ಬ್ಯಾಂಕ್ ಆಡಳಿತ ವರ್ಗವನ್ನು ಟೀಕಿಸಿದ್ದ ಉದ್ಯೋಗಿ ವಿರುದ್ಧದ ಶಿಸ್ತುಕ್ರಮ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಅಸ್ತಿತ್ವದಲ್ಲಿರುವ ಕಾನೂನುಗಳನ್ನು ವಾಟ್ಸಾಪ್ ಸಂದೇಶಗಳು ಉಲ್ಲಂಘಿಸದೇ ಇರುವವರೆಗೂ ವಾಟ್ಸಾಪ್ ಗುಂಪುಗಳಲ್ಲಿ ಬ್ಯಾಂಕ್ ಆಡಳಿತ ಟೀಕಿಸಿದ್ದಕ್ಕಾಗಿ ಆಡಳಿತ ವರ್ಗ ಉದ್ಯೋಗಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದೆ ಪೀಠ.
ಬ್ಯಾಂಕ್ ಆಡಳಿತ ವರ್ಗವನ್ನು ಟೀಕಿಸಿದ್ದ ಉದ್ಯೋಗಿ ವಿರುದ್ಧದ ಶಿಸ್ತುಕ್ರಮ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್
Published on

ಪ್ರತಿಯೊಬ್ಬ ನೌಕರರಿಗೂ ಅಭಿವ್ಯಕ್ತಿಸುವ ಹಕ್ಕಿದೆ ಎಂದು ಈಚೆಗೆ ತಿಳಿಸಿರುವ ಮದ್ರಾಸ್‌ ಹೈಕೋರ್ಟ್‌ ವಾಟ್ಸಾಪ್‌ ಗುಂಪಿನಲ್ಲಿ ಆಡಳಿತ ವರ್ಗವನ್ನು ಟೀಕಿಸಿ, ಉನ್ನತ ಅಧಿಕಾರಿಗಳನ್ನು ತುಚ್ಛೀಕರಿಸಿ ಸಂದೇಶಗಳನ್ನು ಪ್ರಕಟಿಸಿದ್ದ ಸರ್ಕಾರಿ ಬ್ಯಾಂಕ್ ಉದ್ಯೋಗಿ ವಿರುದ್ಧ ನೀಡಲಾಗಿದ್ದ ಶಿಸ್ತುಕ್ರಮ ಆದೇಶವನ್ನು ರದ್ದುಗೊಳಿಸಿದೆ.

ಅರ್ಜಿದಾರ ಬ್ಯಾಂಕ್ ಉದ್ಯೋಗಿ, ತಮಿಳುನಾಡು ಗ್ರಾಮೀಣ ಬ್ಯಾಂಕ್‌ನ ಗ್ರೂಪ್ ಬಿ ಕಚೇರಿ ಸಹಾಯಕರಾಗಿದ್ದು, ಕಾರ್ಮಿಕ ಸಂಘದ ಹೋರಾಟಗಾರರಾದ ಅವರ ವಿರುದ್ಧದ ಚಾರ್ಜ್ ಮೆಮೊವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ರದ್ದುಗೊಳಿಸಿದ್ದಾರೆ. ಜುಲೈ 29ರಂದು ವಾಟ್ಸಾಪ್ ಗುಂಪಿನಲ್ಲಿ ಆಕ್ಷೇಪಾರ್ಹ ಸಂದೇಶ ಪೋಸ್ಟ್ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದ ಬ್ಯಾಂಕ್‌ ಆಡಳಿತ ವರ್ಗ ನೀಡಿದ್ದ ಚಾರ್ಜ್ ಮೆಮೋವನ್ನು ಲಕ್ಷ್ಮೀನಾರಾಯಣನ್ ಪ್ರಶ್ನಿಸಿದ್ದರು.

ಅಸ್ತಿತ್ವದಲ್ಲಿರುವ ಕಾನೂನುಗಳನ್ನು ವಾಟ್ಸಾಪ್‌ ಸಂದೇಶಗಳು ಸ್ಪಷ್ಟವಾಗಿ ಉಲ್ಲಂಘಿಸದೇ ಇರುವವರೆಗೂ ವಾಟ್ಸಾಪ್‌ ಗುಂಪುಗಳಲ್ಲಿ ಬ್ಯಾಂಕ್‌ ಆಡಳಿತ ಟೀಕಿಸಿದ್ದಕ್ಕಾಗಿ ಆಡಳಿತ ವರ್ಗ ಉದ್ಯೋಗಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೀಠ ನುಡಿದಿದೆ.  

Also Read
ವಜಾಗೊಂಡಿದ್ದ ಉದ್ಯೋಗಿ ಸೇವೆಗೆ ಮರಳಿದಾಗ ಸ್ವಯಂಚಾಲಿತವಾಗಿ ವೇತನ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ: ಸುಪ್ರೀಂ ಕೋರ್ಟ್

ಅಭಿವ್ಯಕ್ತಿಯ ಹಕ್ಕು ಎಂಬುದೊಂದು ಇದೆ. ಪ್ರತಿಯೊಬ್ಬ ಉದ್ಯೋಗಿ ಅಥವಾ ಸಂಘಟನೆಯ ಸದಸ್ಯರಿಗೆ ಆಡಳಿತ ವರ್ಗಕ್ಕೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಸಮಸ್ಯೆಗಳಿರುತ್ತವೆ. ಸಂಸ್ಥೆಯ ಹಿತಾಸಕ್ತಿಯಲ್ಲಿ  ದೂರುಗಳ ಅಭಿವ್ಯಕ್ತಿ ಇರುತ್ತದೆ. ಭಾವತೀವ್ರತೆಯ ಅಭಿವ್ಯಕ್ತಿಗೆ ಮನಶ್ಶುದ್ಧಿಯ (ಕಥಾರ್ಸಿಸ್‌) ಗುಣ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಸಂಸ್ಥೆಯ ಪ್ರತಿಷ್ಠೆ ಮೇಲೆ ಪರಿಣಾಮ ಬೀರಿದರೆ ಆಗ ಮಾತ್ರ ಆಡಳಿತ ವರ್ಗ ಕ್ರಮಕ್ಕೆ ಮುಂದಾಗಬಹುದೇ ವಿನಾ ಅಲ್ಲಿಯವರೆಗೂ ಅಲ್ಲ” ಎಂದು ನ್ಯಾಯಾಲಯ ಹೇಳಿದೆ.

ಖಾಸಗಿ ಪ್ರಜೆಯಂತೆ ಸರ್ಕಾರಿ ನೌಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹಕ್ಕುಗಳನ್ನು ಹೊಂದಲು ಸಾಧ್ಯವಿಲ್ಲವಾದರೂ ಸಂವಿಧಾನದ 19 (1) (ಎ) ವಿಧಿಯಡಿ ಒದಗಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಅವನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿದೆ.

ಲಕ್ಷ್ಮೀನಾರಾಯಣ್‌ ಅವರು ಕೇವಲ ಅಭಿವ್ಯಕ್ತಿಯ ಹಕ್ಕನ್ನು ಪ್ರತಿಪಾದಿಸಿದ್ದು ತಮ್ಮ ಸಂದೇಶಗಳು ಕೀಳುಮಟ್ಟದ್ದಾಗಿವೆ ಎಂದು ತಿಳಿದುಬಂದಾಗ ತಕ್ಷಣವೇ ಕ್ಷಮೆ ಯಾಚಿಸಿದ್ದಾರೆ ಎಂದು ತಿಳಿಸಿದ ನ್ಯಾಯಾಲಯ ಚಾರ್ಜ್‌ ಮೆಮೊವನ್ನು ರದ್ದುಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
A_Lakshminarayanan_v_The_AGM.pdf
Preview
Kannada Bar & Bench
kannada.barandbench.com