ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಬಿಡುಗಡೆಗೆ ಆದೇಶಿಸಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಮಂಗಳವಾರ ಭಿನ್ನ ತೀರ್ಪು ನೀಡಿದ್ದು ಪ್ರಕರಣವನ್ನು ವಿಸ್ತೃತ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರು ಇಂದು ಭಿನ್ನ ತೀರ್ಪು ನೀಡಿದರು.
ನ್ಯಾ. ನಿಶಾ ಬಾನು ಅವರು ಬಾಲಾಜಿ ಬಿಡುಗಡೆಗಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಮನವಿ ಸಮರ್ಥನೀಯವಾಗಿದ್ದು ಅದನ್ನು ಪುರಸ್ಕರಿಸಬೇಕು ಎಂದರು. ಪೊಲೀಸ್ ಕಸ್ಟಡಿಗೆ ಪಡೆಯುವ ಹೊಣೆಗಾರಿಕೆ ಇ ಡಿಗೆ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಆದರೆ ನ್ಯಾ. ಬಾನು ಅವರ ಅಭಿಪ್ರಾಯವನ್ನು ಒಪ್ಪಲಾಗದು ಎಂದು ನ್ಯಾ. ಭರತ್ ಚಕ್ರವರ್ತಿ ತಿಳಿಸಿದರು. ರಿಮಾಂಡ್ ಆದೇಶದ ನಂತರ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನಿರ್ವಹಿಸಬಹುದೇ ಎಂದು ಅವರು ಪ್ರಶ್ನಿಸಿದರು. ಬಾಲಾಜಿ ಅವರ ಬಂಧನ ಅಕ್ರಮ ಎನ್ನಲು ಯಾವುದೇ ಸಕಾರಣ ತೋರಿಸಿಲ್ಲ. ಹೀಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಲಾಗುವುದು ಎಂದು ಅವರು ಹೇಳಿದರು.
ಎದೆನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಸೆಂಥಿಲ್ ಅವರು ಆಸ್ಪತ್ರೆಯಲ್ಲಿ ತಂಗಿದ್ದ ಅವಧಿಯನ್ನು ಇ ಡಿ ಕಸ್ಟಡಿ ಅವಧಿಯಿಂದ ಹೊರಗಿಡಬೇಕು ಎಂದು ನ್ಯಾ. ಚಕ್ರವರ್ತಿ ಹೇಳಿದರು. ಅಷ್ಟರೊಳಗೆ ಸೆಂಥಿಲ್ ದೈಹಿಕವಾಗಿ ಸದೃಢರಾದರೆ ಹತ್ತು ದಿನಗಳಲ್ಲಿ ಮತ್ತೆ ಇ ಡಿ ಕಸ್ಟಡಿಗೆ ವಹಿಸಬಹುದು. ಅಲ್ಲದೆ ಸೆಂಥಿಲ್ ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆಯನ್ನು ಜೈಲು ಆಸ್ಪತ್ರೆಯಲ್ಲಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಆದರೂ ಭಿನ್ನ ತೀರ್ಪು ಹೊರಬಿದ್ದಿದ್ದರಿಂದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳೆದುರು ಇರಿಸಲಾಗಿದೆ. ಅವರು ಪ್ರಕರಣ ಇತ್ಯರ್ಥಕ್ಕೆ ವಿಸ್ತೃತ ಪೀಠ ರಚಿಸಲಿದ್ದಾರೆ.
ಸೆಂಥಿಲ್ ಅವರ ಪತ್ನಿ ಎಸ್ ಮೇಘಲಾ ಅವರು ಜೂನ್ 14ರಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇ ಡಿ ಹೂಡಿದ್ದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಬಂಧನವನ್ನು ಅವರು ಪ್ರಶ್ನಿಸಿದ್ದರು.