ಕರ್ನಾಟಕ ಸಂಗೀತ ಪ್ರಕಾರದ ಮಹತ್ವದ ಗಾಯಕ ಮತ್ತು ಹೋರಾಟಗಾರ ಟಿ ಎಂ ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಎಂಎಸ್ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಪ್ರಶಸ್ತಿ ನೀಡದಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಮದ್ರಾಸ್ ಮ್ಯೂಸಿಕ್ ಅಕಾಡೆಮಿಗೆ ತಡೆಯಾಜ್ಞೆ ವಿಧಿಸಿದೆ.
ಕೃಷ್ಣ ಅವರಿಗೆ ಇಂತಹ ಪ್ರಶಸ್ತಿ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಸಂಗೀತದ ದಂತಕತೆಯೇ ಆಗಿರುವ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರು ಪುರಸ್ಕರಿಸಿದ್ದಾರೆ.
ಮ್ಯೂಸಿಕ್ ಅಕಾಡೆಮಿ ಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದಕ್ಕೆ ಅಥವಾ ನೀಡದೇ ಇರುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ ಆದರೆ, ಪ್ರಶಸ್ತಿಗೆ ಸುಬ್ಬುಲಕ್ಷ್ಮಿ ಅವರ ಹೆಸರಿಡಬಾರದು ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಯಾವುದೇ ವ್ಯಕ್ತಿಗೆ ನಿಜವಾಗಿಯೂ ಸುಬ್ಬುಲಕ್ಷ್ಮಿ ಅವರ ಬಗ್ಗೆ ಗೌರವಾದರಗಳಿದ್ದರೆ ಅವರು ಸುಬ್ಬುಲಕ್ಷ್ಮಿಯವರ ಆಸೆ ಮತ್ತು ನಿರ್ಧಾರ ಏನಾಗಿತ್ತು ಎಂದು ತಿಳಿದೂ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬಾರದು ಎಂದು ಹೈಕೋರ್ಟ್ ನುಡಿಯಿತು.
ತಮ್ಮ ನಿಧನಾನಂತರ ತಮ್ಮ ಹೆಸರಿನಲ್ಲಿ ಯಾವುದೇ ಟ್ರಸ್ಟ್ ಇಲ್ಲವೇ ಸ್ಮಾರಕ ಮಾಡಬಾರದು ಎಂದು ಸುಬ್ಬುಲಕ್ಷ್ಮಿ ಅವರ ಉಯಿಲು ಸ್ಪಷ್ಟವಾಗಿ ಹೇಳುತ್ತದೆ ಎಂದಿದ್ದ ಅರ್ಜಿದಾರರು ಕಳೆದ ಆಗಸ್ಟ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಬ್ಬುಲಕ್ಷ್ಮಿ ಅವರ ಉಯಿಲಿನಲ್ಲಿರುವ ಆಶಯಗಳಿಗೆ ವಿರುದ್ಧವಾಗಿ ಪ್ರಶಸ್ತಿ ನೀಡುವುದು ತಮಗೂ ತಮ್ಮ ಕುಟುಂಬಕ್ಕೂ ಇಷ್ಟವಿಲ್ಲ. ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ನೀಡುವುದನ್ನು ನಿರ್ಬಂಧಿಸುವುದಷ್ಟೇ ಅಲ್ಲದೆ ಇಡಿಯಾಗಿ ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲೇ ಪ್ರಶಸ್ತಿ ನೀಡದಂತೆ ಆದೇಶಿಸಬೇಕೆಂದು ಅವರು ಕೋರಿದ್ದರು.
ಕೃಷ್ಣ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುಬ್ಬುಲಕ್ಷ್ಮಿ ಅವರ ವಿರುದ್ಧ ನಿಂದನಾತ್ಮಕ ದಾಳಿ ಮಾಡುತ್ತಿದ್ದು ಸುಬ್ಬುಲಕ್ಷ್ಮಿ ಅವರ ವರ್ಚಸ್ಸಿಗೆ ಧಕ್ಕೆ ತಂದಿರುವುದರಿಂದ ಕೃಷ್ಣ ಅವರಿಗೆ ಈ ಪ್ರಶಸ್ತಿ ನೀಡಹೊರಟಿರುವುದು ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದ್ದರು.