'ನನಗೆ ಮಾಡಲು ಉತ್ತಮ ಕೆಲಸವಿದೆ': ಡಿಎಂಕೆ ನಾಯಕರ ವಿರುದ್ದದ ನಿಂದನಾ ಪ್ರಕ್ರಿಯೆಗೆ ಮದ್ರಾಸ್‌ ಹೈಕೋರ್ಟ್‌ ನಕಾರ

ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಮೂವರು ಡಿಎಂಕೆ ನಾಯಕರು ಖುಲಾಸೆಗೊಂಡಿರುವುದನ್ನು ಮರುಪರಿಶೀಲಿಸಲು ಸ್ವಯಂಪ್ರೇರಿತವಾಗಿ ಮುಂದಾಗಿರುವ ನ್ಯಾ. ವೆಂಕಟೇಶನ್‌ ಅವರನ್ನು ಟೀಕಿಸಿದವರ ವಿರುದ್ಧ ಕ್ರಮಕ್ಕೆ ಅವರು ನಿರಾಕರಿಸಿದ್ದಾರೆ.
Justice Anand Venkatesh, Madras High Court
Justice Anand Venkatesh, Madras High Court
Published on

ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಮತ್ತು ಖುಲಾಸೆಯಾಗಿರುವ ಡಿಎಂಕೆಯ ಹಾಲಿ ಮೂವರು ಸಚಿವರ ವಿರುದ್ಧದ ಪ್ರಕರಣಗಳ ಮರುಪರಿಶೀಲನೆಗೆ ಮುಂದಾಗಿರುವ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌ ಆನಂದ್‌ ವೆಂಕಟೇಶ್‌ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ ಎಸ್‌ ಭಾರತಿ ಮತ್ತು ಇತರರ ವಿರುದ್ಧ ಕ್ರಮಕೈಗೊಳ್ಳಲು ಶುಕ್ರವಾರ ಅವರು ನಿರಾಕರಿಸಿದ್ದಾರೆ.

ವಕೀಲ ಆರ್‌ ಕೃಷ್ಣಮೂರ್ತಿ ಅವರು ಭಾರತಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದಾಗ “ಟೀಕೆಯನ್ನು ಸಹಿಸಲು ಸಾಧ್ಯವಿಲ್ಲದವರು ಸಾರ್ವಜನಿಕ ಬದುಕಿನಲ್ಲಿರಲು ಅರ್ಹರಲ್ಲ” ಎಂದು ನ್ಯಾಯಮೂರ್ತಿ ವೆಂಕಟೇಶ್‌ ಹೇಳಿದ್ದಾರೆ.

ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕ್ರಿಯೆ ಆರಂಭಿಸಿರುವುದರಿಂದ ದುರುದ್ದೇಶಪೂರ್ವಕವಾಗಿ ನ್ಯಾಯಮೂರ್ತಿಗಳನ್ನು ಟೀಕಿಸಲಾಗಿದೆ. ಆ ಮೂಲಕ ಡಿಎಂಕೆ ನಾಯಕರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ವಕೀಲ ವಾದಿಸಿದ್ದರು.

“ಯಾರು ಏನು ಬೇಕಾದರೂ ಮಾತನಾಡಲಿ. ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇನೆ ಎಂಬುದು ನನಗೆ ಗೊತ್ತಿದೆ. ನನ್ನ ವಿರುದ್ಧ ಟೀಕೆ ಕೇಳಿಬರಲಿದೆ ಎಂಬುದನ್ನು ಅರಿತು ಈ ಕಚೇರಿಯಲ್ಲಿ ಕುಳಿತು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಅದು ನ್ಯಾಯಮೂರ್ತಿಯಾಗಿ ನನ್ನ ಕೆಲಸ ಮಾಡುವುದರಿಂದ ವಿಮುಕ್ತಿಗೊಳಿಸಲಾಗದು” ಎಂದು ನ್ಯಾ. ವೆಂಕಟೇಶ್‌ ಅವರು ಮುಕ್ತ ನ್ಯಾಯಾಲಯದಲ್ಲಿ ಹೇಳಿದ್ದಾರೆ.

“ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ನಡೆದುಕೊಂಡಿದ್ದೇನೆಯೇ ಇಲ್ಲವೇ ಎಂಬುದು ನನಗೆ ಗೊತ್ತು. ಬೇರೆಯವರು ಆ ರೀತಿ, ಈ ರೀತಿ ಎಂದು ಹಲವು ವ್ಯಾಖ್ಯಾನಗಳನ್ನು ಮಾಡಬಹುದು. ಈ ವಿಚಾರಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ ನನಗೆ ಮಾಡುವುದಕ್ಕೆ ಅದಕ್ಕಿಂತಲೂ ಉತ್ತಮ ಕೆಲಸವಿದೆ. ಈ ನ್ಯಾಯಾಲಯದ ಮುಂದೆ ಬಂದು ನಿಲ್ಲುವ ಕಟ್ಟಕಡೆಯ ದಾವೆದಾರರ ಬಗ್ಗೆ ನಾನು ಕಾಳಜಿವಹಿಸಬೇಕಿದೆ, ಆ ಬಗ್ಗೆ ನನಗೆ ಹೆಚ್ಚು ಕಳಕಳಿ ಇದೆ; ಇದನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಕಾಳಜಿ ಇಲ್ಲ” ಎಂದು ತಮಿಳಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಶಾಸಕರು ಮತ್ತು ಸಂಸದರ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ಪೀಠದ ನ್ಯಾಯಮೂರ್ತಿಯಾದ ವೆಂಕಟೇಶ್‌ ಅವರು ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಖುಲಾಸೆಯಾಗಿರುವ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮತ್ತು ಅವರ ಪತ್ನಿ, ಆರೋಪ ಮುಕ್ತಗೊಂಡಿರುವ ಹಣಕಾಸು ಸಚಿವ ತಂಗಮ್‌ ತೆನ್ನರಸು ಹಾಗೂ ಕಂದಾಯ ಸಚಿವ ಕೆ ಎಸ್‌ ಎಸ್‌ ಆರ್‌ ರಾಮಚಂದ್ರನ್‌ ವಿರುದ್ಧ ಸ್ವಯಂಪ್ರೇರಿತ ತೀರ್ಪು ಮರುಪರಿಶೀಲನಾ ಆದೇಶ ಮಾಡಿದ್ದಾರೆ.

ಅಂತಿಮ ವರದಿಯನ್ನು ಒಪ್ಪಿಕೊಂಡು ಪೊನ್ನಮುಡಿ ಅವರನ್ನು ಖುಲಾಸೆಗೊಳಿಸಿದ ಮತ್ತು ಸಚಿವರಾದ ತೆನ್ನರಸು ಮತ್ತು ರಾಮಚಂದ್ರನ್‌ ಅವರನ್ನು ಆರೋಪ ಮುಕ್ತಗೊಳಿಸಿದ ಅಧೀನ ವಿಶೇಷ ನ್ಯಾಯಾಲಯ, ಪ್ರಾಸಿಕ್ಯೂಷನ್‌ ಮತ್ತು ರಕ್ಷಣಾ ವಕೀಲರು ಕೈಜೋಡಿಸಿರುವ ಸಾಧ್ಯತೆ ಇದೆ ಎಂದು ನ್ಯಾ. ವೆಂಕಟೇಶ್‌ ಹೇಳಿದ್ದರು.

ತೀರ್ಪಿನ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದ ಭಾರತಿ ಅವರು ಡಿಎಂಕೆ ಮಂತ್ರಿಗಳನ್ನು ಮಾತ್ರವೇ ಗುರಿ ಮಾಡಿಕೊಳ್ಳುವ ಮೂಲಕ ನ್ಯಾಯಮೂರ್ತಿಗಳು ನಿರ್ದಿಷ್ಟವಾಗಿ ಕೆಲವರನ್ನು ಮಾತ್ರವೇ ಗುರಿಪಡಿಸಿ ಆಯ್ದುಕೊಳ್ಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

Kannada Bar & Bench
kannada.barandbench.com