ನಕಲಿ ದಾಖಲೆ ಪಡೆದು ಭಾರತದ ಪಾಸ್‌ಪೋರ್ಟ್ ಅನ್ನು ಶ್ರೀಲಂಕಾ ಪ್ರಜೆಗಳು ಹಾಗೂ ಭಾರತೀಯರಿಗೆ ನೀಡುತ್ತಿದ್ದ ವ್ಯೂಹವನ್ನು ಬಯಲು ಮಾಡಿದ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಕಾರ್ಯವೈಖರಿಗೆ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಈಚೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಪಾಸ್‌ಪೋರ್ಟ್ ಮಂಜೂರಾತಿ ಪ್ರಾಧಿಕಾರವು ಅರ್ಜಿದಾರರ ಮನವಿ ಸ್ವೀಕರಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಪಾಸ್‌ಪೋರ್ಟ್ ವಂಚನೆ ಹಗರಣವನ್ನು ಬೆನ್ನತ್ತಿದ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ನಾನು ಮೆಚ್ಚುಗೆ ಸೂಚಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಅವರು ಕಾವಲು ನಾಯಿಯ ಕೆಲಸ ಮಾಡಿದ್ದಾರೆ. ಅವರು ಇಲ್ಲದಿದ್ದರೆ ಇದು ಬೆಳಕಿಗೆ ಬರುತ್ತಿರಲಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
“ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಪಾಸ್‌ಪೋರ್ಟ್ ವಂಚನೆ ಹಗರಣವನ್ನು ದೊಡ್ಡ ಪ್ರಮಾಣದಲ್ಲಿ ಪ್ರಸ್ತಾಪಿಸಿದ್ದಾರೆ ಎಂಬುದನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ” ಎಂದು ಪೀಠವು ಹೇಳಿದೆ.
“ಪಾಸ್‌ಪೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠವು ಮಾಡಿರುವ ಆದೇಶ ಪಾಲಿಸದಿರುವುದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಪ್ರಮಾದ ಎಸಗಿರುವ ಸರ್ಕಾರಿ ಅಧಿಕಾರಿಗಳ ವಿಚಾರಣೆಗೆ ಅನುಮತಿ ಪಡೆದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಇನಷ್ಟೇ ಅಂತಿಮ ವರದಿ ಸಲ್ಲಿಸಬೇಕಿದೆ” ಎಂದು ಪೀಠ ಹೇಳಿದೆ.