
ತಮಿಳುನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿರುವ, ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ 19 ವರ್ಷದ ವಿದ್ಯಾರ್ಥಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಸ್ವಯಂಪ್ರೇರಿತವಾಗಿ ಪರಿಗಣಿಸಿತು.
ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣ್ಯಂ ಮತ್ತು ವಿ ಲಕ್ಷ್ಮೀನಾರಾಯಣ್ ಅವರ ರಜಾಕಾಲೀನ ಪೀಠವು ಇಂದು ಮಧ್ಯಾಹ್ನ 2.15 ರೊಳಗೆ ಘಟನೆ ಮತ್ತು ಅದರ ತನಿಖೆಯ ವರದಿಯನ್ನು ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿತು.
ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಹಾಗೂ ನಗರದ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿ ವಕೀಲೆ ಆರ್ ವರಲಕ್ಷ್ಮಿ ಅವರು ನ್ಯಾಯಾಲಯಕ್ಕೆ ಪತ್ರ ಬರೆದ ನಂತರ ಪೀಠವು ಈ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಪರಿಗಣಿಸಿತು.
ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ವಿವಿಯ ಆವರಣದಲ್ಲಿಯೇ ನಡೆದಿದ್ದ ಲೈಂಗಿಕ ದೌರ್ಜನ್ಯದ ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಬೀದಿಬದಿಯ ಬಿರಿಯಾನಿ ವ್ಯಾಪಾರಿ ಜ್ಞಾನಶೇಖರನ್ ಎಂಬಾತನನ್ನು ಡಿಸೆಂಬರ್ 25 ರಂದು ಬಂಧಿಸಿದ್ದರು. ದೂರುದಾರೆಯು ತಿಳಿಸಿರುವಂತೆ ಅನುಚಿತ ಘಟನೆಯು ಡಿಸೆಂಬರ್ 23 ರಂದು ನಡೆದಿತ್ತು.
ಘಟನೆಯ ನಂತರ, ದೂರುದಾರೆಯು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ರಚಿಸಿರುವ ವಿಶ್ವವಿದ್ಯಾಲಯದ ಆಂತರಿಕ ದೂರು ಸಮಿತಿಗೆ ದೂರನ್ನೂ ಸಲ್ಲಿಸಿದ್ದರು.