ತಮಿಳುನಾಡು ಆನ್‌ಲೈನ್ ಜೂಜಾಟ ಕಾಯಿದೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್: ರಮ್ಮಿ, ಪೋಕರ್ ರೀತಿಯ ಆಟಗಳಿಗಿಲ್ಲ ಅಂಕುಶ
ತಮಿಳುನಾಡು ಆನ್‌ಲೈನ್ ಜೂಜು ಮತ್ತು ಆಟಗಳ ಕಾಯಿದೆಯನ್ನು ಗುರುವಾರ ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ ಕಾಯಿದೆಯ ನಿರ್ಬಂಧ ಅವಕಾಶದ ಆಟಗಳಿಗೆ (ಅದೃಷ್ಟದ ಆಟಗಳಿಗೆ) ಮಾತ್ರ ಅನ್ವಯವಾಗುತ್ತದೆಯೇ ವಿನಾ ರಮ್ಮಿ ಪೋಕರ್ ರೀತಿಯ ಕೌಶಲ್ಯದಾಟಗಳಿಗೆ ಅಲ್ಲ ಎಂದು ಅದು ತೀರ್ಪಿತ್ತಿದೆ.
ಆನ್‌ಲೈನ್ ಆಟಗಳನ್ನು ಆಡುವ ಸಮಯ ನಿರ್ಬಂಧಿಸಲು ಅಥವಾ ಅವಕಾಶ ಮತ್ತು ಕೌಶಲ್ಯದ ಎರಡೂ ಆಟಗಳಿಗೆ ವಯಸ್ಸಿನ ಮಿತಿ ನಿಗದಿಪಡಿಸಲು ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಲು ಸ್ವತಂತ್ರವಾಗಿದ್ದರೂ, ಅದು ಅವಕಾಶದಾಟಗಳನ್ನು ಮಾತ್ರ ನಿಷೇಧಿಸಬಹುದೇ ವಿನಾ ಕೌಶಲ್ಯದಾಟಗಳನ್ನಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರಿದ್ದ ಪೀಠ ಹೇಳಿದೆ.
ರಮ್ಮಿ ಮತ್ತು ಪೋಕರ್ ರೀತಿಯ ಕೌಶಲ್ಯದಾಟಗಳನ್ನು ನಿಷೇಧಿಸಲು ಕಾಯಿದೆ ಬಳಸುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅಖಿಲ ಭಾರತ ಗೇಮಿಂಗ್ ಒಕ್ಕೂಟ ಮತ್ತು ವಿವಿಧ ಆನ್‌ಲೈನ್ ಗೇಮಿಂಗ್ ಕಂಪನಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.A
ಆನ್‌ಲೈನ್ ಗೇಮ್ ವ್ಯಸನ ಕುಟುಂಬಗಳನ್ನು ನಾಶ ಮಾಡಲಿದ್ದು ರಾಜ್ಯದ ಜನರನ್ನು ನಿಷೇಧಿಸಲು ಎಲ್ಲಾ ಬಗೆಯ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಕಾಯಿದೆ ಜಾರಿಗೆ ತರಲಾಗಿದೆ ಎಂದು ತಮಿಳುನಾಡು ಸರ್ಕಾರ ಈ ಹಿಂದೆ ಹೈಕೋರ್ಟ್‌ಗೆ ತಿಳಿಸಿತ್ತು.
ರಮ್ಮಿ, ಪೋಕರ್ ಸೇರಿದಂತೆ ಎಲ್ಲಾ ರೀತಿಯ ಆನ್‌ಲೈನ್ ಜೂಜು ಮತ್ತು ಅವಕಾಶದಾಟಗಳನ್ನು ನಿಷೇಧಿಸಲು ರಾಜ್ಯಪಾಲರ ಒಪ್ಪಿಗೆ ಪಡೆದು ಕಾಯಿದೆ ಜಾರಿಗೆ ತರಲಾಗಿತ್ತು.
ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಅಡ್ವೊಕೇಟ್ ಜನರಲ್ ಆರ್. ಷಣ್ಮುಗಸುಂದರಂ ವಾದ ಮಂಡಿಸಿದ್ದರು.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಕೀಲರಾದ ಸುಹಾನ್ ಮುಖರ್ಜಿ, ಅಭಿಷೇಕ್ ಮಂಚಂದ, ಅರುಣ್ ಮೋಹನ್, ಅಶ್ವಿನಿ ವೈದ್ಯಲಿಂಗಂ ಮತ್ತು ಪಿಎಲ್‌ಆರ್ ಚೇಂಬರ್‌ನ ಹರ್ಷ ಗುರ್ಸಹಾನಿ ಅವರು ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸನ್ನು ಪ್ರತಿನಿಧಿಸಿದ್ದರು.
ಇತರೆ ಅರ್ಜಿದಾರರ ಪರ ಹಿರಿಯ ವಕೀಲರಾದ ಆರ್ಯಂ ಸುಂದರಂ, ಮುಕುಲ್ ರೋಹಟಗಿ, ಸಜ್ಜನ್ ಪೂವಯ್ಯ ಹಾಗೂ ವಕೀಲೆ ದೀಪಿಕಾ ಮುರಳಿ ಕೂಡ ವಾದ ಮಂಡಿಸಿದರು.