ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಎಲ್ಲ ನಿವಾಸಿಗಳ ಸ್ಥಳಾಂತರ: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಎಲ್ಲಾ ಜೀವಿಗಳನ್ನು ರಕ್ಷಿಸುವುದು ಸರ್ಕಾರದ ಮೂಲಭೂತ ಕರ್ತವ್ಯವಾಗಿದ್ದು ಹಣದ ಅಲಭ್ಯತೆ ಅಂತಹ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಬಾರದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಎಲ್ಲ ನಿವಾಸಿಗಳ ಸ್ಥಳಾಂತರ: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಕರ್ನಾಟಕದ ಬಂಡಿಪುರ ಕಾಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಒಳಪಡುವ ತೆಂಗುಮರಹಡ ಗ್ರಾಮದ ಎಲ್ಲಾ 495 ನಿವಾಸಿಗಳನ್ನು ಸ್ಥಳಾಂತರಿಸಲು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿದೆ.

ಎಲ್ಲಾ ಜೀವಿಗಳನ್ನು ರಕ್ಷಿಸುವುದು ಸರ್ಕಾರದ ಮೂಲಭೂತ ಕರ್ತವ್ಯವಾಗಿದ್ದು ಹಣದ ಅಲಭ್ಯತೆ ಅಂತಹ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಬಾರದು ಎಂದು ಆಗಸ್ಟ್ 8ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಎನ್ ಸತೀಶ್ ಕುಮಾರ್ ಮತ್ತು ಡಿ ಭರತ ಚಕ್ರವರ್ತಿ ಅವರನ್ನೊಳಗೊಂಡ ವಿಶೇಷ ಅರಣ್ಯ ಪೀಠ ಎಚ್ಚರಿಕೆ ನೀಡಿದೆ.

ಗ್ರಾಮದ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲು ಮುಂದಿನ ಎರಡು ತಿಂಗಳೊಳಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಅರಣ್ಯೀಕರಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರಕ್ಕೆ (ಸಿಎಎಂಪಿಎ- ಕ್ಯಾಂಪಾ) ನ್ಯಾಯಾಲಯ ಸೂಚಿಸಿದೆ.

ತನಗೆ ಬರುವ ಹಣವನ್ನು ಎನ್‌ಟಿಸಿಎ ಸ್ಥಳಾಂತರ ಕಾರ್ಯಕ್ಕಾಗಿ ತಮಿಳುನಾಡಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೀಡಬೇಕು ಎಂದು ಪೀಠ ಹೇಳಿದೆ.

2011ರಲ್ಲಿ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು ತೆಂಗುಮರಹಡ ನಿವಾಸಿಗಳನ್ನು ಸ್ಥಳಾಂತರಿಸಲು ಮುಂದಾಗಿದ್ದರೂ, ಎನ್‌ಟಿಸಿಎ ಬಳಿ ಹಣವಿಲ್ಲದ ಕಾರಣ ಅದನ್ನು ಇನ್ನೂ ಜಾರಿಯಾಗಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತ್ತು.

Also Read
ಅರಣ್ಯ ಭೂಮಿ ಹೊಂದುವ ಹಕ್ಕು ಆದಿವಾಸಿಗಳು ಮತ್ತು ಅಧಿಸೂಚಿತ ಅರಣ್ಯವಾಸಿಗಳಿಗೆ ಮಾತ್ರವೇ ಸೀಮಿತವಲ್ಲ: ಸುಪ್ರೀಂ

ಜನರ ಸ್ಥಳಾಂತರಕ್ಕೆ 70 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿತ್ತು. ಆದರೆ ತನ್ನ ಬಳಿ ಇರುವ ಸ್ವಲ್ಪ ಹಣದಲ್ಲಿ ಕೇವಲ ಪುನರಾವರ್ತಿತ ವೆಚ್ಚಗಳನ್ನು ಭರಿಸಬಹುದು ಮತ್ತು ಸದಸ್ಯರಿಗೆ ಸಂಬಳ ನೀಡಬಹುದಾಗಿದೆ ಎಂದು ನ್ಯಾಯಾಲಯಕ್ಕೆ ಎನ್‌ಟಿಸಿಎ ತಿಳಿಸಿತ್ತು. ಮಾನವ-ಪ್ರಾಣಿ ಸಂಘರ್ಷದ ಸನ್ನಿಹಿತ ಅಪಾಯಗಳ ಕಾರಣದಿಂದಾಗಿ ಸ್ಥಳಾಂತರದ ಕೆಲಸವು ತುರ್ತಾಗಿ ನಡೆಯುವುದರಿಂದ ತಮಿಳುನಾಡು ಸರ್ಕಾರದ ಅರಣ್ಯೀಕರಣ ಪರಿಹಾರ ಪ್ರಾಧಿಕಾರ ಮತ್ತು ಕ್ಯಾಂಪಾವನ್ನು ಪ್ರಕರಣದ ಕಕ್ಷಿದಾರರನ್ನಾಗಿ ಮಾಡಬೇಕೆಂದು ಎನ್‌ಟಿಸಿಎ ಕೋರಿತ್ತು.

ಆಗ ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳ ಅಭಿಪ್ರಾಯವನ್ನು ನ್ಯಾಯಾಲಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ತಮಿಳುನಾಡು ಸರ್ಕಾರ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗಾಗಿ ಬಳಸಲು ಅನುಮತಿಸುವ ವಿಚಾರಕ್ಕೆ ತಾನು ಉದಾರವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಅರಣ್ಯೀಕರಣ ಪರಿಹಾರ ನಿಧಿಯಲ್ಲಿ ತನ್ನ ಪಾಲು ʼಅತ್ಯಂತ ಕಡಿಮೆʼ ಎಂದು ಹೇಳಿತ್ತು.  

ಮತ್ತೊಂದೆಡೆ, ಕ್ಯಾಂಪಾ ತನ್ನ ಬಳಿ ಸುಮಾರು ₹ 8.15 ಕೋಟಿ ಲಭ್ಯವಿದ್ದರೂ, ರಾಷ್ಟ್ರೀಯ ಪ್ರಾಧಿಕಾರದ ಆಡಳಿತ ಮಂಡಳಿ ಅನುಮೋದಿಸಿದ ನಿರ್ದಿಷ್ಟ ಯೋಜನೆಗಳಲ್ಲಿ ಮಾತ್ರ ಈ ನಿಧಿ ಬಳಸಿಕೊಳ್ಳಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ವಾದಗಳಿಗೆ ನ್ಯಾಯಾಲಯ ತಲೆದೂಗಿದರೂ ಹುಲಿ ಸಂರಕ್ಷಿತ ಪ್ರದೇಶಗಳಿಂದ ಕುಟುಂಬಗಳನ್ನು ಸ್ಥಳಾಂತರಿಸುವುದು ಬಹಳ ನಿರ್ಣಾಯಕವಾಗಿದೆ. ಏಕೆಂದರೆ ಗ್ರಾಮಸ್ಥರು ಮತ್ತು ಹುಲಿಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶದ ಇತರ ಸಸ್ಯಸಂಕುಲ ಮತ್ತು ಪ್ರಾಣಿಸಂಕುಲದ ಸುರಕ್ಷತೆಯ ವಿಚಾರವನ್ನು ಒಳಗೊಂಡಿರುತ್ತದೆ ಎಂದು ಹೇಳಿತು.

ಸಂವಿಧಾನದ 21ನೇ ವಿಧಿ ಒದಗಿಸಿರುವ ಬದುಕುವ ಹಕ್ಕು ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು ಆ ಹಕ್ಕನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಹೈಕೋರ್ಟ್‌ ತಿಳಿಸಿದೆ.

ಪ್ರತಿವಾದಿಗೆ (ಸರ್ಕಾರಕ್ಕೆ) ಎಲ್ಲಾ ಜೀವಿಗಳನ್ನು ರಕ್ಷಿಸುವುದು ಮೂಲಭೂತ ಶಾಸನಬದ್ಧ ಕರ್ತವ್ಯವಾಗಿರುವಾಗ ಅದರಲ್ಲಿಯೂ ನೀತಿ ನಿರ್ದೇಶನ ತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದ್ದಾಗ ನಿಧಿ ಲಭ್ಯವಿಲ್ಲ ಎಂಬುದನ್ನು ಮನ್ನಿಸಲಾಗದು. ತಿರುಮುಲ್ಪಾಡ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಸಂಸತ್ತು ರೂಪಿಸಿದ ಕಾಯಿದೆಯ ಮೂಲಕ ಅರಣ್ಯೀಕರಣ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿದೆ. ತೀರ್ಪಿನಲ್ಲಿ ಪರಿಸರ ರಕ್ಷಣೆ ಮತ್ತು ಸುಧಾರಣೆ ಸಾಂವಿಧಾನಿಕ ಕರ್ತವ್ಯ ಎಂದು ತಿಳಿಸಲಾಗಿತ್ತು. ಕಲ್ಯಾಣ ರಾಜ್ಯದ ಕಲ್ಪನೆಗೆ ಹಾಸುಹೊಕ್ಕಾಗಿರುವ ದೇಶಕ್ಕೆ ಈ ಆದೇಶ ಅನುಗುಣವಾಗಿದೆ. ಹೀಗಾಗಿ ಅರಣ್ಯೀಕರಣ ಪರಿಹಾರ ನಿಧಿ ಕಾಯಿದೆ- 2016ರ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಶಯಕ್ಕೆ ಆಸ್ಪದ ಇಲ್ಲದಂತೆ ಕ್ಯಾಂಪಾದಲ್ಲಿ ಲಭ್ಯವಿರುವ ನಿಧಿಗಳನ್ನು ಈ ಉದ್ದೇಶಕ್ಕಾಗಿ ಅಧಿಕಾರಯುತವಾಗಿ ಬಳಸಬಹುದು ಎಂದು ನ್ಯಾಯಾಲಯ ವಿವರಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Mudumalai_Tiger_Reserve (1).pdf
Preview

Related Stories

No stories found.
Kannada Bar & Bench
kannada.barandbench.com