ಹಣ ಅಕ್ರಮ ವರ್ಗಾವಣೆ: ಸೆಂಥಿಲ್ ಬಾಲಾಜಿಗೆ ಜಾಮೀನು ನಿರಾಕರಿಸಿದ ಮದ್ರಾಸ್ ಹೈಕೋರ್ಟ್

ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಸೂಚಿಸಿರುವ ಹೈಕೋರ್ಟ್‌ "ದೈನಂದಿನ ಆಧಾರದ ಮೇಲೆ" ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.
ಸೆಂಥಿಲ್ ಬಾಲಾಜಿ, ಮದ್ರಾಸ್ ಹೈಕೋರ್ಟ್
ಸೆಂಥಿಲ್ ಬಾಲಾಜಿ, ಮದ್ರಾಸ್ ಹೈಕೋರ್ಟ್

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಜಾರಿ ನಿರ್ದೇಶನಾಲಯದಿಂದ (ಇ ಡಿ) ಬಂಧಿತರಾಗಿದ್ದ ಡಿಎಂಕೆ ಮಾಜಿ ಸಚಿವ ವಿ ಸೆಂಥಿಲ್‌ ಬಾಲಾಜಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಆದರೆ, ಸೆಂಥಿಲ್ ಬಾಲಾಜಿ ಸುಮಾರು ಎಂಟು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ ಎಂಬ ವಿಚಾರವನ್ನು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರ ಗಮನಕ್ಕೆ ತರಲಾಯಿತು. ಹೀಗಾಗಿ ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು ಎಂದಿರುವ ಅವರು "ದಿನವಹಿ ಆಧಾರದ ಮೇಲೆ" ವಿಚಾರಣೆ ನಡೆಸುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು.

ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್
ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್

ಅರ್ಹತೆಯ ಆಧಾರದಲ್ಲಿ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾ. ವೆಂಕಟೇಶ್‌ ಮಾಜಿ ಸಚಿವ ಸೆಂಥಿಲ್‌ ಅವರು ವಿಚಾರಣೆಗಾಗಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಹೆಚ್ಚು ಅರ್ಥಪೂರ್ಣ ಎಂದರು.

ಸೆಂಥಿಲ್‌ ಪರ ಹಾಜರಾದ ಹಿರಿಯ ವಕೀಲ ಸಿ ಆರ್ಯಮಾ ಸುಂದರಂ ಅವರು ಈ ಹಿಂದೆ ಇಡಿ ಈಗಾಗಲೇ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದು ಅಗತ್ಯವಿರುವ ಎಲ್ಲಾ ದಾಖಲೆಗಳು ಮತ್ತು ಪುರಾವೆಗಳನ್ನು ಪಡೆದುಕೊಂಡಿರುವುದರಿಂದ ಅವರನ್ನು ಬಂಧನದಲ್ಲಿರಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ರಮೇಶ್ ಜಾಮೀನು ಅರ್ಜಿಯನ್ನು ವಿರೋಧಿಸಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ್ದ ವಿಚಾರಣೆಯ ನಂತರ ಸೆಂಥಿಲ್ ಬಾಲಾಜಿ ಅವರನ್ನು ಕಳೆದ ಜೂನ್ 14ರಂದು ಬಂಧಿಸಲಾಗಿತ್ತು. 2011ರಿಂದ 2015ರವರೆಗೆ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಅವರು ಅಕ್ರಮ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

ಅವರ ಜಾಮೀನು ಅರ್ಜಿಯನ್ನು ಚೆನ್ನೈನ ಸೆಷನ್ಸ್ ನ್ಯಾಯಾಲಯ ಈ ಹಿಂದೆ ಮೂರು ಸಂದರ್ಭಗಳಲ್ಲಿ ತಿರಸ್ಕರಿಸಿತ್ತು. ಅವರ ವೈದ್ಯಕೀಯ ಜಾಮೀನು ಅರ್ಜಿಯನ್ನು ಕಳೆದ ಅಕ್ಟೋಬರ್‌ನಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು

Related Stories

No stories found.
Kannada Bar & Bench
kannada.barandbench.com