Madurai Bench of Madras High Court
Madurai Bench of Madras High Court Madras High Court website

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗುವನ್ನು ಕೊಂದ ಪೋಷಕರು: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಮದ್ರಾಸ್‌ ಹೈಕೋರ್ಟ್‌

ಮಗು ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಂಗವೈಕಲ್ಯದಿಂದ ಜನಿಸಿದರೂ ಸಹ ಅದನ್ನು ನೋಡಿಕೊಳ್ಳುವುದು ಪೋಷಕರ ಬದ್ಧ ಕರ್ತವ್ಯವಾಗಿರುತ್ತದೆ ಎಂದ ನ್ಯಾಯಾಲಯ.
Published on

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ತಮ್ಮ 9 ವರ್ಷದ ಮಗಳನ್ನು ಕೊಂದ ಪೋಷಕರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಶುಕ್ರವಾರ ಎತ್ತಿಹಿಡಿದಿದೆ [ಮುನೀಶ್ವರನ್ Vs ತಮಿಳುನಾಡು ರಾಜ್ಯ].

ಮಾನಸಿಕ ಅಸ್ವಸ್ಥತೆಯಿಂದ ಜನಿಸಿದ ಮಕ್ಕಳನ್ನು ನಿರ್ಮೂಲನೆ ಮಾಡಲು ಒಂದೊಮ್ಮೆ ಕಾನೂನು ಪೋಷಕರಿಗೆ ಅವಕಾಶ ನೀಡಿದ್ದರೆ ಅಂತಹ ಯಾವುದೇ ಮಗು ಜೀವಂತವಾಗಿ ಉಳಿಯುತ್ತಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಜಿ ಕೆ ಇಳಂತಿರೈಯನ್ ಮತ್ತು ಆರ್ ಪೂರ್ಣಿಮಾ ಅವರ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿತು.

ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಂಗವೈಕಲ್ಯದಿಂದ ಜನಿಸಿದರೂ ಸಹ, ತಮ್ಮ ಮಗುವನ್ನು ನೋಡಿಕೊಳ್ಳುವುದು ಪೋಷಕರ ಬದ್ಧ ಕರ್ತವ್ಯವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

"ಮಗು ಮಾನಸಿಕ ಅಸ್ವಸ್ಥತೆಯಿಂದ ಹುಟ್ಟಿದ್ದರೂ, ದೈಹಿಕ ಅಂಗವೈಕಲ್ಯದಿಂದ ಹುಟ್ಟಿದ್ದರೂ ಅಥವಾ ಯಾವುದೇ ಅಂಗವೈಕಲ್ಯವಿಲ್ಲದೆ ಇದ್ದರೂ, ತಮ್ಮ ಮಗುವನ್ನು ನೋಡಿಕೊಳ್ಳುವುದು ಪೋಷಕರ ಬದ್ಧ ಕರ್ತವ್ಯವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ವೈಯಕ್ತಿಕ ಸಂಕಷ್ಟವು ಕ್ರಿಮಿನಲ್ ಕಾನೂನನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಮತ್ತು ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

"ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಇನ್ನೊಬ್ಬ ವ್ಯಕ್ತಿಯ ಜೀವನವನ್ನು ನಂದಿಸುವ ಹಕ್ಕು ಯಾರಿಗೂ ಇಲ್ಲ," ಎಂದ ನ್ಯಾಯಪೀಠವು ಅಪರಾಧಿ ಪೋಷಕರಾದ ಎಸ್ ಮುನೀಶ್ವರನ್ ಮತ್ತು ರೇವತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು. ಅಲ್ಲದೆ, ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು.

"ಪೋಷಕರು ಬುದ್ಧಿಮಾಂದ್ಯತೆಯಿಂದ ಜನಿಸಿದ ಮಕ್ಕಳನ್ನು ನಿರ್ಮೂಲನೆ ಮಾಡಲು ಒಂದೊಮ್ಮೆ ಕಾನೂನು ಅನುಮತಿಸಿದರೆ, ಅಂತಹ ಯಾವುದೇ ಮಗು ಈ ಜಗತ್ತಿನಲ್ಲಿ ಬದುಕುಳಿಯುವುದಿಲ್ಲ" ಎಂದು ಪೀಠ ಹೇಳಿತು.

ಈ ಮೊದಲು, ಶ್ರೀವಿಲ್ಲಿಪುತ್ತೂರಿನ ಫಾಸ್ಟ್ ಟ್ರ್ಯಾಕ್ ಮಹಿಳಾ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 342 ಮತ್ತು 302ರ ಅಡಿಯಲ್ಲಿ ಅಪರಾಧಿ ಪೋಷಕರನ್ನು ದೋಷಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಹಿನ್ನೆಲೆ: ಪ್ರಾಸಿಕ್ಯೂಷನ್ ಪ್ರಕಾರ, ಎಸ್ ಮುನೀಶ್ವರನ್ ಮತ್ತು ರೇವತಿ ದಂಪತಿಗೆ 2009ರಲ್ಲಿ ಜನಿಸಿದ ಹೆಣ್ಣು ಮಗು ಮಾನಸಿಕ ವೈಕಲ್ಯತೆಯಿಂದ ಬಳಲುತ್ತಿತ್ತು. ಮಗುವಿಗೆ ನಿರಂತರ ಆರೈಕೆಯ ಅಗತ್ಯವಿತ್ತು. ಅಕ್ಟೋಬರ್ 1, 2018 ರಂದು, ಪೋಷಕರು ಮಗುವನ್ನು ವಿರುಧುನಗರ ಜಿಲ್ಲೆಯ ಕಥಪ್ಪಸಾಮಿ ದೇವಸ್ಥಾನಕ್ಕೆ ಕರೆದೊಯ್ದು ತಂಪು ಪಾನೀಯದಲ್ಲಿ "ಟ್ಯಾಫ್ಗೋರ್" ರಸಗೊಬ್ಬರವನ್ನು (ಡೈಮೆಥೋಯೇಟ್, ಆರ್ಗನೋಫಾಸ್ಫರಸ್ ಕೀಟನಾಶಕ) ಬೆರೆಸಿ ನೀಡಿದ್ದರು. ಈ ವೇಳೆ ಮಗು ಅಸ್ವಸ್ಥಗೊಂಡಿತ್ತು.

ಸಾರ್ವಜನಿಕರು ಮಧ್ಯಪ್ರವೇಶಿಸಿ ಮಗುವನ್ನು ಆಸ್ಪತ್ರೆಗೆ ಸಾಗಿಸಿದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 6, 2018 ರಂದು ಮಗು ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ದಂಪತಿಯ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 342 (ಅಕ್ರಮವಾಗಿ ಬಂಧನದಲ್ಲಿರಿಸಿರುವುದು) ಮತ್ತು 302 (ಕೊಲೆ) ಅಡಿಯಲ್ಲಿ ಅಪರಾಧಗಳನ್ನು ಹೊರಿಸಲಾಗಿತ್ತು.

ವಿಚಾರಣಾ ನ್ಯಾಯಾಲಯವು ದಂಪತಿಗೆ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ಮಗುವನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದ ಅಪರಾಧಕ್ಕಾಗಿ ಅದಕ್ಕಿಂತ ಕಡಿಮೆ ಪ್ರಮಾಣದ ಶಿಕ್ಷೆಯನ್ನು ವಿಧಿಸಿತ್ತು. ಇದನ್ನು ದಂಪತಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರತ್ಯಕ್ಷದರ್ಶಿಗಳು ಪ್ರತಿಕೂಲ ಸಾಕ್ಷ್ಯವಾಗಿ ತಿರುಗಿದ್ದಾರೆ ಎಂದು ವಾದಿಸಿದ್ದರು. ಅಲ್ಲದೆ, ಒಳಾಂಗಗಳ ವರದಿಯಲ್ಲಿ (ವಿಸೆರಾ ವರದಿ) ವಿಷದ ಪತ್ತೆಯ ಕುರುಹು ಇಲ್ಲ ಎಂದು ವಾದಿಸಿದ್ದರು. ಪ್ರಾಸಿಕ್ಯೂಷನ್ ಸಾಂದರ್ಭಿಕ ಸಾಕ್ಷ್ಯಗಳನ್ನು ಮಾತ್ರ ಅವಲಂಬಿಸಿದೆ ಎಂದಿದ್ದರು.

ಆದರೆ, ನ್ಯಾಯ ಪೀಠವು ಈ ವಾದಗಳನ್ನು ತಿರಸ್ಕರಿಸಿತು. ಮಗುವನ್ನು ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ, ಪೋಷಕರು ಸ್ವತಃ ವೈದ್ಯರಿಗೆ ತಂಪು ಪಾನೀಯದಲ್ಲಿ ಟಾಫ್ಗೋರ್ ವಿಷವನ್ನು ಬೆರೆಸಿ ಮಗುವಿಗೆ ನೀಡಿರುವುದಾಗಿ ತಿಳಿಸಿರುವುದನ್ನು ಅದು ಗಮನಿಸಿತು.

ಆಸ್ಪತ್ರೆಯ ಅಪಘಾತ ನೋಂದಣಿಯಲ್ಲಿ ಮಗುವು ಸಂಕುಚಿತ ಪಾಪೆಯೊಂದಿಗೆ, ಅರೆ ಪ್ರಜ್ಞಾಹೀನವಾಗಿತ್ತು ಎಂದು ದಾಖಲಾಗಿತ್ತು. ಇದು ಆರ್ಗನೋಫಾಸ್ಫರಸ್ ವಿಷಕ್ಕೆ ಅನುಗುಣವಾಗಿದೆ ಎಂದು ನ್ಯಾಯಾಲಯವು ತಿಳಿಸಿತು.

"ಋಣಾತ್ಮಕ ವಿಸೆರಾ ವರದಿಯು ಪ್ರಾಸಿಕ್ಯೂಷನ್ ಪ್ರಕರಣಕ್ಕೆ ತನ್ನಷ್ಟಕ್ಕೇ ತೊಡಕಾಗುವುದಿಲ್ಲ, ಅದರಲ್ಲಿಯೂ ವಿಶೇಷವಾಗಿ ಸಂತ್ರಸ್ತರು ದೀರ್ಘಕಾಲದ ವೈದ್ಯಕೀಯ ಚಿಕಿತ್ಸೆಗೆ ಒಳಗಾದಾಗ ಹಾಗೂ ವಿಷ ಸೇವಿಸಿ ಚಿಕಿತ್ಸೆ ಪಡೆದ ನಂತರ ಸಂತ್ರಸ್ತ ವ್ಯಕ್ತಿಯು ಹಲವಾರು ದಿನಗಳವರೆಗೆ ಬದುಕುಳಿದ ಸಂದರ್ಭಗಳಲ್ಲಿ, ವಿಷವು ಸಾಯುವ ಮೊದಲು ದೇಹದಿಂದ ಚಯಾಪಚಯಗೊಳ್ಳಬಹುದು ಅಥವಾ ಹೊರಹಾಕಲ್ಪಡಬಹುದು" ಎಂದು ಪೀಠವು ಹೇಳಿತು.

ಅಂತಿಮವಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಪೀಠವು, ಮಗುವಿನ ಜನನವು ಪೋಷಕರ ಮೇಲೆ ತಪ್ಪಿಸಿಕೊಳ್ಳಲಾಗದ ಕಾನೂನಾತ್ಮಕ ಮತ್ತು ನೈತಿಕ ಜವಾಬ್ದಾರಿಯನ್ನು ಸೃಷ್ಟಿಸುತ್ತದೆ ಎಂದು ತಿಳಿಸಿತು.

Kannada Bar & Bench
kannada.barandbench.com