Land
LandImage for representative purpose

ಸರ್ಕಾರದಿಂದ ₹1ಕ್ಕೆ ಭೂಮಿ ಪಡೆದು ಲಕ್ಷಾಂತರ ಬಾಡಿಗೆ ಗಳಿಸುತ್ತಿದ್ದ ಖಾಸಗಿ ಸಂಸ್ಥೆಗೆ ಮದ್ರಾಸ್‌ ಹೈಕೋರ್ಟ್‌ ಲಗಾಮು

ತಮಿಳುನಾಡಿನ ಕೈಗಾರಿಕಾ ಉತ್ತೇಜನ ನಿಗಮವು ಖಾಸಗಿ ಕಂಪನಿಯೊಂದಕ್ಕೆ 17.64 ಎಕರೆ ಭೂಮಿಯನ್ನು 99 ವರ್ಷಗಳ ಅವಧಿಗೆ ₹1 ವಾರ್ಷಿಕ ಬಾಡಿಗೆಗೆ ನೀಡಿತ್ತು. ಆದರೆ, ಸಂಸ್ಥೆಯು "ಉಪಗುತ್ತಿಗೆಗಳ" ಮೂಲಕ ಅಪಾರ ಪ್ರಮಾಣದ ಬಾಡಿಗೆ ಪಡೆಯುತ್ತಿತ್ತು.
Published on

ನಾಮಮಾತ್ರ ದರದಲ್ಲಿ (ಅತ್ಯಲ್ಪ ದರ) ಗುತ್ತಿಗೆ ನೀಡಲಾದ ಸಾರ್ವಜನಿಕ ಕೈಗಾರಿಕಾ ಭೂಮಿಯನ್ನು ವಾಣಿಜ್ಯಿಕವಾಗಿ ದುರುಪಯೋಗಪಡಿಸಿಕೊಳ್ಳಲಾಗದು ಎಂಬ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಮಿಳುನಾಡು ರಾಜ್ಯ ಕೈಗಾರಿಕಾ ಉತ್ತೇಜನ ನಿಗಮಕ್ಕೆ (ಎಸ್‌ಐಪಿಸಿಒಟಿ) ಗುತ್ತಿಗೆದಾರ ಸಂಸ್ಥೆಯೊಂದರಿಂದ ಅದು ಉಪಗುತ್ತಿಗೆ ಮೂಲಕ ಸಂಗ್ರಹಿಸಿರುವ ಶುಲ್ಕವನ್ನು ವಸೂಲಿ ಮಾಡಲು ಅನುಮತಿಸಿದೆ (ಎಸ್‌ಐಪಿಸಿಒಟಿ ವರ್ಸಸ್‌ ಕ್ಯಾರಿಯರ್ಸ್ ಪ್ರೈವೇಟ್ ಲಿಮಿಟೆಡ್).

ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣಿಯಂ ಮತ್ತು ಸಿ ಕುಮಾರಪ್ಪನ್ ಅವರ ವಿಭಾಗೀಯ ಪೀಠವು ಈ ರೀತಿಯ ವ್ಯವಸ್ಥೆಯು "ಅನ್ಯಾಯಯುತ ಸಂಪತ್ತಿನವರ್ಧನೆ"ಗೆ ಸಮನಾಗಿದ್ದು, "ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ" ಎಂದು ಹೇಳಿದೆ. ಆ ಮೂಲಕ ಕ್ಯಾರಿಯರ್ಸ್ ಪ್ರೈವೇಟ್ ಲಿಮಿಟೆಡ್‌ ತನಗೆ ನೀಡಲಾದ ಭೂಮಿಯನ್ನು ಉಪಗುತ್ತಿಗೆ ನೀಡುವ ಮೂಲಕ ಗಳಿಸಿರುವ ಶುಲ್ಕವನ್ನು ಪಾವತಿಸಲು ಅಗ್ರಹಿಸಿ ನಿಗಮವು ಇರಿಸಿದ್ದ ಬೇಡಿಕೆಯನ್ನು ರದ್ದುಗೊಳಿಸಿರುವ 2022 ರ ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿದೆ.

ತಮಿಳುನಾಡಿನ ಕೈಗಾರಿಕಾ ಉತ್ತೇಜನ ನಿಗಮವು 2005ರಲ್ಲಿ, ಖಾಸಗಿ ಕಂಪನಿಗೆ ಕೈಗಾರಿಕಾ ವಲಯದಲ್ಲಿ 17.64 ಎಕರೆ ಭೂಮಿಯನ್ನು 99 ವರ್ಷಗಳ ಅವಧಿಗೆ ₹1 ವಾರ್ಷಿಕ ಬಾಡಿಗೆಗೆ ನೀಡಿತ್ತು. ಗೋದಾಮು ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಸ್ಥಾಪಿಸಲು ಅನುಮತಿಸಿ ಈ ಭೂಮಿಯನ್ನು ನೀಡಲಾಗಿತ್ತು. ಆದರೆ, ಸಂಸ್ಥೆಯು ನಂತರ ಮೂರನೇ ವ್ಯಕ್ತಿಗಳೊಂದಿಗೆ "ಉಪಗುತ್ತಿಗೆ ಒಪ್ಪಂದಗಳನ್ನು" ಮಾಡಿಕೊಳ್ಳುವ ಮೂಲಕ ಅಪಾರ ಪ್ರಮಾಣ ಬಾಡಿಗೆಯನ್ನು ಪಡೆಯುತ್ತಿತ್ತು.

ಅಂತಹ ಒಂದು ಉಪಗುತ್ತಿಗೆ ಒಪ್ಪಂದವನ್ನು ಪರಿಶೀಲಿಸಿದಾಗ, ಕಂಪನಿಯು 93,718 ಚದರ ಅಡಿಗಳಿಗೆ ತಿಂಗಳಿಗೆ ₹12,41,764 ಬಾಡಿಗೆ ಪಡೆಯುತ್ತಿರುವುದನ್ನು ನ್ಯಾಯಾಲಯ ಗಮನಿಸಿತು, ಅಲ್ಲದೆ, ಒಪ್ಪಂದಲ್ಲಿ ವಾರ್ಷಿಕ 5% ಬಾಡಿಗೆ ಏರಿಕೆ ಮತ್ತು ವಿಳಂಬ ಪಾವತಿಗೆ 18% ಬಡ್ಡಿಯನ್ನು ಸಹ ಸೇರಿಸಲಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ, ಗುತ್ತಿಗೆದಾರರು ನಿಗಮಕ್ಕೆ ತಮಗೆ ನೀಡಲಾದ ಸಂಪೂರ್ಣ ಭೂಮಿಗೆ ವಾರ್ಷಿಕ ₹1 ಮಾತ್ರ ಪಾವತಿಸುತ್ತಿದ್ದರು!

ಇದನ್ನು ಗಮನಿಸಿದ ನ್ಯಾಯಾಲಯವು, "ಇದು ಪ್ರತಿವಾದಿ / ಕಂಪನಿಯ ಅನ್ಯಾಯಯುತ ಸಂಪತ್ತಿನವರ್ಧನೆ ಸಮನಾಗಿದ್ದು, ಮೇಲ್ಮನವಿದಾರರಾದ ರಾಜ್ಯಕ್ಕೆ ಹಾನಿಕಾರಕವಾಗಿದೆ. ರಾಜ್ಯಕ್ಕೆ ಒಂದು ಮತ್ತು ಖಾಸಗಿ ಗುತ್ತಿಗೆದಾರರಿಗೆ ಇನ್ನೊಂದು ರೀತಿಯ ಅಸಮಾನ ಗುತ್ತಿಗೆ ಷರತ್ತುಗಳು ನಿಸ್ಸಂದೇಹವಾಗಿ ಸಾರ್ವಜನಿಕ ಆಸ್ತಿ ಹಕ್ಕನ್ನು ಉಲ್ಲಂಘಿಸುತ್ತವೆ ಹಾಗೂ ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಮುಂದುವರೆದು, "ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕವಾದ ಒಪ್ಪಂದವನ್ನು ಖಾಸಗಿ ವ್ಯಕ್ತಿಗಳೊಂದಿಗೆ ಮಾಡಿಕೊಳ್ಳಲು ರಾಜ್ಯಕ್ಕೆ ಅಧಿಕಾರವಿಲ್ಲ," ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಾರ್ವಜನಿಕ ವಿಶ್ವಸ್ಥ ಸಿದ್ಧಾಂತವನ್ನು ಉಲ್ಲೇಖಿಸಿರುವ ನ್ಯಾಯಾಲಯವು, ಸಾರ್ವಜನಿಕ ಸಂಪನ್ಮೂಲಗಳನ್ನು ಸಾಮಾನ್ಯ ಒಳಿತಿಗಾಗಿ ನಿರ್ವಹಿಸಬೇಕೇ ಹೊರತು ಖಾಸಗಿ ಲಾಭಕೋರತನದ ಸಾಧನಗಳಾಗಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ. ಇದನ್ನು ಸಮರ್ಥಿಸುವ ಸುಪ್ರೀಂ ಕೋರ್ಟ್‌ನ ಪೂರ್ವ ನಿದರ್ಶನ ತೀರ್ಪುಗಳನ್ನು ಉಲ್ಲೇಖಿಸಿದೆ.

ಅಲ್ಲದೆ, ಉಪಗುತ್ತಿಗೆ ಶುಲ್ಕಗಳನ್ನು ಮರುಪಡೆಯಲು ನಿಗಮವು ಹೊಂದಿರುವ ಹಕ್ಕನ್ನು ನ್ಯಾಯಾಲಯವು ಎತ್ತಿಹಿಡಿದಿದ್ದು, ಸಾರ್ವಜನಿಕ ಭೂಮಿಯ ರಿಯಾಯಿತಿ ಹಂಚಿಕೆಗಳನ್ನು ಅಸಮಾನ ಖಾಸಗಿ ಲಾಭದ ಸಾಧನಗಳಾಗಿ ಪರಿವರ್ತಿಸಲಾಗುವುದಿಲ್ಲ ಎಂದು ಶ್ರುತಪಡಿಸಿದೆ.

Kannada Bar & Bench
kannada.barandbench.com