ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ಅವರನ್ನು ತಮಿಳುನಾಡು ಸಚಿವ ಸ್ಥಾನದಿಂದ ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ತೀರ್ಪಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಕೆಲ ಬದಲಾವಣೆಗಳನ್ನು ಮಾಡಿದೆ.
ನ್ಯಾಯಮೂರ್ತಿ ಅನಿತಾ ಸುಮಂತ್ ಅವರು ಮಾರ್ಚ್ 6ರಂದು ಹೈಕೋರ್ಟ್ ಜಾಲತಾಣದಲ್ಲಿ ತೀರ್ಪು ಪ್ರಕಟಿಸಿದ್ದರು. ಅದರಲ್ಲಿ "ಇಂದು ನಮಗೆ ತಿಳಿದಿರುವಂತೆ ಜಾತಿ ವ್ಯವಸ್ಥೆಯ ಮೂಲ ಒಂದು ಶತಮಾನಕ್ಕೂ ಕಡಿಮೆ ಅವಧಿಯದ್ದು" ಎಂದು ದಾಖಲಿಸಲಾಗಿತ್ತು.
ಮಾರ್ಚ್ 6 ರ ಬಳಿಕ ಮತ್ತೆ ತೀರ್ಪನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ಅದರಲ್ಲಿ ಮೇಲಿನ ಸಾಲಿನ ಬದಲಿಗೆ "ಇಂದು ನಮಗೆ ತಿಳಿದಿರುವ ಜಾತಿಗಳ ವರ್ಗೀಕರಣ ತೀರಾ ಇತ್ತೀಚಿನದಾಗಿದ್ದು ಆಧುನಿಕ ವಿದ್ಯಮಾನವಾಗಿದೆ" ಎಂಬ ಹೊಸ ಸಾಲನ್ನು ಸೇರಿಸಲಾಗಿದೆ:.
ಅಲ್ಲದೆ, ಹಳೆಯ ತೀರ್ಪಿನಲ್ಲಿ ವಿವಿಧ ಜಾತಿಗಳ ನಡುವೆ ಸಂಘರ್ಷಮಯ ವಾತಾವರಣ ಇರುವ ಬಗ್ಗೆ ಪ್ರತಿಕ್ರಿಯಿಸುತ್ತಾ ತಮಿಳುನಾಡಿನಲ್ಲಿ 370 ನೋಂದಾಯಿತ ಜಾತಿಗಳಿವೆ ಎಂದು ಹೇಳಲಾಗಿತ್ತು. ಆದರೆ ರಾಜ್ಯದಲ್ಲಿ 184 ನೋಂದಾಯಿತ ಜಾತಿಗಳಿವೆ ಎಂಬುದಾಗಿ ಹೊಸದಾಗಿ ಪ್ರಕಟವಾಗಿರುವ ತೀರ್ಪು ತಿಳಿಸಿದೆ.
ಉದಯನಿಧಿ, ಸಚಿವ ಪಿ ಕೆ ಶೇಖರಬಾಬು ಹಾಗೂ ಸಂಸದ ಎ ರಾಜಾ ಅವರ ವಿರುದ್ಧ ಹಿಂದೂ ಮುನ್ನಾನಿ ಸಂಘಟನೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿತ್ತು.
ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದ ಉದಯನಿಧಿ ಅವರ ವಿರುದ್ಧ ಮದ್ರಾಸ್ ಹೈಕೋರ್ಟ್ ಟೀಕಿಸಿತ್ತಾದರೂ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ನಿರ್ದೇಶಿಸಲು ನಿರಾಕರಿಸಿತ್ತು. ಉದಯನಿಧಿ ಅವರನ್ನು ಕಾನೂನಿನ ಪ್ರಕಾರ ಹುದ್ದೆಯಿಂದ ಅನರ್ಹಗೊಳಿಸದೆ ತಾನು ಹಾಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು.
[ತೀರ್ಪಿನ ನವೀಕರಿಸಿದ ಆವೃತ್ತಿಯನ್ನು ಇಲ್ಲಿ ಓದಿ]
[ತೀರ್ಪಿನ ಹಿಂದಿನ ಆವೃತ್ತಿಗಾಗಿ ಇಲ್ಲಿ ಕ್ಲಿಕ್ಕಿಸಿ]