ಆನ್‌ಲೈನ್ ರಮ್ಮಿ ಮತ್ತು ಆನ್‌ಲೈನ್ ಪೋಕರ್ ಸೇರಿದಂತೆ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವ ಸಂಬಂಧ ತಮಿಳುನಾಡು ಗೇಮಿಂಗ್ ಕಾಯಿದೆ- 1930ಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ಮಾಡಿದ್ದ ತಿದ್ದುಪಡಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ನ್ಯಾಯಾಲಯವು ತಮಿಳುನಾಡು ಗೇಮಿಂಗ್ ಮತ್ತು ಪೋಲಿಸ್ ಕಾನೂನುಗಳ (ತಿದ್ದುಪಡಿ) ಕಾಯಿದೆ, 2021 ರ ಭಾಗ II ಅಸಾಂವಿಧಾನಿಕ ಎಂದು ನ್ಯಾಯಾಲಯ ಘೋಷಿಸಿತು, ಸೈಬರ್ ಮೂಲಕ ನಡೆಸುವ ಬೆಟಿಂಗ್, ಜೂಜಾಟ ಹಾಗೂ ಕೌಶಲದ ಆಟಗಳ ಮೂಲಕ ನಡೆಸುವ ಬಾಜಿ, ಬೆಟಿಂಗ್‌ಗಳನ್ನು ಈ ಭಾಗ ನಿಷೇಧಿಸುತ್ತದೆ.
ದೊಡ್ಡ ಮಟ್ಟದಲ್ಲಿ ಸಂಪೂರ್ಣ ನಿಷೇಧ ಹೇರುವ ಮೂಲಕ ಕನಿಷ್ಠ ಮಟ್ಟದಲ್ಲಿ ಮಧ್ಯಪ್ರವೇಶಿಸುವ (least intrusive test ) ವಿಧಾನವನ್ನು ಉಲ್ಲಂಘಿಸಲಾಗಿದೆ. ಆ ಮೂಲಕ ಸಂವಿಧಾನದತ್ತವಾಗಿ ದೊರೆತ 19 (1) (ಜಿ)ಯನ್ನು (ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡುವ ಹಕ್ಕು, ಅಥವಾ ಯಾವುದೇ ಉದ್ಯೋಗ, ವ್ಯಾಪಾರ ಅಥವಾ ಉದ್ಯಮವನ್ನು ಮುಂದುವರಿಸುವ ಹಕ್ಕು) ಉಲ್ಲಂಘನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರಿದ್ದ ಪೀಠ ತಿಳಿಸಿದೆ.
ಕಾಯಿದೆಯು ಹುಚ್ಚಾಟಿಕೆಯಿಂದ ಕೂಡಿದ್ದು, ತರ್ಕರಹಿತವೂ, ಅತಿರೇಕವೂ ಅಸಮಾನತೆಯಿಂದಲೂ ಕೂಡಿರುವುದಾಗಿದೆ ಎಂದು ಪರಿಗಣಿಸಬೇಕಾಗುತ್ತದೆ. ಗೇಮಿಂಗ್ ಕುರಿತು ತಿದ್ದುಪಡಿ ಮಾಡಲಾದ ವ್ಯಾಖ್ಯಾನ ಇಡೀ ಶಾಸನಕ್ಕೆ ಅನ್ವಯವಾಗುವುದರಿಂದ ಪ್ರಕರಣದಲ್ಲಿ ಕಾನೂನಿನ ನಿರ್ದಿಷ್ಟ ಭಾಗಕ್ಕೆ ಮಾತ್ರವೇ ಅನ್ವಯಿಸುವ 'ಪ್ರತ್ಯೇಕಿಸುವ ಸಿದ್ಧಾಂತ'ವೂ ಕೂಡ ಅನ್ವಯವಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ ತಿದ್ದುಪಡಿ ತನ್ನ ಉದ್ದೇಶಕ್ಕೆ ತಕ್ಕಂತೆ ಇಲ್ಲ. ಅದರ ಯಾವುದೇ ಭಾಗವನ್ನು ಉಳಿಸಿಕೊಳ್ಳಲಾಗದು ಎಂದು ತೀರ್ಮಾನಿಸಿದ ನ್ಯಾಯಾಲಯ ಸಂವಿಧಾನವನ್ನು ಉಲ್ಲಂಘಿಸುವ ಕಾರಣಕ್ಕೆ ತಿದ್ದುಪಡಿಯನ್ನು ಇಡಿಯಾಗಿ ರದ್ದುಪಡಿಸಿತು. ಆದರೂ ರಾಜ್ಯ ಸರ್ಕಾರ ಸಾಂವಿಧಾನಿಕ ತತ್ವಗಳ ಔಚಿತ್ಯಕ್ಕೆ ಅನುಗುಣವಾಗಿ ಸೂಕ್ತ ಶಾಸನ ರೂಪಿಸುವುದನ್ನು ತಾನು ತಡೆಯುವುದಿಲ್ಲ ಎಂದು ಹೇಳಿತು.
ಆನ್‌ಲೈನ್ ಗೇಮಿಂಗ್ ನಿಷೇಧ ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದೆ.