ತೃತೀಯ ಲಿಂಗಿಗಳನ್ನು ಗೌರವಾನ್ವಿತವಾಗಿ ಸಂಬೋಧಿಸಲು ಪದ, ಅಭಿವ್ಯಕ್ತಿ ಪಟ್ಟಿ ಸಿದ್ಧಪಡಿಸಲು ಮದ್ರಾಸ್‌ ಹೈಕೋರ್ಟ್‌ ಆದೇಶ

ಎಲ್‌ಜಿಬಿಟಿಕ್ಯುಐಎ ಸಮುದಾಯವನ್ನು ಸಂಬೋಧಿಸಲು ಅರ್ಜಿದಾರರು ಸಿದ್ಧಪಡಿಸಿದ ಪದ ಮತ್ತು ಅಭಿವ್ಯಕ್ತಿಗಳನ್ನು ಬಳಸಲು ಪರಿಗಣಿಸುವಂತೆ ಮಾಧ್ಯಮ ಮತ್ತು ಪತ್ರಿಕೆಗಳಿಗೆ ನ್ಯಾಯಾಲಯವು ಸೂಚಿಸಿದೆ.
LGBTQ, Madras HC
LGBTQ, Madras HC

ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತ (ಎಲ್‌ಜಿಬಿಟಿಕ್ಯು) ಸಮುದಾಯಕ್ಕೆ ಸೇರಿದವರನ್ನು ಸಂಬೋಧಿಸಲು ಪದಗಳು ಮತ್ತು ಅಭಿವ್ಯಕ್ತಿ ಒಳಗೊಂಡಿರುವ ಪ್ರಮಾಣಿತ ಮಾರ್ಗದರ್ಶಿ/ಪದಕೋಶ ಸಿದ್ಧಪಡಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿದೆ.

ಎಲ್‌ಜಿಬಿಟಿಕ್ಯು ಸಮುದಾಯದವರ ಕಲ್ಯಾಣ ಕೋರಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆನಂದ್‌ ವೆಂಕಟೇಶ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಈ ಸಂದರ್ಭದಲ್ಲಿ ಪೀಠವು ಎಲ್‌ಜಿಬಿಟಿಕ್ಯು ಸಮುದಾಯದವರನ್ನು ಸಂಬೋಧಿಸುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ 24 ಪದಗಳು ಮತ್ತು ಅಭಿವ್ಯಕ್ತಿ ಪಟ್ಟಿಯನ್ನು ಪರಿಗಣಿಸುವಂತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರಿಗೆ ಸೂಚಿಸಿದೆ.

“ಕೆಲವು ಸಂದರ್ಭದಲ್ಲಿ ಈ ಸಮುದಾಯಕ್ಕೆ ಸೇರಿದವರನ್ನು ಮತ್ತಷ್ಟು ಗೌರವಪೂರ್ವಕವಾಗಿ ಸಂಬೋಧಿಸುವ ಅಗತ್ಯವಿದೆ. ಸಲಹೆ ನೀಡಲಾಗಿರುವ ಪದ ಮತ್ತು ಅಭಿವ್ಯಕ್ತಿಯ ಪಟ್ಟಿಯನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ತಮಿಳುನಾಡು ಸರ್ಕಾರಕ್ಕೆ ಸಲ್ಲಿಸಬೇಕು. ಇದನ್ನು ಬಳಸಿ ಸರ್ಕಾರವು ಪ್ರಮಾಣಿತ ಮಾರ್ಗದರ್ಶಿ/ಪದಕೋಶ ಸಿದ್ಧಪಡಿಸಬೇಕು” ಎಂದು ನ್ಯಾಯಾಲಯವು ನಿರ್ದೇಶಿಸಿದೆ.

ಎಲ್‌ಜಿಬಿಟಿಕ್ಯುಐಎ ಸಮುದಾಯವನ್ನು ಸಂಬೋಧಿಸಲು ಅರ್ಜಿದಾರರು ಸಿದ್ಧಪಡಿಸಿದ ಪದ ಮತ್ತು ಅಭಿವ್ಯಕ್ತಿಗಳನ್ನು ಬಳಸಲು ಪರಿಗಣಿಸುವಂತೆ ಮಾಧ್ಯಮ ಮತ್ತು ಪತ್ರಿಕೆಗಳಿಗೆ ನ್ಯಾಯಾಲಯವು ಸೂಚಿಸಿದೆ. “ಮಾಧ್ಯಮ ಮತ್ತು ಪತ್ರಿಕೆಯವರು ನ್ಯಾಯಾಲಯದ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಮುಂದೆ ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದೆ” ಎಂದು ಪೀಠ ಹೇಳಿದೆ.

Related Stories

No stories found.
Kannada Bar & Bench
kannada.barandbench.com