ಅರ್ಜಿದಾರರು ಹಾಜರಾಗದಿದ್ದರೆ ಈಶ ಫೌಂಡೇಷನ್ ವಿರುದ್ಧದ ನಾಪತ್ತೆ ಪ್ರಕರಣ ವಜಾ: ಮದ್ರಾಸ್ ಹೈಕೋರ್ಟ್ ಎಚ್ಚರಿಕೆ
ತಮ್ಮ ಸಹೋದರ ನಾಪತ್ತೆಯಾಗಿರುವ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮನವಿದಾರ ವಿಚಾರಣೆಗೆ ಹಾಜರಾಗದೆ ಹೋದರೆ ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ವಿರುದ್ಧ ಹೂಡಲಾಗಿದ್ದ ನಾಪತ್ತೆ ಪ್ರಕರಣವನ್ನು ವಜಾಗೊಳಿಸುವುದಾಗಿ ಮದ್ರಾಸ್ ಹೈಕೋರ್ಟ್ ಈಚೆಗೆ ಎಚ್ಚರಿಕೆ ನೀಡಿದೆ.
ತನ್ನ ಸಹೋದರ ನಾಪತ್ತೆಯಾದ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಸಿ ತಿರುಮಲೈ ಪರ ವಕೀಲರು ವಿಚಾರಣೆಗೆ ಹಾಜರಾಗಲಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಜೂನ್ 7ಕ್ಕೆ ಪ್ರಕರಣ ಮುಂದೂಡಿತು. ಅರ್ಜಿದಾರ ವಿಚಾರಣೆಗೆ ಹಾಜರಾಗಲು ಇದು ಕೊನೆಯ ಅವಕಾಶ ಎಂದು ನ್ಯಾಯಾಲಯ ಗುರುವಾರ ಸ್ಪಷ್ಟಪಡಿಸಿತು.
ಪ್ರಕರಣದ ತನಿಖೆ ನಡೆಯುತ್ತಿದ್ದು ಈ ಕುರಿತಾದ ಸ್ಥಿತಿಗತಿ ವರದಿ ಸಲ್ಲಿಸಲು ತಮಗೆ ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ತಮಿಳುನಾಡು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣದ ಸಂಬಂಧ ಈಶ ಯೋಗ ಕೇಂದ್ರದ ಕೆಲವು ಉದ್ಯೋಗಿಗಳು, ಸ್ವಯಂಸೇವಕರು ಸೇರಿದಂತೆ 36 ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ, ಆದರೆ ಸ್ಥಿತಿಗತಿ ವರದಿ ಸಲ್ಲಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಇ ರಾಜ್ ತಿಲಕ್ ಅವರು ನ್ಯಾಯಮೂರ್ತಿಗಳಾದ ಎಂ ಎಸ್ ರಮೇಶ್ ಮತ್ತು ಸುಂದರ್ ಮೋಹನ್ ಅವರಿದ್ದ ಪೀಠಕ್ಕೆ ತಿಳಿಸಿದರು.
2016ರಿಂದ ಈಶ ಫೌಂಡೇಶನ್‌ನ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಮಿಳುನಾಡು ಪೊಲೀಸರು ಕಳೆದ ತಿಂಗಳು, ಪೀಠಕ್ಕೆ ತಿಳಿಸಿದ್ದರು. ತಿರುಮಲೈ ಅವರ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಪೊಲೀಸರು ಮೌಖಿಕವಾಗಿ ಹೇಳಿಕೆ ನೀಡಿದ್ದರು.
ತಮ್ಮ ಸಹೋದರ ಗಣೇಶನ್ (46) ಕಳೆದ ವರ್ಷ ಮಾರ್ಚ್‌ನಲ್ಲಿ ಈಶ ಫೌಂಡೇಷನ್‌ನಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ ತಿರುಮಲೈ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಗಣೇಶನ್ ಎರಡು ದಿನಗಳಿಂದ ಹಾಜರಾಗಿಲ್ಲ ಎಂದು ಈಶ ಪ್ರತಿಷ್ಠಾನ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ ಅವರು ನಂತರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಫೌಂಡೇಷನ್ ತೊರೆಯುವ ಅನೇಕರು ತಮ್ಮ ಸ್ವಇಚ್ಛೆ ಮೇರೆಗೆ ಹೇಳದೆ ಕೇಳದೆ ಹೊರಟುಬಿಡುತ್ತಾರೆ ಎಂದು ಪೊಲೀಸರು ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದರು.