ಲೈಂಗಿಕ ಮನೋಭಾವ ಬದಲಿಸುವ ವೈದ್ಯಕೀಯ ಯತ್ನ ನಿಷೇಧಿಸಿದ ಮದ್ರಾಸ್‌ ಹೈಕೋರ್ಟ್‌; ಶಾಲಾ, ಕಾಲೇಜು ಪಠ್ಯಕ್ರಮ ಬದಲಿಗೆ ಸಲಹೆ

ಸಮಾಜದಲ್ಲಿ ಜಾಗೃತಿ ಮೂಡಿಸಲು, ಪೊಲೀಸ್‌ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್‌ಜಿಬಿಟಿಕ್ಯು ಸಮುದಾಯಗಳ ಬಗ್ಗೆ ಇರುವ ಪೂರ್ವಾಗ್ರಹ ನಿವಾರಣೆ ಮಾಡಲು ಸಮಗ್ರವಾದ ಕ್ರಮಕೈಗೊಳ್ಳಲು ನ್ಯಾಯಾಲಯ ಸಲಹೆ ಮಾಡಿದೆ.
LGBTQ, Madras HC
LGBTQ, Madras HC

ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತರನ್ನು (ಎಲ್‌ಜಿಬಿಟಿಕ್ಯು) ಒಳಗೊಂಡ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಮಾಜ ಮತ್ತು ಪೊಲೀಸ್‌ ಹಾಗೂ ನ್ಯಾಯಾಂಗದಲ್ಲಿ ಆ ಸಮುದಾಯದವರ ಬಗ್ಗೆ ಇರುವ ಪೂರ್ವಾಗ್ರಹವನ್ನು ನಿವಾರಿಸುವ ಸಂಬಂಧ ಸಮಗ್ರವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಸಲಹೆ ನೀಡಿದೆ (ಎಸ್‌ ಸುಷ್ಮಾ ವರ್ಸಸ್‌ ಪೊಲೀಸ್‌ ಆಯುಕ್ತರು).

ಈ ನಿಟ್ಟಿನಲ್ಲಿ ಶಾಲೆ ಮತ್ತು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವ ಮೂಲಕ ಎಲ್‌ಜಿಬಿಟಿಕ್ಯುಐಎ ಮತ್ತಿತರ ಸಮುದಾಯದ ಜನರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಲೈಂಗಿಕ ಮನೋಭಾವ ಬದಲಿಸುವ ವೈದ್ಯಕೀಯ ಯತ್ನ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.

ಸಂಬಂಧಿಕರಿಂದ ರಕ್ಷಣೆ ಒದಗಿಸುವಂತೆ ಸಲಿಂಗ ದಂಪತಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್‌ ಆನಂದ್‌ ವೆಂಕಟೇಶ್‌ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ. ಅರ್ಜಿದಾರರನ್ನು ವಕೀಲ ಎಸ್‌ ಮುನಿರಾಜು ಪ್ರತಿನಿಧಿಸಿದ್ದರು.

Also Read
ಸಲಿಂಗ ಸಂಬಂಧ ಅರ್ಥ ಮಾಡಿಕೊಳ್ಳಲು ಮನಃಶಾಸ್ತ್ರಜ್ಞರೊಂದಿಗೆ ಭೇಟಿಗೆ ಮುಂದಾದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ

ನ್ಯಾಯಾಲಯ ಹೊರಡಿಸಿರುವ ಕೆಲವು ಮಹತ್ವದ ನಿರ್ದೇಶನಗಳು ಇಂತಿವೆ:

 • ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸಲಾಗುವ ಪೋಷಕರು-ಶಿಕ್ಷಕರ ಸಭೆಗಳಲ್ಲಿ ಎಲ್‌ಜಿಬಿಟಿಕ್ಯುಐಎ ಮತ್ತಿತರರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

 • ಎಲ್‌ಜಿಬಿಟಿಕ್ಯುಐಎ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಸಂಬಂಧ ನೀತಿ ಮತ್ತು ಸಂಪನ್ಮೂಲಗಳಿಗೆ ಅಗತ್ಯ ತಿದ್ದುಪಡಿ ಮಾಡಬೇಕು.

 • ಎಲ್‌ಜಿಬಿಟಿಕ್ಯೂಐಎ ಸಮುದಾಯದವರ ಬಗ್ಗೆ ತಾರತಮ್ಯ ನೀತಿ ಅನುಸರಿಸದಂತೆ ಮಾಡಲು ಸಲಹೆ, ಸೂಚನೆ ಮತ್ತು ಶಿಫಾರಸ್ಸುಗಳ ಜೊತೆಗೆ ನೋಂದಾಯಿತ ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯದ ಬೆಂಬಲ ಪಡೆದು ಎಲ್ಲಾ ಮಟ್ಟದಲ್ಲೂ ನ್ಯಾಯಿಕ ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು.

 • ಎಲ್‌ಜಿಬಿಟಿಕ್ಯುಐಎ ಮತ್ತಿತರ ಸಮುದಾಯದವರ ರಕ್ಷಣೆ ಮತ್ತು ಅವರ ಮೇಲಿನ ಅಪರಾಧ ನಿಯಂತ್ರಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಜಾರಿ ಕುರಿತು ಚರ್ಚಿಸಲು ಆಗಾಗ್ಗೆ ಕಾರ್ಯಕ್ರಮ ನಡೆಸಬೇಕು.

 • ಎಲ್‌ಜಿಬಿಟಿಕ್ಯುಐಎ ಮತ್ತಿತರ ಸಮುದಾಯದವರ ಕಾನೂನಾತ್ಮಕ ಹಕ್ಕುಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಜಾಗೃತಿ ಮೂಡಿಸಬೇಕು.

 • ಲಿಂಗ, ಲೈಂಗಿಕತ್ವ, ಲೈಂಗಿಕ ಮನೋಭಾವ ಮತ್ತು ವಿಭಿನ್ನತೆ ಒಪ್ಪಿಕೊಳ್ಳುವುದರ ಅರಿವಿಗೆ ಸಂಬಂಧಿಸಿದಂತೆ ಮಾನಸಿಕ ಆರೋಗ್ಯ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಬೇಕು.

 • ಲಿಂಗ ಬದಲಾವಣೆ ಕೃತ್ಯದಲ್ಲಿ ಭಾಗಿಯವಾಗುವ ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಅವರ ಪರವಾನಗಿ ರದ್ದತಿ ಸೇರಿದಂತೆ ಕಠಿಣ ಕ್ರಮಕ್ಕೆ ಮುಂದಾಗಬೇಕು.

 • ಲಿಂಗ-ಅನುರೂಪವಲ್ಲದ ವಿದ್ಯಾರ್ಥಿಗೆ ಲಿಂಗ-ತಟಸ್ಥ ಶೌಚಗೃಹದ ಲಭ್ಯತೆ ಖಚಿತಪಡಿಸಬೇಕು.

 • ತೃತೀಯ ಲಿಂಗಿಗಳ ಶೈಕ್ಷಣಿಕ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗ ಬದಲಾವಣೆಗೆ ಅವಕಾಶ ಕಲ್ಪಿಸಬೇಕು.

 • ಶೈಕ್ಷಣಿಕ ಪ್ರವೇಶ, ಸ್ಪರ್ಧಾತ್ಮಕ ಪರೀಕ್ಷೆಗಳು ಇತ್ಯಾದಿ ದಾಖಲಾತಿಯಲ್ಲಿ ಪುರುಷ ಅಥವಾ ಮಹಿಳೆ ವಿಭಾಗದ ಜೊತೆಗೆ ಮಂಗಳಮುಖಿ ಕಲಂ ಸೇರಿಸಬೇಕು.

 • ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಲ್ಲಿನ ಕುಂದುಕೊರತೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ಎಲ್‌ಜಿಬಿಟಿಕ್ಯುಐಎ ಒಳಗೊಂಡ ಸಲಹೆಗಾರರನ್ನು ನೇಮಿಸಬೇಕು.

 • ತೃತೀಯಲಿಂಗಿಗಳ (ಹಕ್ಕುಗಳ ಸಂರಕ್ಷಣೆ) ಕಾಯಿದೆ ಮತ್ತು ಮಂಗಳಮುಖಿಯರ (ಹಕ್ಕುಗಳ ಸಂರಕ್ಷಣೆ) ನಿಯಮಗಳು 2020ರ ನಿಯಮ 11ರ ಅನ್ವಯ ಅಪರಾಧಗಳು ಮತ್ತು ದಂಡಗಳ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಪೊಲೀಸ್ ಸಿಬ್ಬಂದಿಗೆ ಸಂವೇದನಾಶೀಲ ಕಾರ್ಯಕ್ರಮಗಳನ್ನು ನಡೆಸಬೇಕು.

Related Stories

No stories found.
Kannada Bar & Bench
kannada.barandbench.com