ಕ್ರೈಸ್ತರ ವಿರುದ್ಧ ದ್ವೇಷ ಭಾಷಣ ಆರೋಪ: ಅಣ್ಣಾಮಲೈ ವಿರುದ್ಧದ ಪ್ರಕರಣ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಕಾರ

ಕ್ರೈಸ್ತ ಮಿಷನರಿಗೆ ಸೇರಿದ ಸರ್ಕಾರೇತರ ಸಂಸ್ಥೆಯೊಂದು ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸದಂತೆ ನಿಷೇಧ ವಿಧಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಅಣ್ಣಾಮಲೈ ಹೇಳಿಕೊಂಡಿದ್ದರು.
ಕೆ ಅಣ್ಣಾಮಲೈ, ಮದ್ರಾಸ್ ಹೈಕೋರ್ಟ್
ಕೆ ಅಣ್ಣಾಮಲೈ, ಮದ್ರಾಸ್ ಹೈಕೋರ್ಟ್ಕೆ ಅಣ್ಣಾಮಲೈ (ಫೇಸ್‌ಬುಕ್‌)

ಕ್ರೈಸ್ತರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಕ್ರೈಸ್ತ ಮಿಷನರಿಗೆ ಸೇರಿದ ಸರ್ಕಾರೇತರ ಸಂಸ್ಥೆಯೊಂದು ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸದಂತೆ ನಿಷೇಧ ವಿಧಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಅಣ್ಣಾಮಲೈ ಹೇಳಿಕೊಂಡಿದ್ದರು.

ಅಣ್ಣಾಮಲೈ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ , ಹೈಕೋರ್ಟ್‌ ಈಗ ನೀಡುತ್ತಿರುವ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ ಪ್ರಕರಣ ಮುಂದುವರೆಸುವಂತೆ ಸೇಲಂನ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶನ ನೀಡಿದರು.

ಅಣ್ಣಾಮಲೈ ಅವರ ಪ್ರಕರಣವು ಅಧಿಕಾರ ಮತ್ತು ಪ್ರಭಾವದ ಸ್ಥಾನದಲ್ಲಿರುವವರು ಎಚ್ಚರಿಕೆ ವಹಿಸುವಂತೆ ನೆನಪಿಸುವ ಮತ್ತೊಂದು ಪ್ರಕರಣವಾಗಿದೆ ಎಂದು ನ್ಯಾ. ಆನಂದ್‌ ತಿಳಿಸಿದರು.

ಪರಿಸರದ ವಿಚಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಅಣ್ಣಾಮಲೈ ಅವರು ಉದ್ದೇಶಪೂರ್ವಕವಾಗಿ ಮತ್ತು ಅನುಕೂಲಕರ ರೀತಿಯಲ್ಲಿ ಕೋಮು ಉದ್ವಿಗ್ನತೆ ಪ್ರಚೋದಿಸುವ ಸಾಧನವಾಗಿ ಬಳಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಅರ್ಜಿದಾರರು ಮಾಜಿ ಹಿರಿಯ ಐಪಿಎಸ್‌ ಅಧಿಕಾರಿಯಾಗಿದ್ದು ಅವರಿಗೆ ಈ ನೆಲದ ಕಾನೂನುಗಳ ಅರಿವಿತ್ತು ಎಂದು ನಿರೀಕ್ಷಿಸುತ್ತೇವೆ.

  • ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಪ್ರಸಿದ್ಧ ನಾಯಕ ಹಾಗೂ ಸಮೂಹವನ್ನು ಪ್ರಭಾವಿಸಬಲ್ಲ ಅವರು ನೀಡಿದ ಹೇಳಿಕೆಗಳು ಜನರ ಮೇಲೆ ಅದರಲ್ಲಿಯೂ ಹಿಂದೂ ಧರ್ಮಕ್ಕೆ ಸೇರಿದವರ ಮೇಲೆ ಬಹಳ ವ್ಯಾಪಕ ಪ್ರಭಾವ ಬೀರುತ್ತವೆ.

  • ಅವರ ಭಾಷಣ ಒಂದು ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸಿಕೊಂಡಿದೆ.

  • ಹಿಂದೂ ಸಂಸ್ಕೃತಿಯನ್ನು ನಾಶಪಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧನಸಹಾಯ ಪಡೆದ ಕ್ರಿಶ್ಚಿಯನ್ ಮಿಷನರಿಗೆ ಸೇರಿದ ಸರ್ಕಾರೇತರ ಸಂಸ್ಥೆ ಉದ್ದೇಶಪೂರ್ವಕ ಯತ್ನ ಮಾಡಿದೆ ಎಂದು ಬಿಂಬಿಸಲು ಅವರು ಹೊರಟಿದ್ದು ನಿಚ್ಚಳವಾಗಿದೆ.

  • ಈ ಯತ್ನವನ್ನು ತಡೆಯಲು ನಾವೆಲ್ಲರೂ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದೇವೆ ಎಂದು ಅವರು ಹೇಳಿದ್ದರು. ಅದು ಕೋಮು ಭಾವನೆಯನ್ನು ಕೆರಳಿಸುವಂತಿದೆ.

  • ಕ್ರೈಸ್ತರು ಹಿಂದೂಗಳನ್ನು ಮುಗಿಸಲು ಹೊರಟಿದ್ದು "ನಾವು" (ಈ ಸಂದರ್ಭದಲ್ಲಿ ಹಿಂದೂಗಳು) ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುತ್ತಿದ್ದೇವೆ ಎಂದು ಸಾರ್ವಜನಿಕರು ನಂಬುವಂತೆ ಮಾಡಲಾಯಿತು.

  • ಪರಿಸರದ ಹಿತದೃಷ್ಟಿಯಿಂದ ಸಲ್ಲಿಸಿದ ಅರ್ಜಿಯೊಂದನ್ನು ಹೀಗೆ ಕೋಮು ಉದ್ವಿಗ್ನತೆಯ ಸಾಧನವಾಗಿ ಪರಿವರ್ತಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ವಿ. ಪಿಯೂಷ್ ಎಂಬುವವರು ಅಣ್ಣಾಮಲೈ ವಿರುದ್ಧ ದೂರು ದಾಖಲಿಸಿದ್ದರು. ಕ್ರೈಸ್ತ ಮಿಷನರಿಗೆ ಸೇರಿದ ಸರ್ಕಾರೇತರ ಸಂಸ್ಥೆಯೊಂದು ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸದಂತೆ ನಿಷೇಧ ವಿಧಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಪ್ರಕರಣ ದಾಖಲಿಸಿದೆ ಎಂದು ಸುಳ್ಳು ಹೇಳುವ ಮೂಲಕ ಕ್ರೈಸ್ತರ ವಿರುದ್ಧ ಉದ್ದೇಶಪೂರ್ವಕ ಕೋಮುದ್ವೇಷಕ್ಕೆ ಅಣ್ಣಾಮಲೈ ಯತ್ನಿಸಿದ್ದರು ಎಂದು ಪಿಯುಷ್‌ ದೂರಿದ್ದರು.

ಸೇಲಂ ನ್ಯಾಯಾಲಯವು ಅಣ್ಣಾಮಲೈ ಅವರಿಗೆ ಸಮನ್ಸ್ ಜಾರಿ ಮಾಡಿತ್ತು, ನಂತರ ಸಮನ್ಸ್‌ ರದ್ದತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
K Annamalai vs V Piyush.pdf
Preview

Related Stories

No stories found.
Kannada Bar & Bench
kannada.barandbench.com