ರಾಜ್ಯಾದ್ಯಂತ ಇರುವ ದೇವಾಲಯಗಳಲ್ಲಿ ʼಶುದ್ಧತೆ ಮತ್ತು ಪಾವಿತ್ರ್ಯ' ಕಾಪಾಡುವ ನಿಟ್ಟಿನಲ್ಲಿ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳನ್ನು ನಿಷೇಧಿಸುವಂತೆ ತಮಿಳುನಾಡು ಸರ್ಕಾರಕ್ಕೆ ಶುಕ್ರವಾರ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ನಿರ್ದೇಶಿಸಿದೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ಪ್ರಾಚೀನ ಅರುಳಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಜೆ ಸತ್ಯ ನಾರಾಯಣ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಮತ್ತು ಸಂದರ್ಶಕರು ಯೋಗ್ಯವಾದ ವಸ್ತ್ರ ಸಂಹಿತೆಗೆ ಬದ್ಧರಾಗುವುದನ್ನು ಖಾತರಿಪಡಿಸುವಂತೆ ಸಂಬಂಧಿತ ದೇವಸ್ಥಾನದ ಆಡಳಿತ ಮಂಡಳಿಗೆ ಪೀಠ ನಿರ್ದೇಶಿಸಿದೆ. ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳ ಬಳಕೆಯು ಭಕ್ತರ ಗಮನವನ್ನು ಬೇರೆಡೆ ತಿರುಗಿಸುತ್ತದೆ. ಹೀಗಾಗಿ, ದೇವಸ್ಥಾನದಲ್ಲಿ ಅವುಗಳ ಬಳಕೆಯನ್ನು ಆಡಳಿತ ಮಂಡಳಿಗಳು ನಿಯಂತ್ರಿಸಬೇಕು ಎಂದು ಪೀಠ ಹೇಳಿದೆ.
“ಸಂವಿಧಾನದ 25ನೇ ವಿಧಿಯಡಿ ಎಲ್ಲರೂ ಸ್ವತಂತ್ರವಾಗಿ ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಿ, ಆಚರಿಸಿ, ಪ್ರಚಾರ ಮಾಡಬಹುದಾಗಿದೆ. ಅದಾಗ್ಯೂ, ದೇವಾಲಯದ ಆವರಣದೊಳಗೆ ಕಾರ್ಯನಿರ್ವಹಿಸುವ ಮತ್ತು ಆಚರಿಸುವ ಅಂತಹ ಸ್ವಾತಂತ್ರ್ಯವು ಕೆಲವೊಂದು ನಿಯಂತ್ರಣಗಳಿಗೆ ಒಳಪಟ್ಟಿರುತ್ತದೆ. ಆಗಮ ಶಾಸ್ತ್ರದಲ್ಲಿ ದೇವಾಲಯದಲ್ಲಿ ಪೂಜಾ ಸೇವೆಗಳಲ್ಲಿ ಅನುಸರಿಸಬೇಕಾದ ವಿಧಿವಿಧಾನಗಳ ನಿಯಮಗಳನ್ನು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ, ದೇವಾಲಯದ ಅಧಿಕಾರಿಗಳು ಪೂಜೆಯ ಸಭ್ಯತೆ ಮತ್ತು ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವುದನ್ನು ಖಚಿತಪಡಿಸಬೇಕು. ಹೀಗಾಗಿ, ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಅಥವಾ ಕ್ಯಾಮೆರಾಗಳ ಬಳಕೆಯು ಭಕ್ತರ ಚಿತ್ತ ಕೆಡಿಸುವುದರಿಂದ ಸಂಬಂಧಿತ ಪ್ರಾಧಿಕಾರಗಳು ಅದನ್ನು ನಿಯಂತ್ರಿಸಬೇಕು” ಎಂದು ನ್ಯಾಯಾಲಯ ಹೇಳಿದೆ.