ಚೆನ್ನೈ ಫಾರ್ಮ್ಯುಲಾ ಒನ್‌ ನೈಟ್‌ ರೇಸ್‌ ಅಬಾಧಿತ: ತಡೆ ನೀಡಲು ನಿರಾಕರಿಸಿದ ಮದ್ರಾಸ್‌ ಹೈಕೋರ್ಟ್‌

ಚೆನ್ನೈ ಫಾರ್ಮ್ಯುಲಾ ಒನ್‌ ನೈಟ್‌ ರೇಸ್‌ ಅಬಾಧಿತ: ತಡೆ ನೀಡಲು ನಿರಾಕರಿಸಿದ ಮದ್ರಾಸ್‌ ಹೈಕೋರ್ಟ್‌

ಫೆಡರೇಶನ್ ಇಂಟರ್‌ನ್ಯಾಶನಲ್ ಡಿ ಎಲ್' ಆಟೋಮೊಬೈಲ್ (ಎಫ್‌ಐಎ) ಹೋಮೋಲೋಗೇಶನ್ ಪ್ರಮಾಣಪತ್ರವನ್ನು ಪಡೆಯದೆ ರೇಸ್‌ಅನ್ನು ನಡೆಸಲಾಗುವುದಿಲ್ಲ ಎಂದು ತಮಿಳುನಾಡು ಅಡ್ವೊಕೇಟ್ ಜನರಲ್ ಪಿಎಸ್ ರಾಮನ್ ಪೀಠಕ್ಕೆ ಮೌಖಿಕ ಭರವಸೆ ನೀಡಿದರು.
Published on

ಇದೇ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಚೆನ್ನೈನಲ್ಲಿ ನಡೆಯಲಿರುವ ಫಾರ್ಮುಲಾ 4 ನೈಟ್ ಸ್ಟ್ರೀಟ್ ರೇಸ್ ಕ್ರೀಡೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಡಿ ಕೆ ಕೃಷ್ಣಕುಮಾರ್ ಮತ್ತು ಪಿ ಬಿ ಬಾಲಾಜಿ ಅವರ ಪೀಠವು ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (ಎಸ್‌ಡಿಎಟಿ) ಮತ್ತು ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್‌ಗಳು (ಆರ್‌ಪಿಪಿಎಲ್) ಜಂಟಿಯಾಗಿ ಆಯೋಜಿಸಿರುವ ರೇಸ್‌ ನಡೆಸಲು ಹಸಿರು ನಿಶಾನೆ ತೋರಿತು.

ಫೆಡರೇಶನ್ ಇಂಟರ್‌ನ್ಯಾಶನಲ್ ಡಿ ಎಲ್' ಆಟೋಮೊಬೈಲ್ (ಎಫ್‌ಐಎ) ಹೋಮೋಲೋಗೇಶನ್ ಪ್ರಮಾಣಪತ್ರವನ್ನು ಪಡೆಯದೆ ರೇಸ್‌ಅನ್ನು ನಡೆಸಲಾಗುವುದಿಲ್ಲ ಎಂದು ತಮಿಳುನಾಡು ಅಡ್ವೊಕೇಟ್ ಜನರಲ್ ಪಿಎಸ್ ರಾಮನ್ ಮೌಖಿಕ ಭರವಸೆ ನೀಡಿದ ನಂತರ ನ್ಯಾಯಾಲಯವು ರೇಸ್‌ ನಡೆಸಲು ಅನುಮತಿ ನೀಡಿತು.

ಎಸ್‌ಡಿಎಟಿ ಮತ್ತು ಖಾಸಗಿ ಸಂಘಟಕ ಕಂಪನಿ ಆಯೋಜಿಸಿರುವ ಫಾರ್ಮ್ಯುಲಾ ಒನ್‌ ನೈಟ್ ರೇಸ್‌ ನಡೆಸದಂತೆ ತಡೆ ನೀಡಲು ಬಿಜೆಪಿ ವಕ್ತಾರ ಎ ಎನ್‌ ಎಸ್ ಪ್ರಸಾದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ.ರಾಘವಾಚಾರಿ ಅವರು, ರೇಸ್‌ಗಾಗಿ ನಗರದ ನಾಲ್ಕು ಪ್ರಮುಖ ಸಾರ್ವಜನಿಕ ರಸ್ತೆಗಳಲ್ಲಿ 3.7 ಕಿಲೋಮೀಟರ್ ಉದ್ದದ ಸರ್ಕೀಟ್‌ಅನ್ನು ಸಂಘಟಕರು ಗುರುತಿಸಿದ್ದಾರೆ. ರೇಸ್ ಕಾರ್‌ಗಳು ಶಕ್ತಿಯುತವಾದ ಎಂಜಿನ್‌ಗಳನ್ನು ಹೊಂದಿರುವುದರಿಂದ, ಸಾರ್ವಜನಿಕ ರಸ್ತೆಗಳು ಹಾನಿಯಾಗದಂತೆ ನೋಡಿಕೊಳ್ಳಲು ಸಂಘಟಕರು ಎಫ್‌ಐಎಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ರಾಘವಾಚಾರಿ ವಾದಿಸಿದ್ದರು.

Kannada Bar & Bench
kannada.barandbench.com