ತೃತೀಯಲಿಂಗಿಗಳನ್ನು ಕ್ರಮೇಣ ಮುಖ್ಯವಾಹಿನಿಗೆ ತರಲು ಸಹಾಯ ಮಾಡುವ ಸಲುವಾಗಿ ಅವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿ ನೀಡಲು ಕ್ರಮವಹಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಎನ್‌ಡಿ ಮೋಹನ್ ಮತ್ತು ಜಿಲ್ಲಾಧಿಕಾರಿ ಕಡಲೂರು ಜಿಲ್ಲೆ].
ಇದೇ ವೇಳೆ ಕಡಲೂರು ಜಿಲ್ಲೆಯ ನೈನಾರ್‌ಕುಪ್ಪಂ ಗ್ರಾಮ ಪಂಚಾಯಿತಿ ಠರಾವು ಅಂಗೀಕರಿಸಿ ಸರ್ಕಾರ ತೃತೀಯ ಲಿಂಗಿಗಳಿಗೆ ಗ್ರಾಮದಲ್ಲಿ ಮಂಜೂರು ಮಾಡಲಾದ ಜಮೀನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಆ ಪಂಚಾಯತ್ ಅಧ್ಯಕ್ಷರು ಹಾಗೂ ಇತರ ಸದಸ್ಯರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ನ್ಯಾ. ಎಸ್ ಎಂ ಸುಬ್ರಮಣಿಯಂ ಆದೇಶಿಸಿದ್ದಾರೆ.
ಕುತೂಹಲಕಾರಿ ಅಂಶವೆಂದರೆ, ತೃತೀಯ ಲಿಂಗಿಗಳ ವಿರುದ್ಧ ತಾನು ಬರೆದಿದ್ದ ಪತ್ರದ ಬಗ್ಗೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಪಂಚಾಯತ್ ಅಧ್ಯಕ್ಷ ಎನ್ ಡಿ ಮೋಹನ್ ಖುದ್ದು ನ್ಯಾಯಾಲಯಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
ತೃತೀಯ ಲಿಂಗಿ ವ್ಯಕ್ತಿಗಳು ಹಲವು ಕಾಲದಿಂದ ಶೋಷಿತರಾಗಿದ್ದು ಅಂತಹ ಶೋಷಿತರಿಗೆ ವಿಧಿಸುವ ಸಾಮಾಜಿಕ ಬಹಿಷ್ಕಾರ ಮಾನವೀಯತೆ ವಿರೋಧಿ ಸಿದ್ಧಾಂತ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.
ಆಗಸ್ಟ್ 16ರಂದು ನಡೆದಿದ್ದ ವಿಚಾರಣೆ ವೇಳೆ ಕೂಡ ಪಂಚಾಯತಿ ಅಧ್ಯಕ್ಷ ಬರೆದಿದ್ದ ಅರ್ಜಿಗೆ ನ್ಯಾ. ಸುಬ್ರಮಣಿಯಂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ಪಂಚಾಯತ್ ಅಧ್ಯಕ್ಷರ 'ಟ್ರಾನ್ಸ್‌ಫೋಬಿಯಾ' (ತೃತೀಯಲಿಂಗಿಗಳ ಬಗೆಗಿನ ಭೀತಿ) ಎಂದಿದ್ದ ನ್ಯಾಯಾಲಯ ಹೀಗೆ ಪತ್ರ ಬರೆಯಲು ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ಪ್ರಶ್ನಿಸಿ ಅವರಿಂದ ವಿವರಣೆ ಕೇಳಿತ್ತು.
ಅದರಂತೆ ಉತ್ತರಿಸಿದ್ದ ಪಂಚಾಯತಿ ಅಧ್ಯಕ್ಷ ತೃತೀಯ ಲಿಂಗಿಗಳಿಗೆ ಗ್ರಾಮದಲ್ಲಿ ವಾಸಿಸಲು ಅವಕಾಶ ಮಾಡಿಕೊಡುವುದರಿಂದ ಗ್ರಾಮೀಣರಲ್ಲಿ ಆತಂಕ ಹುಟ್ಟಿದೆ. ಅವರ ವಾಸಕ್ಕೆ ಅವಕಾಶ ನೀಡುವುದರಿಂದ ಗ್ರಾಮ ಸಂಸ್ಕೃತಿ ಹಾಳಾಗುತ್ತದೆ ಎಂದಿದ್ದರು. ಅದಾದ ಬಳಿಕ ತೃತೀಯಲಿಂಗಿಗಳ ಹಕ್ಕುಗಳ ಬಗ್ಗೆ ತನಗಾಗಲೀ ಗ್ರಾಮಸ್ಥರಿಗಾಗಲೀ ಅರಿವಿರಲಿಲ್ಲ. ಹೀಗಾಗಿ ಅರ್ಜಿ ಹಿಂಪಡೆಯಲು ಅನುಮತಿ ನೀಡಬೇಕು ಎಂದು ಕೂಡ ಅವರು ಕೋರಿದ್ದರು.
ಆದರೆ ಅರ್ಜಿ ಹಿಂಪಡೆಯಲು ಅವರಿಗೆ ಅವಕಾಶ ನೀಡುವುದರಿಂದ ಚುನಾಯಿತ ಸಂಸ್ಥೆಯ ಹೆಸರಿನಲ್ಲಿ ನಡೆಯುವ ಸಾಮಾಜಿಕ ಅನಿಷ್ಠವನ್ನು ಸಮ್ಮತಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ಸ್ಥಳೀಯ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡುವಂತೆ ಸೂಚಿಸಿದ್ದಲ್ಲದೆ ಅವರ ಅರ್ಹತಾನುಸಾರ ಅವರಿಗೆ ಉಚಿತವಾಗಿ ಭೂಮಿ ಒದಗಿಸಬೇಕು ಎಂದು ಕೂಡ ಆದೇಶಿಸಿತ್ತು. ಅವರು ಗ್ರಾಮದ ಹಬ್ಬ, ಸಮಾರಂಭಗಳಲ್ಲಿ ಭಾಗವಹಿಸಲು, ಎಲ್ಲಾ ಧಾರ್ಮಿಕ ಸಂಸ್ಥೆಗಳಲ್ಲಿ ಪೂಜೆ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.