ಅಂಬೇಡ್ಕರ್ ಭಾವಚಿತ್ರ ಅಳವಡಿಕೆ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್: ಗಾಂಧೀಜಿ, ತಿರುವಳ್ಳುವರ್‌ಗೆ ಇಲ್ಲ ಅಡ್ಡಿ

ಗಾಂಧೀಜಿ ಮತ್ತು ತಿರುವಳ್ಳುವರ್ ಭಾವಚಿತ್ರ ಇಲ್ಲವೇ ಪ್ರತಿಮೆಗಳನ್ನು ಮಾತ್ರ ನ್ಯಾಯಾಲಯಗಳಲ್ಲಿ ಪ್ರದರ್ಶಿಸಬಹುದಾಗಿದ್ದು ಡಾ. ಅಂಬೇಡ್ಕರ್ ಸೇರಿದಂತೆ ಯಾವುದೇ ನಾಯಕರ ಭಾವಚಿತ್ರ ಪ್ರದರ್ಶಿಸುವಂತಿಲ್ಲ ಎಂದು ಹೈಕೋರ್ಟ್ ಪೂರ್ಣಪೀಠ ತಿಳಿಸಿದೆ.
Dr BR Ambedkar
Dr BR Ambedkar

ತಮಿಳುನಾಡಿನ ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಸಂತ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಛಾಯಾಚಿತ್ರ, ಪ್ರತಿಮೆ ಅಥವಾ ಭಾವಚಿತ್ರ ಅಳವಡಿಸುವಂತಿಲ್ಲ ಎಂದು ಏಪ್ರಿಲ್ 11 ರಂದು ನೀಡಲಾಗಿದ್ದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಪೂರ್ಣ ನ್ಯಾಯಾಲಯ ಪುನರುಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ನ್ಯಾಯಾಲಯಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವಂತೆ ವಿವಿಧ ವಕೀಲರ ಸಂಘಗಳು ಮಾಡಿದ್ದ ಮನವಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿತು.

ನ್ಯಾಯಾಲಯಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಪ್ರದರ್ಶಿಸಲು ವಕೀಲ ಸಮುದಾಯ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಅಕ್ಟೋಬರ್ 2008ರ ಹಿಂದಿನ ನಿರ್ಣಯಗಳ ಸರಣಿ  ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ ಪೂರ್ಣ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿರುವುದಾಗಿ ಜುಲೈ 7ರಂದು ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಸುತ್ತೋಲೆ ತಿಳಿಸಿದೆ.

"ಇತ್ತೀಚೆಗೆ ಏಪ್ರಿಲ್ 11, 2013ರಂದು, ಪೂರ್ಣ ನ್ಯಾಯಾಲಯ ಇದೇ ರೀತಿಯ ಮನವಿಯನ್ನು ಪರಿಗಣಿಸಿದ್ದು ಹಿಂದಿನ ಎಲ್ಲಾ ನಿರ್ಣಯಗಳನ್ನು ಪುನರುಚ್ಚರಿಸುತ್ತಾ, ಮಹಾತ್ಮ ಗಾಂಧೀಜಿ ಮತ್ತು ಸಂತ ತಿರುವಳ್ಳುವರ್ ಅವರ ಪ್ರತಿಮೆಗಳು ಮತ್ತು ಭಾವಚಿತ್ರ ಹೊರತುಪಡಿಸಿ, ಯಾವುದೇ ಇತರ ಭಾವಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ನ್ಯಾಯಾಲಯದ ಆವರಣದೊಳಗೆ ಎಲ್ಲಿಯೂ ಪ್ರದರ್ಶಿಸಬಾರದು ಎಂದು ಸರ್ವಾನುಮತದಿಂದ ನಿರ್ಣಯಿಸಿದೆ" ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Also Read
[ಅಂಬೇಡ್ಕರ್‌ ವಿವಾದ] ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ವರ್ಗಾವಣೆ

ಸುತ್ತೋಲೆಯ ಪ್ರಕಾರ, ರಾಜ್ಯದ ನ್ಯಾಯಾಲಯದ ಸಭಾಂಗಣಗಳಲ್ಲಿ ಡಾ ಅಂಬೇಡ್ಕರ್ ಭಾವಚಿತ್ರವನ್ನು ಪ್ರದರ್ಶಿಸಲು ಅನುಮತಿ ಕೋರಿ ತಮಿಳುನಾಡು ಡಾ ಬಿ ಆರ್ ಅಂಬೇಡ್ಕರ್ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಅಕ್ಟೋಬರ್ 22, 2008ರಂದು ತಿರಸ್ಕರಿಸಿತ್ತು.

ಅಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಮೆಗಳಿಗೆ ಉಂಟಾದ ಹಾನಿ ಮತ್ತು ಕಾನೂನು ಸುವ್ಯವಸ್ಥೆಗೆ ಒದಗಿದ ಸಮಸ್ಯೆಯನ್ನು ಮನಗಂಡು ಯಾವುದೇ ರಾಜಕೀಯ ನಾಯಕರ ಪ್ರತಿಮೆ ಸ್ಥಾಪಿಸುವುದನ್ನು ನಿಷೇಧಿಸಲು ಮಾರ್ಚ್ 11, 2010ರಂದು, ಪೂರ್ಣ ನ್ಯಾಯಾಲಯ ತೀರ್ಮಾನಿಸಿತ್ತು.

ತರುವಾಯ, ಏಪ್ರಿಲ್ 2011ರಲ್ಲಿ, ನ್ಯಾಯಾಲಯದ ಸಭಾಂಗಣಗಳಲ್ಲಿ ಯಾವುದೇ ಭಾವಚಿತ್ರ ಪ್ರದರ್ಶನ ನಿಷೇಧಿಸಲು ನಿರ್ಧರಿಸಲಾಗಿತ್ತು.

ಹೊಸದಾಗಿ ನಿರ್ಮಿಸಿರುವ ನ್ಯಾಯಾಲಯದ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಿರುವ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವಂತೆ ಆಳಂದು ನ್ಯಾಯಾಲಯದ ವಕೀಲರ ಸಂಘಕ್ಕೆ ಮನವರಿಕೆ ಮಾಡಿಕೊಡುವಂತೆ ಕಾಂಚೀಪುರಂನ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ 2013ರ ಏಪ್ರಿಲ್ 20ರಂದು ಪೂರ್ಣ ನ್ಯಾಯಾಲಯ ಆದೇಶಿಸಿತ್ತು. ಕಡಲೂರು ವಕೀಲರ ಸಂಘದ ಇದೇ ರೀತಿಯ ಪ್ರಾರ್ಥನೆಯನ್ನು ತಿರಸ್ಕರಿಸಲಾಯಿತು.

ಹಿಂದಿನ ಎಲ್ಲಾ ನಿರ್ಧಾರಗಳನ್ನು ಪುನರುಚ್ಚರಿಸುತ್ತಾ, ಸಂಬಂಧಪಟ್ಟ ಜಿಲ್ಲಾ ಮತ್ತು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಪೂರ್ಣ ನ್ಯಾಯಾಲಯದ ಆದೇಶ ಮತ್ತು ನಿರ್ಣಯಗಳನ್ನು ಅಕ್ಷರಶಃ ಪಾಲಿಸಬೇಕು ಎಂದು ಹೊಸದಾಗಿ ಹೊರಡಿಸಿದ ಸುತ್ತೋಲೆ ತಿಳಿಸಿದೆ.

[ಸುತ್ತೋಲೆಯನ್ನು ಇಲ್ಲಿ ಓದಿ]

Attachment
PDF
Madras_High_Court_PortraitCircular.pdf
Preview

Related Stories

No stories found.
Kannada Bar & Bench
kannada.barandbench.com