ಪತ್ರಕರ್ತ ಗುರುಮೂರ್ತಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ: ಎಜಿ ನೀಡಿದ್ದ ಸಮ್ಮತಿ ರದ್ದುಪಡಿಸಿದ ಮದ್ರಾಸ್ ಹೈಕೋರ್ಟ್

ನ್ಯಾಯಾಂಗ ನಿಂದನೆ ಚಲಾಯಿಸುವ ಅಧಿಕಾರವನ್ನು ಜನರ ಧ್ವನಿ ಹತ್ತಿಕ್ಕಲು ಬಳಸುವಂತಿಲ್ಲ ಎಂದು ನುಡಿದ ನ್ಯಾ. ಎನ್ ಶೇಷಸಾಯಿ ಅವರು, ಎಜಿ ಅವರು ನೀಡಿದ್ದ ಸಮ್ಮತಿ ಬದಿಗೆ ಸರಿಸಿದರು.
S Gurumurthy
S Gurumurthy
Published on

ನ್ಯಾಯಾಂಗದ ವಿರುದ್ಧ ಹೇಳಿಕೆ ನೀಡಿದ್ದ ರಾಜಕೀಯ ವಿಮರ್ಶಕ ಮತ್ತು ತುಘಲಕ್‌ ನಿಯತಕಾಲಿಕದ ಸಂಪಾದಕ ಎಸ್‌ ಗುರುಮೂರ್ತಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಆರಂಭಿಸಲು ತಮಿಳುನಾಡು ಅಡ್ವೊಕೇಟ್ ಜನರಲ್ ಆರ್ ಶುಣ್ಮುಗಸುಂದರಂ ಅವರು 2021ರ ಸೆಪ್ಟೆಂಬರ್‌ನಲ್ಲಿ ನೀಡಿದ್ದ ಸಮ್ಮತಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

ನ್ಯಾಯಾಂಗ ನಿಂದನೆ ಅಧಿಕಾರವನ್ನು ಜನರ ಧ್ವನಿ ಹತ್ತಿಕ್ಕಲು ಬಳಸುವಂತಿಲ್ಲ ಎಂದು ನುಡಿದ ನ್ಯಾ. ಎನ್ ಶೇಷಸಾಯಿ ಅವರು, ಎಜಿ ಅವರು ನೀಡಿದ್ದ ಸಮ್ಮತಿ ಬದಿಗೆ ಸರಿಸಿದರು.

ಜನರು ಅದರಲ್ಲಿಯೂ ನ್ಯಾಯಾಂಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಅಲ್ಪಸ್ವಲ್ಪವಷ್ಟೇ ತಿಳಿದಿರುವವರು, ನ್ಯಾಯಾಂಗವನ್ನು ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾರೆ. ಅಂತಹ ಹೇಳಿಕೆಗಳು ಅನಗತ್ಯವಾಗಿದ್ದರೂ, ನ್ಯಾಯಾಲಯಗಳು ಆ ಹೇಳಿಕೆಗಳ ಕುರಿತಾಗಿ ತಮ್ಮ ಸಮಯ ವ್ಯರ್ಥ ಮಾಡಬಾರದು ಎಂದು ಪೀಠ ನುಡಿಯಿತು.

“ಸ್ವಾತಂತ್ರ್ಯದಿಂದ ನಡೆಯುವ ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯ ಸುರಕ್ಷಿತ ವಲಯದಲ್ಲಿ ಕೂರಲಾಗದು ಅಥವಾ ಟೀಕೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಗುರಿಯನ್ನು ನ್ಯಾಯುತವಾಗಿ ಅಥವಾ ಇನ್ನಾವುದೋ ಮಾರ್ಗದಲ್ಲಿ ಮಾಡುವಂತಿಲ್ಲ. ನ್ಯಾಯಾಂಗ ನಿಂದನೆಯನ್ನು ಶಿಕ್ಷಿಸುವ ಅಧಿಕಾರವು ನ್ಯಾಯಾಂಗವು ಮುಕ್ತವಾಗಿ ವಿಹರಿಸಲು ಇರುವ ಸವಲತ್ತಲ್ಲ, ಬದಲಿಗೆ ನ್ಯಾಯಾಲಯದೆಡೆಗಿರುವ ಸಾರ್ವಜನಿಕ ವಿಶ್ವಾಸದಲ್ಲಿ ಹಸ್ತಕ್ಷೇಪ ಮಾಡುವ ಸಾಮಾಜಿಕ ಮನಸ್ಥಿತಿಯನ್ನು ತಿದ್ದುವ ಸಾಧನವಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.

ತಮ್ಮ ಪತ್ರಿಕೆಯ ಕಾರ್ಯಕ್ರಮವೊಂದರಲ್ಲಿ ಗುರುಮೂರ್ತಿ ಅವರು “ಬಹುತೇಕ ನ್ಯಾಯಾಧೀಶರು ಅಪ್ರಾಮಾಣಿಕರು ಮತ್ತು ಅನರ್ಹರಾಗಿದ್ದು ರಾಜಕಾರಣಿಗಳ ಕಾಲಿಗೆ ಎರಗಿ ಅಧಿಕಾರ ಪಡೆದುಕೊಂಡಿದ್ದಾರೆ” ಎಂದು ಹೇಳಿದ್ದರು. ಆದರೆ, ನ್ಯಾಯಾಂಗವನ್ನು ಅವಮಾನಿಸುವ ಅಥವಾ ಟೀಕಿಸುವ ಉದ್ದೇಶ ನನಗಿರಲಿಲ್ಲ ಎಂದು ಮರುದಿನವೇ ಸ್ಪಷ್ಟನೆ ನೀಡಿದ್ದರು. ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲ ವಕೀಲರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಗುರುಮೂರ್ತಿ ವಿರುದ್ಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಳ್ಳಬೇಕು ಎಂದು ಅವರು ಕೋರಿದ್ದರು.

ಗುರುಮೂರ್ತಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಅಂದಿನ ಎಜಿ ವಿಜಯ್ ನಾರಾಯಣ್ ಅವರಿಗೆ ವಕೀಲ ಎಸ್‌ ದೊರೆಸ್ವಾಮಿ ಮನವಿ ಮಾಡಿದ್ದರು. ಗುರುಮೂರ್ತಿಯವರ ಹೇಳಿಕೆಗಳನ್ನು ಸಂದರ್ಭೋಚಿತವಾಗಿ ಓದಿದರೆ, ನ್ಯಾಯಾಂಗ ನಿಂದನೆ ಮಾಡುವಂತಹ ಯಾವುದೇ ಪ್ರಾಥಮಿಕ ಪ್ರಕರಣ ಕಂಡು ಬಂದಿಲ್ಲ ಎಂದು ತಿಳಿಸಿದ್ದ ನಾರಾಯಣ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನಿರಾಕರಿಸಿದ್ದರು.

ಆದರೆ ಸರ್ಕಾರ ಬದಲಾದ ಬಳಿಕ ಒಪ್ಪಿಗೆ ನಿರಾಕರಣೆ ಹಿಂಪಡೆಯುವಂತೆ ಈಗಿನ ಎಜಿ ಅವರನ್ನು ಸಂಪರ್ಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುಮೂರ್ತಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸೆಪ್ಟೆಂಬರ್ 2021 ರಲ್ಲಿ ಎಜಿ ಷಣ್ಮುಗಸುಂದರಂ ಅವರು ಸಮ್ಮತಿ ಸೂಚಿಸಿದ್ದರು.

ನಂತರ ಗುರುಮೂರ್ತಿ ಅವರು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರ ಮೂಲಕ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಒಪ್ಪಿಗೆ ನಿರಾಕರಿಸಿದ ತಮ್ಮ ಹಿಂದಿನ ಆದೇಶವನ್ನು ಹಿಂಪಡೆಯಲು ಪ್ರಸಕ್ತ ಎಜಿ ಅವರಿಗೆ ಅಧಿಕಾರವಿಲ್ಲ ಎಂದು ಮಹೇಶ್‌ ವಾದಿಸಿದ್ದರು.

Kannada Bar & Bench
kannada.barandbench.com