ರಸ್ತೆ ಗುಂಡಿಗೆ ಬಿದ್ದು ಮರಣ: ಪರಿಹಾರ ನೀಡಲು ʼದೋಷ ರಾಹಿತ್ಯ ಹೊಣೆಗಾರಿಕೆʼ ತತ್ವ ಅನ್ವಯಿಸಿದ ಮದ್ರಾಸ್ ಹೈಕೋರ್ಟ್

ಮೃತ ವ್ಯಕ್ತಿ ಸಾರ್ವಜನಿಕ ರಸ್ತೆ ಬಳಸುವ ಮತ್ತು ದ್ವಿಚಕ್ರ ವಾಹನ ಓಡಿಸುವ ಅಧಿಕಾರ ಹೊಂದಿದ್ದರು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಹೇಳಿದೆ.
Justice GR Swaminathan (L), Madurai Bench of Madras High Court (R)
Justice GR Swaminathan (L), Madurai Bench of Madras High Court (R)A1
Published on

ಸರ್ಕಾರಿ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ತೋಡಲಾಗಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡುವಂತೆ ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಸೂಚಿಸಿತು.  

ಸರ್ಕಾರ ನೇಮಿಸಿಕೊಂಡಿದ್ದ ಗುತ್ತಿಗೆದಾರರೊಬ್ಬರು ಅಗೆದಿದ್ದ ಗುಂಡಿಗೆ ದ್ವಿಚಕ್ರ ವಾಹನ ಸವಾರರೊಬ್ಬರು ಬಿದ್ದು ಸಾವನ್ನಪ್ಪಿರುವುದನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್ ಅವರು ಜನವರಿ 3ರಂದು ನೀಡಿದ ತೀರ್ಪಿನಲ್ಲಿ ಪರಿಹಾರ ನೀಡಿಕೆಗೆ ʼದೋಷ ರಾಹಿತ್ಯ ಹೊಣೆಗಾರಿಕೆʼ ತತ್ವ ಅನ್ವಯಿಸಿದರು.

ಒಬ್ಬ ವ್ಯಕ್ತಿ ತನ್ನಿಂದ ಯಾವುದೇ ನಿರ್ಲಕ್ಷ್ಯ  ಇಲ್ಲದಿದ್ದರೂ ಸೂಕ್ತ ಕಾಳಜಿ ಮತ್ತು ಎಚ್ಚರ ವಹಿಸಿದ್ದರೂ ಬೆಲೆ ತೆರಬೇಕಾದ ಸ್ಥಿತಿಯನ್ನು ʼದೋಷರಾಹಿತ್ಯ ಹೊಣೆಗಾರಿಕೆ ಸಿದ್ಧಾಂತʼ ಎಂದು ಕಾನೂನಿನ ಪರಿಭಾಷೆಯಲ್ಲಿ ಕರೆಯಲಾಗುತ್ತದೆ.

ಮೃತ ವ್ಯಕ್ತಿ ಸಾರ್ವಜನಿಕ ರಸ್ತೆ ಬಳಸುವ ಮತ್ತು ದ್ವಿಚಕ್ರ ವಾಹನ ಓಡಿಸುವ ಅಧಿಕಾರ ಹೊಂದಿದ್ದರು ಎಂದು ತಿಳಿಸಿದ ಪೀಠ ಈ ಸಂದರ್ಭದಲ್ಲಿ ನಿರ್ಲಕ್ಷ್ಯ ಕುರಿತಾದ ಪ್ರಶ್ನೆಗೆ ಹೋಗದೆ ದೋಷರಾಹಿತ್ಯ ಹೊಣೆಗಾರಿಕೆ ತತ್ವದ ಆಧಾರದ ಮೇಲೆ ಪರಿಹಾರ ನೀಡುವಂತೆ ಸೂಚಿಸಬಹುದು ಎಂದು ನಿರ್ಣಯಿಸಿತು.  

ಆದ್ದರಿಂದ, ಎರಡೂ ಕಡೆಯವರಿಂದ ನಡೆದ ನಿರ್ಲಕ್ಷ್ಯದ ಆರೋಪ ಪ್ರತ್ಯಾರೋಪಗಳಿಗೆ ಪ್ರತಿಕ್ರಿಯಿಸದೆಯೇ ದೋಷರಾಹಿತ್ಯ ಹೊಣೆಗಾರಿಕೆ ತತ್ವದ ಆಧಾರದ ಮೇಲೆ ಪರಿಹಾರ ಘೋಷಿಸಿತು. ಪ್ರಕರಣ ದಾಖಲಾಗುವ ಹಂತದಲ್ಲಿ ಸಂಬಂಧಪಟ್ಟ ಗುತ್ತಿಗೆದಾರ ಠೇವಣಿ ಇಟ್ಟಿದ್ದ ₹ 5 ಲಕ್ಷ ಮೊತ್ತದ ಪರಿಹಾರವನ್ನು ಪ್ರಕರಣದ ಅರ್ಜಿದಾರರಾದ ಮೃತ ವ್ಯಕ್ತಿಯ ತಂದೆ ಪಡೆಯಲು ನ್ಯಾಯಾಲಯ ಅನುಮತಿಸಿತು.

Kannada Bar & Bench
kannada.barandbench.com