ಲೋಕಸಭೆ ಮತದಾನ: ನೌಕರರ ರಜೆ ಅರ್ಜಿ ಪರಿಗಣಿಸುವಂತೆ ದಕ್ಷಿಣ ರೈಲ್ವೆಗೆ ಮದ್ರಾಸ್ ಹೈಕೋರ್ಟ್ ಸೂಚನೆ

ದಕ್ಷಿಣ ರೈಲ್ವೆ ತಪ್ಪಾಗಿ ಚುನಾವಣಾ ಆಯೋಗದ ಬದಲಿಗೆ ಜಿಲ್ಲಾಧಿಕಾರಿಗೆ ಅಂಚೆ ಮತದಾನಕ್ಕಾಗಿ ಮನವಿ ಸಲ್ಲಿಸಿದ್ದರಿಂದ ತಮಿಳುನಾಡು ರೈಲ್ವೆ ನೌಕರರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಂಚೆ ಮತಪತ್ರಗಳನ್ನು ಬಳಸದಂತಾಗಿದೆ.
Railway station
Railway station

ಏಪ್ರಿಲ್ 19 ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರಕರಣದ ಆಧಾರದ ಮೇಲೆ ತನ್ನ ಉದ್ಯೋಗಿಗಳಿಗೆ ರಜೆ ನೀಡುವುದನ್ನು ಪರಿಗಣಿಸುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ದಕ್ಷಿಣ ರೈಲ್ವೆಗೆ ತಿಳಿಸಿದೆ.

ದಕ್ಷಿಣ ರೈಲ್ವೆ ಅಧಿಕಾರಿಗಳಿಗೆ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡುವುದಿಲ್ಲ ಬದಲಿಗೆ ಮತದಾನಕ್ಕಾಗಿ ನೌಕರರು ಮಾಡುವ ಮನವಿಗಳನ್ನು ಅಧಿಕಾರಿಗಳು ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಜೆ ಸತ್ಯನಾರಾಯಣ ಪ್ರಸಾದ್ ಅವರಿದ್ದ ಪೀಠ ಏಪ್ರಿಲ್ 10ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ವಿ ರಾಮ್ ಕುಮಾರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ದಕ್ಷಿಣ ರೈಲ್ವೆ ಸೂಕ್ತ ಸಮಯದಲ್ಲಿ ಅಂಚೆ ಮತದಾನಕ್ಕಾಗಿ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸದೇ ಹೋದದ್ದರಿಂದ ತಮಿಳುನಾಡಿನ ರೈಲ್ವೆ ನೌಕರರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಂಚೆ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದರು.

ದಕ್ಷಿಣ ರೈಲ್ವೆ ತಪ್ಪಾಗಿ ಚುನಾವಣಾ ಆಯೋಗದ ಬದಲಿಗೆ ಜಿಲ್ಲಾಧಿಕಾರಿಗೆ ಅಂಚೆ ಮತದಾನಕ್ಕಾಗಿ ಮನವಿ ಸಲ್ಲಿಸಿದ್ದರಿಂದ ತಮಿಳುನಾಡು ರೈಲ್ವೆ ನೌಕರರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಂಚೆ ಮತಪತ್ರಗಳನ್ನು ಬಳಸದಂತಾಗಿದೆ ಎಂದು ಏಪ್ರಿಲ್ 10 ರಂದು, ಚುನಾವಣಾ ಆಯೋಗದ ಪರವಾಗಿ ಹಾಜರಾದ ವಕೀಲ ನಿರಂಜನ್ ರಾಜಗೋಪಾಲನ್ ನ್ಯಾಯಾಲಯಕ್ಕೆ ವಿವರಿಸಿದರು.

ಬಿಎಸ್‌ಎನ್‌ಎಲ್‌, ಚೆನ್ನೈ ಮೆಟ್ರೋ ರೈಲು, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಸೌಲಭ್ಯ ದಕ್ಷಿಣ ರೈಲ್ವೆಗೆ ಇಲ್ಲ ಎಂದರು.

ಅಂಚೆ ಮತಪತ್ರಗಳನ್ನು ಈಗಾಗಲೇ ಮುದ್ರಿಸಲಾಗಿದ್ದು ವೈಯಕ್ತಿಕ ಮತದಾರರು ಮನವಿ ಸಲ್ಲಿಸುವ ದಿನಾಂಕ ಮಾರ್ಚ್ 25 ರಂದು ಮುಕ್ತಾಯವಾಗಿರುವುದರಿಂದ ದಕ್ಷಿಣ ರೈಲ್ವೆ ಉದ್ಯೋಗಿಗಳಿಗೆ ಆ ಸೌಲಭ್ಯ ವಿಸ್ತರಿಸುವುದು ಈಗ ಸಾಧ್ಯ ಇಲ್ಲ ಎಂದು ಇಸಿಐ ನುಡಿಯಿತು.

ವಾದಗಳನ್ನು ದಾಖಲಿಸಿಕೊಂಡ ನ್ಯಾಯಾಲಯ ಅರ್ಜಿದಾರರ ಮನವಿಯಂತೆ ಇಸಿಐಗೆ ತಾನು ಯಾವುದೇ ನಿರ್ದೇಶನಗಳನ್ನು ನೀಡಲಾಗದು. ಆದರೆ ದಕ್ಷಿಣ ರೈಲ್ವೆ ತನ್ನ ಉದ್ಯೋಗಿಗಳು ಮತದಾನಕ್ಕಾಗಿ ರಜೆ ಕೋರಿದರೆ ಅದನ್ನು ಪರಿಗಣಿಸಬಹುದು ಎಂದಿತು.

Related Stories

No stories found.
Kannada Bar & Bench
kannada.barandbench.com