ಭಿನ್ನ ಸಿದ್ಧಾಂತಗಳಿರುವುದು ಸರಿ. ಒಬ್ಬ ವ್ಯಕ್ತಿಗೆ ಒಂದು ನಿರ್ದಿಷ್ಟ ಸಿದ್ಧಾಂತವ ಇದ್ದು ಇನ್ನೊಬ್ಬರು ಅದನ್ನು ವಿರೋಧಿಸಬಹುದು. ಆದರೆ ನೀವು ಇಂತಹ ಆರೋಪಗಳನ್ನು ಹೇಗೆ ಮಾಡುತ್ತೀರಿ? ಒಬ್ಬ ವ್ಯಕ್ತಿಯ ರಾಜಕಾರಣ, ಸಿದ್ಧಾಂತವನ್ನು ಟೀಕಿಸಲು ಬಯಸಿದರೆ, ಅದು ಸರಿ. ಆದರೆ ನೀವು ವೈಯಕ್ತಿಕ ಆರೋಪಗಳನ್ನು ಮಾಡಡುವಂತಿಲ್ಲ" ಎಂದು ನ್ಯಾಯಾಲಯ ಬುದ್ಧಿವಾದ ಹೇಳಿತು.

ನಂತರ ಪೆರಿಯಾರ್‌ ಕುರಿತ ವೈಯಕ್ತಿಕ ಅವಹೇಳನದ ಅಂಶಗಳನ್ನು ತೆಗೆದುಹಾಕುವಂತೆ ಜೊತೆಗೆ ಆ ವಿಚಾರ ಪ್ರಕಟಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುವಂತೆ ಮಜುಂದಾರ್‌ಗೆ ನ್ಯಾಯಾಲಯ ನಿರ್ದೇಶನ ನೀಡಿತು. ನಂತರವಷ್ಟೇ ಎಫ್‌ಐಆರ್‌ ರದ್ದುಗೊಳಿಸುವ ಆದೇಶ ಹೊರಡಿಸುವ ಕುರಿತು ಪರಿಗಣಿಸುವುದಾಗಿ ತಿಳಿಸಿದ ಅದು ಜನವರಿ 23 ಕ್ಕೆ ಪ್ರಕರಣ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com