ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು (ಪಿಎಸ್‌ಒ) ಒದಗಿಸುವಂತೆ ನ್ಯಾಯಾಲಯಗಳು ಪೊಲೀಸರಿಗೆ ನಿರ್ದೇಶನ ನೀಡಲಾರಂಭಿಸಿದರೆ ಸಮಾಜ ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತದೆ ಎಂದು ಈಚೆಗೆ ತಿಳಿಸಿರುವ ಮದ್ರಾಸ್ ಹೈಕೋರ್ಟ್ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಕೋರಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಬಿಜೆಪಿಯ ಒಬಿಸಿ ರಾಜ್ಯ ಕಾರ್ಯದರ್ಶಿ ಕೆ ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಎಪ್ರಿಲ್ 1 ರಂದು ವಜಾಗೊಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಅರ್ಜಿದಾರರಾದ ವೆಂಕಟೇಶ್ ಅವರ ಹತ್ತಿರದ ಸಂಬಂಧಿಯನ್ನು ಅಪರಿಚಿತ ವ್ಯಕ್ತಿಗಳು ಕೊಂದಿದ್ದರು. ಬಳಿಕ ವೆಂಕಟೇಶ್ ಅವರಿಗೂ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಬಂದೂಕು ಪರವಾನಗಿ ಪಡೆದ ವೆಂಕಟೇಶ್ ಪಿಎಸ್‌ಒಗಾಗಿ ಪೊಲೀಸ್ ಇಲಾಖೆಯ ಮೊರೆ ಹೋಗಿದ್ದರು. ಆದರೆ ಸ್ವತಃ ಕ್ರಿಮಿನಲ್ ಹಿನ್ನೆಲೆಯ ವೆಂಕಟೇಶ್ ಅವರಿಗೆ ಪಿಎಸ್‌ಒ ನೀಡಲು ಇಲಾಖೆ ನಿರಾಕರಿಸಿತ್ತು.
ವೆಂಕಟೇಶ್ ವಿರುದ್ಧ ಆಂಧ್ರಪ್ರದೇಶದಲ್ಲಿ 49 ಮತ್ತು ತಮಿಳುನಾಡಿನಲ್ಲಿ 3 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸ್ಥಿತಿಗತಿ ವರದಿ ಸಲ್ಲಿಸಿದ್ದರು. ವೆಂಕಟೇಶ್ ರೌಡಿ ಶೀಟರ್ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
"ಸ್ವಯಂ ಕೃತ್ಯದ ಪರಿಣಾಮವಾಗಿ ವೆಂಕಟೇಶ್ ಅವರಿಗೆ ಬಹುತೇಕ ಪ್ರಾಣ ಬೆದರಿಕೆಗಳು ಬಂದಿವೆ. ಪೊಲೀಸ್ ರಕ್ಷಣೆಯ ಮನವಿ ಪರಿಗಣಿಸುವಾಗ ಅಂತಹ ರಕ್ಷಣೆ ಕೋರಿರುವ ವ್ಯಕ್ತಿಯ ಹಿನ್ನೆಲೆ ಮತ್ತು ಆತನ ನಿಲುವು ಗಮನಿಸುವುದು ಬಹಳ ಮುಖ್ಯ. ಯಾವುದೇ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಇಲ್ಲದ ವ್ಯಕ್ತಿಯಾಗಿದ್ದರೆ ನ್ಯಾಯಾಲಯ ಯಾವುದೇ ಹಿಂಜರಿಕೆ ಇಲ್ಲದೆ ಅರ್ಜಿದಾರರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನೇರವಾಗಿ ನಿರ್ದೇಶಿಸುತ್ತಿತ್ತು. ಒಬ್ಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿಯಿದ್ದರೆ ಮತ್ತು ಅವನು ತನ್ನ ಸ್ವಂತ ಚಟುವಟಿಕೆಗಳಿಂದ ದ್ವೇಷ ಇಲ್ಲವೇ ಈರ್ಷ್ಯೆಗೆ ಆಸ್ಪದ ನೀಡಿದ್ದರೆ ಆಗ ಆ ವ್ಯಕ್ತಿಗಳಿಗೆ ಬೆದರಿಕೆಗಳು ಬರುತ್ತವೆ" ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಮುಂದುವರೆದು, "ಅಂತಹ ವ್ಯಕ್ತಿಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಸೂಚಿಸಿದರೆ ಅದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಪರಾಧ ಹಿನ್ನೆಲೆಯುಳ್ಳವರಿಗೆ ಪೊಲೀಸ್ ರಕ್ಷಣೆಯನ್ನು ನೀಡಲಾಗುತ್ತದೆ ಎಂಬ ಭಾವನೆ ಸಾಮಾನ್ಯ ನಾಗರಿಕರಿಗೆ ಬರಬಾರದು. ಅಂತಹ ಅನಿಸಿಕೆ ಮೂಡಿಸಿದರೆ ಈಗಿರುವ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅವರು ಕಳೆದುಕೊಳ್ಳುತ್ತಾರೆ” ಎಂದು ನ್ಯಾಯಾಲಯ ವಿವರಿಸಿದೆ.