ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣ: ಎಫ್‌ಐಆರ್‌ ಬಹಿರಂಗಪಡಿಸಿದ ಪೊಲೀಸರ ನಿರ್ಲಕ್ಷ್ಯಕ್ಕೆ ಹೈಕೋರ್ಟ್‌ ಛೀಮಾರಿ

ಗುರುತು ಬಹಿರಂಗಪಡಿಸಿರುವ ಪೊಲೀಸರ ನಿರ್ಲಕ್ಷ್ಯದಿಂದಾಗಿ ಸಂತ್ರಸ್ತೆಯ ಕುಟುಂಬ ಅನುಭವಿಸುತ್ತಿರುವ ನೋವಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ ಮದ್ರಾಸ್‌ ಹೈಕೋರ್ಟ್‌.
Madras High Court
Madras High Court
Published on

ತಮಿಳುನಾಡಿನ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.23ರಂದು ಲೈಂಗಿಕ ದೌರ್ಜನ್ಯಕ್ಕೊಳಗಾದ 19 ವರ್ಷದ ವಿದ್ಯಾರ್ಥಿನಿಯ ಗುರುತಿನ ವಿವರಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ ಶುಕ್ರವಾರ ಚೆನ್ನೈ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಪ್ರಕರಣದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪೊಲೀಸರಿಂದ ಹೇಗೆ ಸೋರಿಕೆಯಾಯಿತು ಎಂದು ನ್ಯಾ. ಎಸ್‌ ಎಂ ಸುಬ್ರಮಣ್ಯಂ ಮತ್ತು ನ್ಯಾ. ವಿ ಲಕ್ಷ್ಮೀನಾರಾಯಣ ಅವರಿದ್ದ ರಜಾಕಾಲೀನ ಪೀಠವು ಚೆನ್ನೈ ಪೊಲೀಸರನ್ನು ಕೇಳಿತು. "ಇದರಿಂದಾಗಿ ಸಂತ್ರಸ್ತೆಯ ಕುಟುಂಬಕ್ಕೆ ಹಾಗೂ ಅವರು ಅನುಭವಿಸುತ್ತಿರುವ ನೋವಿಗೆ ಯಾರು ಹೊಣೆ" ಎಂದು ನ್ಯಾಯಾಲವು ಕೇಳಿತು. ಇಂತಹ ಲೋಪವು ಇತರ ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸುವುದನ್ನು ತಡೆಯುತ್ತದೆ ಎಂದು ಬೇಸರಿಸಿತು.

ಮುಂದುವರಿದು, ಪೊಲೀಸರ ಎಡವಟ್ಟಿನ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಿದ ನ್ಯಾಯಾಲಯ, "ಎಲ್ಲಾ ವಿದ್ಯಾರ್ಥಿಗಳ ಪೋಷಕರು ಈಗ ಪೊಲೀಸರನ್ನು ಸಂಪರ್ಕಿಸಲು ಭಯಪಡುತ್ತಾರೆ. ಈ ಬಗ್ಗೆ ನಾವು ಕಳಕಳಿ ಹೊಂದಿದ್ದು, ವಿದ್ಯಾರ್ಥಿಗಳು ಮುಂದೆ ಬಂದು ತಮಗೆ ತಿಳಿದಿರುವ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ವಿನಂತಿಸುತ್ತೇವೆ" ಎಂದಿತು.

ಪೊಲೀಸರ ಲೋಪದ ಬಗ್ಗೆ ಕಿಡಿಕಿಡಿಯಾದ ಪೀಠವು, "ನೀವು ಎಫ್‌ಐಆರ್ ಅನ್ನು ಅಪ್‌ಲೋಡ್ ಮಾಡಬಹುದು, ಆದರೆ (ಸಂತ್ರಸ್ತೆಯ) ಗುರುತಿನ ವಿವರಗಳನ್ನು ನೀವು ಮಸುಕು ಮಾಡಬೇಕಿತ್ತು. ಈ ಬಗ್ಗೆ ನೀವು ನಮಗೆ ಉತ್ತರಿಸಬೇಕು. ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ಉಂಟಾಗಿರುವ ಹಾನಿಯನ್ನು ನೀವು ಹಿಂತಿರುಗಿಸಲು ಸಾಧ್ಯವಿಲ್ಲ. ನಾಳೆ ಬೆಳಿಗ್ಗೆ ನಮಗೆ ಪ್ರತಿಕ್ರಿಯೆ ಸಲ್ಲಿಸಿ" ಎಂದಿತು.

ಪ್ರಕರಣದ ತನಿಖೆಯ ಕುರಿತಾಗಿ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ ನಡೆಸುತ್ತಿದೆ. ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಜಯಪ್ರಕಾಶ್ ಅವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ (ಎಐಎಡಿಎಂಕೆ) ಸದಸ್ಯರೂ ಆಗಿದ್ದಾರೆ.

ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನು ಇಂದು ಬೆಳಗ್ಗೆ ಆರಂಭಿಸಿದ ನ್ಯಾಯಾಲಯವು ಮಧ್ಯಾಹ್ನ 2.15 ರೊಳಗೆ ಪ್ರಕರಣದ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು.

ಇಂದಿನ ವಿಚಾರಣೆ ವೇಳೆ ನ್ಯಾಯಾಲಯವು, ಘಟನೆಯ ಬಗ್ಗೆ ಪೊಲೀಸ್‌ ಕಮಿಷನರ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಕೇವಲ ಒಬ್ಬೇ ಒಬ್ಬ ಆರೋಪಿಯು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದ್ದರ ಬಗ್ಗೆಯೂ ಆಕ್ಷೇಪಣೆ ವ್ಯಕ್ತಪಡಿಸಿತು. "ಪೊಲೀಸ್‌ ಸೇವಾ ನಿಯಮಾವಳಿಗಳಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸುವ ಸಂಬಂಧ ಏನು ಹೇಳಲಾಗಿದೆ?" ಎಂದು ಅದು ಪೊಲೀಸ್‌ ಇಲಾಖೆಯನ್ನು ಪ್ರಶ್ನಿಸಿತು. ಅಲ್ಲದೆ, "ಆರೋಪಿಗೆ ಬ್ಯಾಂಡೇಜ್‌ ಏಕೆ ಹಾಕಲಾಗಿದೆ? ಆತನಿಗೆ ಪೊಲೀಸ್‌ ವಶದಲ್ಲಿದ್ದಾಗ ಹಿಂಸೆ ನೀಡಲಾಗಿದೆಯೇ?" ಎಂದು ಸಹ ಪ್ರಶ್ನಿಸಿತು.

ವಿಚಾರಣೆಯ ಒಂದು ಹಂತದಲ್ಲಿ ವಿಶ್ವವಿದ್ಯಾಲಯದ ಭದ್ರತಾ ವೈಫಲ್ಯದ ಬಗ್ಗೆಯೂ ನ್ಯಾಯಾಲಯ ಬೆರಳು ಮಾಡಿತು. "ನಿಮ್ಮ ಕ್ಯಾಂಪಸ್‌ ಆವರಣದಲ್ಲಿಯೇ ಇಂತಹದ್ದೊಂದು ಘಟನೆ ನಡೆದಿದೆ. ಪೊಲೀಸರು ಸಹ ವಿವಿ ಆವರಣ ಪ್ರವೇಶಿಸಲು ನಿಮ್ಮ ಅನುಮತಿ ಪಡೆಯಬೇಕಿದೆ. ಆದರೆ, ದುಷ್ಕರ್ಮಿಯೊಬ್ಬ ನಿಮ್ಮ ಕ್ಯಾಂಪಸ್‌ನಲ್ಲಿ ರಾಜಾರೋಷವಾಗಿ ಅಡ್ಡಾಡಿದ್ದಾನೆ!" ಎಂದು ಛೀಮಾರಿ ಹಾಕಿತು.

ಅಂತಿಮವಾಗಿ ಪ್ರಕರಣದ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.

ಹಿನ್ನೆಲೆ: ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರ ಮೇಲೆ ವಿವಿಯ ಆವರಣದಲ್ಲಿಯೇ ನಡೆದಿದ್ದ ಲೈಂಗಿಕ ದೌರ್ಜನ್ಯದ ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಬೀದಿಬದಿಯ ಬಿರಿಯಾನಿ ವ್ಯಾಪಾರಿ ಜ್ಞಾನಶೇಖರನ್ ಎಂಬಾತನನ್ನು ಡಿಸೆಂಬರ್ 25 ರಂದು ಬಂಧಿಸಿದ್ದರು. ದೂರುದಾರೆಯು ತಿಳಿಸಿರುವಂತೆ ಅನುಚಿತ ಘಟನೆಯು ಡಿಸೆಂಬರ್ 23 ರಂದು ನಡೆದಿತ್ತು.

ಘಟನೆಯ ನಂತರ, ಸಂತ್ರಸ್ತೆಯು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ರಚಿಸಿರುವ ವಿಶ್ವವಿದ್ಯಾಲಯದ ಆಂತರಿಕ ದೂರು ಸಮಿತಿಗೆ ದೂರನ್ನೂ ಸಲ್ಲಿಸಿದ್ದರು.

Kannada Bar & Bench
kannada.barandbench.com