ಚಿತ್ರ ನಿರ್ಮಾಪಕರಿಗೆ ತಮ್ಮ ಸಂಗೀತ ಕೃತಿಗಳ ಹಕ್ಕಿನ ಕೃತಿಸ್ವಾಮ್ಯವನ್ನು ಶಾಶ್ವತವಾಗಿ ವರ್ಗಾವಣೆ ಮಾಡಿರುವುದಕ್ಕೆ ತೆರಿಗೆ ಸಲ್ಲಿಸಬೇಕೆಂದು ಸೂಚಿಸಿದ್ದ ಸರಕು ಮತ್ತು ಸೇವಾ ತೆರಿಗೆ ಇಲಾಖೆ ನೋಟಿಸ್ ಪ್ರಶ್ನಿಸಿ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ [ಎಂ/ಎಸ್ ಅಮೃತಾ ಇಂಟರ್‌ನ್ಯಾಶನಲ್ ಮತ್ತು ಸಿಜಿಎಸ್‌ಟಿ ಹಾಗೂ ಸೆಂಟ್ರಲ್ ಎಕ್ಸೈಸ್‌ನ ಪ್ರಧಾನ ಆಯುಕ್ತರ ನಡುವಣ ಪ್ರಕರಣ].
ಸಂಗೀತ ಸಂಯೋಜಕರಾದ ರೆಹಮಾನ್, ಸಿ ಆರ್ ಸಂತೋಷ್ ನಾರಾಯಣನ್ ಮತ್ತು ಜಿ ವಿ ಪ್ರಕಾಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಿತಾ ಸುಮಂತ್ ವಜಾಗೊಳಿಸಿದರು.
ಆದರೆ, ದಂಡದೊಂದಿಗೆ ಸೇವಾ ತೆರಿಗೆ ಪಾವತಿಸಬೇಕೆಂಬ ತೆರಿಗೆ ಇಲಾಖೆಯ ಬೇಡಿಕೆ ಪ್ರಶ್ನಿಸಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ಮುಂದೆ ನಾಲ್ಕು ವಾರದೊಳಗೆ ಶಾಸನಬದ್ಧ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯ ಸ್ವಾತಂತ್ರ್ಯ ಕಲ್ಪಿಸಿತು. ಸಿಜಿಎಸ್‌ಟಿ ಕಾಯಿದೆಯಡಿಯ ಮೇಲ್ಮನವಿ ಅಧಿಕಾರಿಗಳು, ʼಕಾಲಮಿತಿ ವಿಧಿಸದೆʼ ಮೇಲ್ಮನವಿ ಪರಿಗಣಿಸುವಂತೆ ಪೀಠ ಸೂಚಿಸಿತು.
ತಮ್ಮ ವಿರುದ್ಧ ಅಕ್ಟೋಬರ್ 2019ರಲ್ಲಿ ಸಿಜಿಎಸ್‌ಟಿ ಮತ್ತು ಕೇಂದ್ರ ಅಬಕಾರಿ ಪ್ರಧಾನ ಆಯುಕ್ತರು ಕೈಗೊಂಡ ಕ್ರಮಗಳನ್ನು ರೆಹಮಾನ್ ಪ್ರಶ್ನಿಸಿದ್ದರು. ರೆಹಮಾನ್ ಮತ್ತಿತರರು 2013 ಮತ್ತು ಜೂನ್, 2017ರ ನಡುವಿನ ಸಂಗೀತ ಕೃತಿಗಳಿಗೆ ಸಂಬಂಧಿಸಿದಂತೆ ಮೂರು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಕರಾರು ಕುರಿತಾದ ಸೇವಾ ತೆರಿಗೆ ಪಾವತಿಸಿಲ್ಲ. ಸೇವಾ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವುದನ್ನು ತಪ್ಪಿಸಲು ಅವರು ಯತ್ನಿಸಿದ್ದರು. ಅವರು ಈ ಸಂಗೀತ ಕೃತಿಗಳ ಮಾಲೀಕರಲ್ಲ. ಆದ್ದರಿಂದ, ಕೃತಿಸ್ವಾಮ್ಯ ಕಾಯಿದೆ, 1957ರ ಸೆಕ್ಷನ್ 13 (1) (ಎ) ಅಡಿಯಲ್ಲಿ ಪರಿಗಣಿಸಿದಂತೆ ಯಾವುದೇ ಕೃತಿಸ್ವಾಮ್ಯವನ್ನು ಅವರಿಗೆ ನೀಡಲಾಗಿಲ್ಲ ಎಂದು ರೆಹಮಾನ್ ಅವರಿಗೆ ನೀಡಲಾದ ನೋಟಿಸ್ ವಿವರಿಸಿತ್ತು.
ಇತ್ತ ರೆಹಮಾನ್ ಅವರು ʼಚೆನೈ ವಲಯ ಜಿಎಸ್‌ಟಿ ಪ್ರಾಧಿಕಾರ ತಮಗೆ ಶೋಕಾಸ್ ನೋಟಿಸ್ ನೀಡಿದ್ದರೂ ತನಿಖೆ ಆರಂಭಿಸಿರುವುದು ಕೇಂದ್ರ ಜಿಎಸ್‌ಟಿ ಪ್ರಾಧಿಕಾರʼ ಎಂದು ಆಕ್ಷೇಪಿಸಿದ್ದರು. ತಾವು ತಮ್ಮ ಸಂಗೀತ ಕೃತಿಗಳ ಏಕೈಕ ಮತ್ತು ಸಂಪೂರ್ಣ ಮಾಲೀಕರಾಗಿದ್ದು ಒಪ್ಪಂದಗಳ ಮೂಲಕ ಚಲನಚಿತ್ರ ನಿರ್ಮಾಪಕರು ತಮ್ಮ ಕೃತಿಸ್ವಾಮ್ಯ ಬಳಸಿಕೊಳ್ಳಬಹುದು. ಕೃತಿಸ್ವಾಮ್ಯದ ಶಾಶ್ವತ ವರ್ಗಾವಣೆಯನ್ನು ಸೇವಾ ತೆರಿಗೆ ವ್ಯಾಪ್ತಿಗೆ ತರಲಾಗದು ಎಂದಿದ್ದರು.