ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗಳು ಒಡಕುಂಟುಮಾಡುವಂತಿದ್ದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿವೆ. ಅವರು ಹಾಗೆ ಹೇಳಿಕೆ ನೀಡಬಾರದಿತ್ತು ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ಟೀಕಿಸಿದೆ.
ಸನಾತನ ಧರ್ಮದ ಬಗ್ಗೆ ಪರಿಶೀಲಿಸದೆ ಇರವ ಹೇಳಿಕೆಗಳನ್ನು ನೀಡುವುದು ತಪ್ಪು ಮಾಹಿತಿ ಹರಡುವುದಕ್ಕೆ ಸಮ ಎಂದು ನ್ಯಾ. ಅನಿತಾ ಸುಮಂತ್ ಹೇಳಿದರು.
"ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವವರು ಪ್ರತಿಪಾದಿಸಬಹುದ ತತ್ವ ಒಂದೇ, ಅದೆಂದರೆ ಸಾಂವಿಧಾನಿಕತೆಯ ತತ್ವ. ಸನಾತನ ಧರ್ಮದ ಬಗ್ಗೆ ಪರಿಶೀಲಿಸದ ಹೇಳಿಕೆಗಳನ್ನು ನೀಡುವುದು ತಪ್ಪು ಮಾಹಿತಿಯನ್ನು ಹರಡುವುದಕ್ಕೆ ಸಮ" ಎಂದು ನ್ಯಾಯಾಲಯ ಹೇಳಿದೆ.
ಆದರೆ, ಉದಯನಿಧಿ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವ ಆದೇಶ ಹೊರಡಿಸಲು ನ್ಯಾಯಮೂರ್ತಿಗಳು ನಿರಾಕರಿಸಿದರು.
ಉದಯನಿಧಿ ಅವರನ್ನು ಕಾನೂನಿನ ಪ್ರಕಾರ ಹುದ್ದೆಯಿಂದ ಅನರ್ಹಗೊಳಿಸದೆ ತಾನು ಅಂತಹ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
"ಉದಯನಿಧಿ ಅವರ ವಿರುದ್ಧದ ಅರ್ಜಿಯನ್ನು ನಿರ್ವಹಿಸಬಹುದಾದರೂ, ಸಚಿವರ ವಿರುದ್ಧ ಕಾನೂನಿನ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯ ಅವರನ್ನು ಅನರ್ಹಗೊಳಿಸಲು ಕಾರಣವಾಗುವ ಆದೇಶ ಹೊರಡಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಉದಯನಿಧಿ, ಸಚಿವ ಪಿ ಕೆ ಶೇಖರಬಾಬು ಹಾಗೂ ಸಂಸದ ಎ ರಾಜಾ ಅವರ ವಿರುದ್ಧ ಹಿಂದೂ ಮುನ್ನಾನಿ ಸಂಘಟನೆ ಸಲ್ಲಿಸಿದ್ದ ಅರ್ಜಿಗೆೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.
ಉದಯನಿಧಿ ಅವರ ಪರವಾಗಿ ಹಿರಿಯ ವಕೀಲ ಪಿ ವಿಲ್ಸನ್ ವಾದ ಮಂಡಿಸಿದ್ದರು.