ಕ್ರೈಸ್ತರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಏಪ್ರಿಲ್ 29ಕ್ಕೆ ಪ್ರಕರಣ ಮುಂದೂಡಿದೆ. ಅಣ್ಣಾಮಲೈ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತು ವಕೀಲ ಜೆ ಸಾಯಿ ದೀಪಕ್ ಹಾಜರಿದ್ದರು.
ಅಣ್ಣಾಮಲೈ ವಿರುದ್ಧ ಆರಂಭಿಸಲಾದ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ಫೆಬ್ರವರಿ 8ರಂದು ನಿರಾಕರಿಸಿತ್ತು.
ಕ್ರೈಸ್ತ ಮಿಷನರಿಗೆ ಸೇರಿದ ಸರ್ಕಾರೇತರ ಸಂಸ್ಥೆಯೊಂದು ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸದಂತೆ ನಿಷೇಧ ವಿಧಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಅಣ್ಣಾಮಲೈ ಹೇಳಿಕೊಂಡಿದ್ದರು.
ಅಣ್ಣಾಮಲೈ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ , ಹೈಕೋರ್ಟ್ ಈಗ ನೀಡುತ್ತಿರುವ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ ಪ್ರಕರಣ ಮುಂದುವರೆಸುವಂತೆ ಸೇಲಂನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದೇಶನ ನೀಡಿದ್ದರು.
ಅಣ್ಣಾಮಲೈ ಅವರ ಪ್ರಕರಣ ಅಧಿಕಾರ ಮತ್ತು ಪ್ರಭಾವದ ಸ್ಥಾನದಲ್ಲಿರುವವರು ಎಚ್ಚರಿಕೆ ವಹಿಸುವಂತೆ ನೆನಪಿಸುವ ಮತ್ತೊಂದು ಪ್ರಕರಣವಾಗಿದೆ ಎಂದು ನ್ಯಾ. ಆನಂದ್ ತಿಳಿಸಿದ್ದರು.
ಪರಿಸರದ ವಿಚಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಅಣ್ಣಾಮಲೈ ಅವರು ಉದ್ದೇಶಪೂರ್ವಕವಾಗಿ ಮತ್ತು ಅನುಕೂಲಕರ ರೀತಿಯಲ್ಲಿ ಕೋಮು ಉದ್ವಿಗ್ನತೆ ಪ್ರಚೋದಿಸುವ ಸಾಧನವಾಗಿ ಬಳಸಿದ್ದಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.
ಸಾಮಾಜಿಕ ಮಾಧ್ಯಮಗಳ ಆಗಮನ ಮತ್ತು ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ದ್ವೇಷ ಭಾಷಣವನ್ನು ವಿಭಿನ್ನವಾಗಿ ನೋಡಲು ಇದು ಸಕಾಲ ಎಂದು ನ್ಯಾಯಮೂರ್ತಿ ವೆಂಕಟೇಶ್ ತರ್ಕಿಸಿದ್ದರು.
ಸಾಮಾಜಿಕ ಕಾರ್ಯಕರ್ತ ವಿ.ಪಿಯೂಷ್ ಎಂಬುವವರು ಅಣ್ಣಾಮಲೈ ವಿರುದ್ಧ ದೂರು ದಾಖಲಿಸಿದ್ದರು.