ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ: ಮದ್ರಾಸ್ ಹೈಕೋರ್ಟ್ ವಿರುದ್ಧ ಸುಪ್ರೀಂ ಅಸಮಾಧಾನ

ಸಾಕ್ಷ್ಯ ಬಹಿರಂಗಪಡಿಸುವಿಕೆ ನಿರ್ಬಂಧಿಸುವ ಯಾವುದೇ ನಿರ್ದಿಷ್ಟ ವಿನಾಯತಿಯನ್ನು ಸರ್ಕಾರವು ಕೋರದ ಹೊರತಾಗಿ ನ್ಯಾಯಾಲಯ ಮುಚ್ಚಿದ ಲಕೋಟೆ ಬಳಸಲು ಅನುಮತಿಸಬಾರದು ಎಂದ ಸರ್ವೋಚ್ಚ ನ್ಯಾಯಾಲಯ.
ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ: ಮದ್ರಾಸ್ ಹೈಕೋರ್ಟ್ ವಿರುದ್ಧ ಸುಪ್ರೀಂ ಅಸಮಾಧಾನ
Published on

ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿರಿಸಲು ನಿರ್ಧರಿಸಿದ ಮದ್ರಾಸ್‌ ಹೈಕೋರ್ಟ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ಇದು ಆರೋಪಿಗಳ ಹಕ್ಕು ಮತ್ತು ಸಹಜ ನ್ಯಾಯದ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ [ಎಸ್‌ ಪಿ ವೇಲುಮಣಿ ಮತ್ತು ಅರಪ್ಪೋರ್ ಇಯಕ್ಕಂ ಇನ್ನಿತರರ ನಡುವಣ ಪ್ರಕರಣ.]

ಸಾಕ್ಷ್ಯ ಬಹಿರಂಗಪಡಿಸುವಿಕೆ ನಿರ್ಬಂಧಿಸುವ ಯಾವುದೇ ನಿರ್ದಿಷ್ಟ ವಿನಾಯತಿಯನ್ನು ಸರ್ಕಾರವು ಕೋರದ ಹೊರತಾಗಿ ನ್ಯಾಯಾಲಯ ಮುಚ್ಚಿದ ಲಕೋಟೆ ಬಳಸಲು ಅನುಮತಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ತಿಳಿಸಿದೆ.

ತಮ್ಮ ವಿರುದ್ಧ ನಡೆದಿದ್ದ ಪ್ರಾಥಮಿಕ ತನಿಖಾ ವರದಿಯನ್ನು ತಮಗೆ ಒದಗಿಸಲು ನಿರಾಕರಿಸಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶದ ವಿರುದ್ಧ ತಮಿಳುನಾಡು ಎಐಎಡಿಎಂಕೆ ಮಾಜಿ ಸಚಿವ ಎಸ್‌ ಪಿ ವೇಲುಮಣಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Also Read
ಭವಿಷ್ಯದಲ್ಲಿ ದಾಖಲಾಗಬಹುದಾದ ಪ್ರಕರಣಕ್ಕೂ ಜಾಮೀನು: ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಆದೇಶ ಆಘಾತಕಾರಿ ಎಂದ ಸುಪ್ರೀಂ

ವೇಲುಮಣಿ ಸಚಿವರಾಗಿದ್ದಾಗ ಟೆಂಡರ್ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿ ಆಪ್ತರಿಗೆ ಟೆಂಡರ್ ದೊರೆಯಲು ಸಹಾಯ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮೇಲ್ಮನವಿದಾರರ ವಿರುದ್ಧ ಪ್ರಸ್ತುತ ಪ್ರಕರಣದ ಪ್ರಥಮ ಪ್ರತಿವಾದಿ ಅರಪ್ಪೋರ್ ಇಯಕ್ಕಂ ಆರೋಪಿಸಿದ್ದರು. ಹೈಕೋರ್ಟ್‌ ನಿರ್ದೇಶನದಂತೆ ತನಿಖಾ ವರದಿಯನ್ನು ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದರು. ಎಐಎಡಿಎಂಕೆ ಅಧಿಕಾರಕ್ಕೆ ಬಂದಾಗ ಪ್ರಕರಣಕ್ಕೆ ಇತಿಶ್ರೀ ಹಾಡಲು ನಿರ್ಧರಿಸಲಾಗಿತು. ತರುವಾಯ ಐಪಿಸಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ವೇಲುಮಣಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇತ್ತ ತನಿಖಾ ವರದಿಯ ಪ್ರತಿ ಒದಗಿಸುವಂತೆ ವೇಲುಮಣಿ ಅವರು ಮಾಡಿದ್ದ ಮನವಿಯನ್ನು ಹೈಕೋರ್ಟ್‌ ನಿರಾಕರಿಸಿತ್ತು. ಪರಿಣಾಮ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ನಿರ್ಧಾರ ತೆಗೆದುಕೊಳ್ಳುವುದನ್ನು ಸಂಪೂರ್ಣ ಸರ್ಕಾರಕ್ಕೇ ಬಿಡುವ ಬದಲು ಹೈಕೋರ್ಟ್‌ ತನಿಖಾ ವರದಿ ಪರಿಶೀಲಿಸಬೇಕಿತ್ತು ಎಂದ ಸುಪ್ರೀಂ ಕೋರ್ಟ್‌ ಸರ್ಕಾರದ ನಿಲುವು ಬದಲಾದಾಗ, ಹೈಕೋರ್ಟ್ ತನ್ನನ್ನು ಸಮರ್ಥಿಸಿಕೊಳ್ಳಲು ಮೇಲ್ಮನವಿದಾರರಿಗೆ ಅವಕಾಶ ನೀಡಬೇಕಾಗಿತ್ತು ಇಲ್ಲವೇ ಸರ್ಕಾರ ಸೂಕ್ತ ಸಮರ್ಥನೆ ಮಾಡಿಕೊಳ್ಳಲು ಹೇಳಬೇಕಿತ್ತು ಎಂದಿದೆ. ಸಿಆರ್‌ಪಿಸಿ ಸೆಕ್ಷನ್ 207ರ ಅಡಿ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಒಳಪಡುವವರೆಗೆ ಆರೋಪಿಗಳಿಗೆ ದಾಖಲೆ ಒದಗಿಸುವ ಅಗತ್ಯವಿಲ್ಲ ಎಂಬ ಸರ್ಕಾರದ ವಾದವನ್ನು ಕೂಡ ನ್ಯಾಯಾಲಯ ತಿರಸ್ಕರಿಸಿತು.

ಎಫ್‌ಐಆರ್‌ ಪ್ರಕರಣದ ಆರಂಭ ಹೈಕೋರ್ಟ್‌ ವಿಚಾರಣೆಯಿಂದ ಉದ್ಭವಿಸಿರುವುದರಿಂದ ಈ ಪ್ರಕರಣ ಭಿನ್ನವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಪ್ರಕರಣದ ಹಿನ್ನೆಲೆ ಪರಿಗಣಿಸಿ ಸೆಕ್ಷನ್ 207ರ ಅಡಿಯ ಅಗತ್ಯವನ್ನು ಕಲ್ಲಿನಲ್ಲಿ ಕೆತ್ತಿದ ಬದಲಿಸಲಾಗದ ನಿಬಂಧನೆಯಂತೆ ಓದಲಾಗದು. ಹಾಗೆ ಮಾಡಿದರೆ ಅದು ಮೇಲ್ಮನವಿದಾರರ ಹಕ್ಕು ಮತ್ತು ಸಹಜ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಂತೆಯೇ ಪ್ರಾಥಮಿಕ ತನಿಖೆಯ ವರದಿಯನ್ನು ದಾಖಲೆಗಳ ಸಹಿತವಾಗಿ ಮೇಲ್ಮನವಿದಾರರಿಗೆ ಒದಗಿಸಬೇಕು. ತಮ್ಮ ಅರ್ಹತೆಗಳ ಆಧಾರದಲ್ಲಿ ರಿಟ್‌ ಅರ್ಜಿಗಳನ್ನು ಹೈಕೋರ್ಟ್‌ ಮತ್ತೆ ಚಾಲ್ತಿಗೆ ತರಬೇಕು. ಎಫ್‌ಐಆರ್‌ ರದ್ದುಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸೂಕ್ತ ಪರಿಹಾರ ಪಡೆಯಲು ಮೇಲ್ಮನವಿದಾರರು ಸ್ವತಂತ್ರರು ಎಂದು ನ್ಯಾಯಾಲಯ ಹೇಳಿತು. ಮೇಲ್ಮನವಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಮುಕುಲ್‌ ರೋಹಟ್ಗಿ, ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲರಾದ ರಂಜಿತ್‌ ಕುಮಾರ್‌ ಎಸ್‌ ಮತ್ತು ವಿ ಕೃಷ್ಣಮೂರ್ತಿ ಹಾಗೂ ಸಹ ವಕೀಲರು ವಾದಿಸಿದರು.

Kannada Bar & Bench
kannada.barandbench.com