ವಡಪಳನಿ ಮುರುಗನ್ ದೇಗುಲದ ಅವ್ಯವಹಾರ: ದೂರು ದಾಖಲಿಸದಂತೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗೆ ತಡೆಯೊಡ್ಡಿದ ಅಧಿಕಾರಿಗಳು

ದೇಗುಲದ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಲು ಯತ್ನಿಸಿದರೂ ಸಿಬ್ಬಂದಿ ತಡೆದಿದ್ದಾರೆ ಎಂದು ನ್ಯಾ. ಸುಬ್ರಮಣ್ಯಂ ಗಮನ ಸೆಳೆದರು.
Justice SM Subramaniam
Justice SM Subramaniam

ಚೆನ್ನೈನ ವಡಪಳನಿ ಮುರುಗನ್ ದೇಗುಲದಲ್ಲಿ ತಾನು ಕಂಡ ಹಣಕಾಸು ಅವ್ಯವಹಾರಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಲ್ಲಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (ಮುಜರಾಯಿ ಇಲಾಖೆ) ಆಯುಕ್ತರನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್‌ ಎಂ ಸುಬ್ರಮಣ್ಯಂ ಕೋರಿದ್ದಾರೆ.  

ದೇವಾಲಯದ ಸಿಬ್ಬಂದಿ ₹ 50ರ ಟಿಕೆಟ್‌ ಬದಲಿಗೆ ₹ 5ರ ಟಿಕೆಟ್‌ ನೀಡುತ್ತಿದ್ದಾರೆ. ವಿಚಾರಿಸಿದಾಗ ಅಲ್ಲಿನ ಮಹಿಳಾ ಸಿಬ್ಬಂದಿ ತಣ್ಣಗೆ ₹ 5ರ ಟಿಕೆಟ್‌ ಹಿಂಪಡೆದು ₹ 50ರ ಟಿಕೆಟ್‌ ನೀಡಿದಳು. ಅಂತಹ ಅನೇಕ ಟಿಕೆಟ್‌ಗಳು ಕೌಂಟರ್‌ನಲ್ಲಿ ಕಂಡುಬಂದವು. ಈ ಸಂಬಂಧ ದೂರು ನೀಡಲು ಯತ್ನಿಸಿದರೂ ಸಿಬ್ಬಂದಿ ಹಾಗೆ ಮಾಡದಂತೆ ತಡೆದರು ಎಂದು ಆಯುಕ್ತರಿಗೆ ನೀಡಿರುವ ದೂರಿನಲ್ಲಿ ನ್ಯಾ. ಸುಬ್ರಮಣ್ಯಂ ಅವರು ತಿಳಿಸಿದ್ದಾರೆ.

Also Read
ಕಾಂತಾರ ಸಿನಿಮಾ: ಎರಡನೇ ದೂರು ಹಿಂದಿರುಗಿಸಿದ ಕೇರಳ ನ್ಯಾಯಾಲಯ; ʼವರಾಹ ರೂಪಂʼ ಬಳಕೆಗೆ ಇದ್ದ ಪ್ರತಿಬಂಧಕಾದೇಶ ತೆರವು

ಟಿಕೆಟ್‌ ಕೌಂಟರಿನಲ್ಲಿ ಮಹಿಳೆಯೊಂದಿಗೆ ಕುಳಿತಿದ್ದ ಸೂಪರಿಂಟೆಂಡೆಂಟ್‌ ಎಂದು ಕರೆದುಕೊಳ್ಳುತ್ತಿದ್ದ ವ್ಯಕ್ತಿ ಪೊಲೀಸರು ಸ್ಥಳಕ್ಕೆ ಬಂದ ನಂತರವೂ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ. ದೂರು ನೀಡಿ ಸ್ಥಳದಿಂದ ತೆರಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಹೇಳಿರುವುದಾಗಿಯೂ ತಿಳಿಸಿದ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ದೂರು ದಾಖಲಿಸುವ ಸಲುವಾಗಿ ಸೋಮವಾರ ನ್ಯಾಯಾಲಯಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಹಾಜರಾಗಬೇಕು ಎಂದು ಆಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವ ಅವರು ಯಾವುದೇ ಲೋಪದೋಷ, ಅಕ್ರಮ ಕಂಡುಬಂದಲ್ಲಿ , ಕಾರ್ಯನಿರ್ವಾಹಕ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿ ಮತ್ತು ಜನವರಿ 9, 2023ರೊಳಗೆ ವರದಿ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ.

ವಡಪಳನಿ ದೇಗುಲ ಚೆನ್ನೈನ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಸಿನಿ ತಾರೆಯರು ಈ ದೇಗುಲಕ್ಕೆ ನಡೆದುಕೊಳ್ಳುವ ಕಾರಣಕ್ಕಾಗಿಯೇ ಇದು ವಿಶೇಷ ಪ್ರಸಿದ್ಧಿ ಪಡೆದಿದೆ.

Related Stories

No stories found.
Kannada Bar & Bench
kannada.barandbench.com