ಏರ್ ಇಂಡಿಯಾ ವಿಮಾನಯಾನ ಕಂಪೆನಿಯಿಂದ ಹೂಡಿಕೆ ಹಿಂತೆಗೆತ ಮತ್ತು ಅದರ ಖಾಸಗೀಕರಣಕ್ಕೂ ಮುನ್ನ ಉದ್ಯೋಗಿಗಳ ಹಕ್ಕುಗಳು ಮತ್ತು ಸೇವಾ ಷರತ್ತುಗಳನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಏರ್ ಕಾರ್ಪೊರೇಶನ್ ಉದ್ಯೋಗಿಗಳ ಒಕ್ಕೂಟ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ (ಏರ್ ಕಾರ್ಪೊರೇಶನ್ ಉದ್ಯೋಗಿಗಳ ಒಕ್ಕೂಟ ವರ್ಸಸ್ ಭಾರತ ಸರ್ಕಾರ).
ಉದ್ಯೋಗಿಗಳಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ ಎಂಬ ಮಾತ್ರಕ್ಕೆ ಬೃಹತ್ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾದ ಆರ್ಥಿಕ ನೀತಿಯ ಭಾಗವಾದ ನಿರ್ಧಾರವನ್ನು ಸಾಮಾನ್ಯವಾಗಿ ನ್ಯಾಯಿಕ ಪರಿಶೋಧನೆಗೆ ಒಳಪಡಿಸಲಾಗದು ಎಂದು ನ್ಯಾಯಮೂರ್ತಿ ವಿ ಪರ್ತಿಬನ್ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.
ಹೀಗಾಗಿ, ಇದೊಂದೇ ಕಾರಣಕ್ಕೆ ಹೂಡಿಕೆ ಹಿಂತೆಗೆತ ಪ್ರಕ್ರಿಯೆಗೆ ತಡೆಯೊಡ್ಡುವುದು ಸರಿಯಲ್ಲ. ಇದು ಇಡೀ ಹೂಡಿಕೆ ಹಿಂತೆಗೆತ ಪ್ರಕ್ರಿಯೆಯಲ್ಲಿ ದೋಷ ಇರಬಹುದು ಎಂಬುದಕ್ಕೆ ಎಡೆಮಾಡಿಕೊಡಬಹುದು ಎಂದು ನ್ಯಾಯಾಲಯ ಹೇಳಿದೆ. "ಷೇರು ಕ್ರಯ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂತಹ ಯಾವುದೇ ಊಹೆಯನ್ನು ಮಾಡಲು ಮುಂದಾಗುವುದು ಸಾಕಷ್ಟು ವಿಳಂಬವಾದಂತೆ" ಎಂದು ಪೀಠ ಅಭಿಪ್ರಯಾಯಪಟ್ಟಿತು. ಮನವಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜನವರಿ 25ರಂದು ತೀರ್ಪು ಕಾಯ್ದಿರಿಸಿತ್ತು.